ಸಪ್ತಸಾಗರ ವಾರ್ತೆ, ವಿಜಯಪುರ, ಆ.25: ಮನರೇಗಾ ಯೋಜನೆಯ ಕಾಮಗಾರಿಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲು ಕೇಂದ್ರ ಸರ್ಕಾರವು ಹೊಸ ವಿಧಾನವಾಗಿ ಜಿಯೋ ಫೆನ್ಸಿಂಗ್ ಮೊಬೈಲ್ ಆ್ಯಪ್ ಮೂಲಕ ಜಿಪಿಎಸ್ ಅವಕಾಶ ಕಲ್ಪಿಸಿದೆ ಎಂದು ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿ ಡಾ. ವಿಜಯಕುಮಾರ ಆಜೂರ ಹೇಳಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಗೊಳ್ಳುವ ಕಾಮಗಾರಿಗಳಿಗೆ ಜಿಯೋ ಫೆನ್ಸಿಂಗ್ ಆ್ಯಪ್ ಮೂಲಕ ಅದರ ಪ್ರಕ್ರಿಯೆಗಳ ಬಗ್ಗೆ ಕರ್ತವ್ಯ ನಿರ್ವಹಿಸುವ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಏರ್ಪಡಿಸಿದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ 01 ರಿಂದ ಈ ಹೊಸ ಮೊಬೈಲ್ ಆಪ್ ದೇಶಾದ್ಯಂತ ಕಾರ್ಯಾರಂಭ ಮಾಡಲಿದೆ. ಈ ಮೊದಲು ಕಾಮಗಾರಿ ಪೋಟೋವನ್ನು ಜಿಪಿಎಸ್ ಆಧಾರವಾಗಿಟ್ಟುಕೊಂಡು ಕೇವಲ ಒಂದು ಸ್ಥಳದಲ್ಲಿ ಜಿಯೋ ಟ್ಯಾಗ್ ಆಪ್ ಮೂಲಕ ಮಾಡಲಾಗುತ್ತಿತ್ತು. ಪ್ರಸ್ತುತ ಹೊಸ ಆ್ಯಪ್ ಕಾಮಗಾರಿಯ ಸುತ್ತ 04 ದಿಕ್ಕುಗಳಲ್ಲಿ ಪೋಟೋ ಸಂಗ್ರಹ ಮಾಡಿಕೊಳ್ಳಬೇಕಾಗಿರುವದರಿಂದ ಯೋಜನೆಯನ್ನು ಹೆಚ್ಚು ಪರಿಣಾಮಕಾರಿ ಅನುಷ್ಠಾನ ಮಾಡಿದಂತಾಗುತ್ತಿದ್ದು, ಯೋಜನೆಯ ಫಲಾನುಭವಿಗಳು ಸಹ ಈ ಹೊಸ ಮಾದರಿಯ ಜಿಪಿಎಸ್ ಮಾಡಲು ಅಧಿಕಾರಿ-ಸಿಬ್ಬಂದಿ ಸಂಪೂರ್ಣ ಸಹಕಾರ ನೀಡಬೇಕು. ಈ ವಿಷಯದಲ್ಲಿ ಫಲಾನುಭವಿಗಳು ಗೊಂದಲಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ, ಇಲ್ಲಿ ಜಿಪಿಎಸ್ ಮಾತ್ರ ಬದಲಾಗಿದ್ದು, ಉಳಿದ ಅಂಶಗಳಲ್ಲಿ ಯಾವುದೇ ಬದಲಾವಣೆಯಿರುವದಿಲ್ಲ ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯತಿಯ ಎಮ್‌ಐಎಸ್ ಸಂಯೋಜಕಿ ಶಿಲ್ಪಾ ಗುತ್ತೇದಾರ, ಸಿಂದಗಿ ತಾಂತ್ರಿಕ ಸಂಯೋಜಕ ಶಿವಶರಣ ವಂದಗನೂರ, ಇಂಡಿ ತಾಂತ್ರಿಕ ಸಹಾಯಕ ಈರಣ್ಣ ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಎಲ್ಲಾ ತಾಲೂಕುಗಳ ಸಹಾಯಕ ನಿರ್ದೇಶಕರು, ತಾಂತ್ರಿಕ ಸಂಯೋಜಕರು, ತಾಲೂಕು ಎಮ್‌ಐಎಸ್ ಸಂಯೋಜಕರು, ತಾಂತ್ರಿಕ ಸಹಾಯಕರು ಹಾಗೂ ಬಿ.ಎಫ್.ಟಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮಗಾರಿಗಳ ಸಮರ್ಪಕ ಅನುಷ್ಠಾನಕ್ಕೆ ಜಿಯೋ ಫೆನ್ಸಿಂಗ್ ಮೊಬೈಲ್ ಆ್ಯಪ್ ಕಡ್ಡಾಯ- ಡಾ.ವಿಜಯಕುಮಾರ ಆಜೂರ
