ಸಪ್ತಸಾಗರ ವಾರ್ತೆ ವಿಜಯಪುರ, ಅ. 3:
ವಿಜಯಪುರ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ದಸರಾ ಹಬ್ಬದ ಮರು ದಿನವೇ ಗುಂಡಿನ ಸದ್ದು ಕೇಳಿ ಜನರು ಬೆಚ್ಚಿ ಬಿದ್ದಿದ್ದಾರೆ.
ದುರ್ಗಾದೇವಿ ಜಾತ್ರೆಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಎರಡು ಗುಂಪುಗಳ ಮದ್ಯೆ ಜಗಳ ಉಂಟಾಗಿದೆ. ಆಗ ಜಗಳ ತಾರಕಕ್ಕೇರಿದ್ದು, ರಾಮ ಅಂಕಲಗಿ ಎಂಬಾತ ಪರವಾನಿಗೆ ಹೊಂದಿದ ರಿವಾಲ್ವಾರ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ.
ನಿನ್ನೆ ಅಂಕಲಗಿ ಗ್ರಾಮದಲ್ಲಿ ದುರ್ಗಾದೇವಿ ಜಾತ್ರೆ ನಡೆದಿತ್ತು. ಈ ವೇಳೆ ಎರಡು ಗುಂಪುಗಳ ನಡುವೆ ಜಗಳವಾಗಿತ್ತು.
ಇಂದು ಜಗಳದ ಬಗ್ಗೆ ಮಾತುಕತೆ ಮಾಡಲು ಸಭೆ ಕರೆಯಲಾಗಿತ್ತು.
ಸಭೆ ಸಂದರ್ಭದಲ್ಲಿ ಒಂದು ಗುಂಪಿನಿಂದ ರಾಮ ಅಂಕಲಗಿ ಎಂಬಾತನ ಮೇಲೆ ಹಲ್ಲೆ ನಡೆಯಿತು ಎಂದು ಆರೋಪಿಸಲಾಗಿದೆ. ಈ ವೇಳೆ ರಾಮ ಅಂಕಲಗಿ ಪರವಾನಗಿ ಪಡೆದುಕೊಂಡಿದ್ದ ರಿವಾಲ್ವರ್ ನಿಂದ ಗುಂಡು ಹಾರಿಸಿದ್ದಾನೆ. ಈ ಸಂದರ್ಭದಲ್ಲಿ ಆ ಗುಂಡು ಮಹಾರಾಷ್ಟ್ರ ಮೂಲದ ಬಾಲಕಿಯೋರ್ವಳ ತೊಡೆಗೆ ತಾಗಿ ಪಾರಾಗಿದೆ. ಚಿಕಿತ್ಸೆಗಾಗಿ ಬಾಲಕಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಲಾಟೆ ವೇಳೆ ಬಟ್ಟೆ ಒಣಗಿಸಲು ಮನೆಯ ಮೇಲ್ಚಾವಣಿ ಮೇಲೆ ಬಾಲಕಿ ನಿಂತಿದ್ದಳು.
ಆ ಗುಂಡು ಬಾಲಕಿ ತೊಡೆಗೆ ತಾಗಿ ಬಹಳಷ್ಟು ರಕ್ತಸ್ರಾವವಾಗಿದೆ. ತಕ್ಷಣ ಗಾಯಗೊಂಡ ಬಾಲಕಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಬಾಲಕಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ.
ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಜಿಲ್ಲಾಸ್ಪತ್ರೆಗೆ ಎಎಸ್ಪಿ ರಾಮನಗೌಡ ಹಟ್ಟಿ ಡಿವೈಎಸ್ಪಿ ಟಿ.ಎಸ್. ಸುಲ್ಪಿ ಭೇಟಿ ನೀಡಿ ಬಾಲಕಿ ಸ್ಥಿತಿಯನ್ನು ವಿಚಾರಿಸಿದ್ದಾರೆ.
ಪ್ರಕರಣದ ಬಗ್ಗೆ ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ಗಾಳಿಯಲ್ಲಿ ಗುಂಡು: ಬಾಲಕಿಗೆ ಗಾಯ, ಆಸ್ಪತ್ರೆಗೆ ದಾಖಲು


