ಮಾನವ ಜನ್ಮ ಸಾರ್ಥಕತೆಗೆ ಶರಣರ ತತ್ವ ಅಗತ್ಯ- ಚನ್ನಮಲ್ಲಿಕಾರ್ಜುನ ಶ್ರೀಗಳು

ಸಪ್ತಸಾಗರ ವಾರ್ತೆ, ವಿಜಯಪುರ, ಜು. 29:
ಮನುಷ್ಯ ಆಧ್ಯಾತ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದು ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸೋಮವಾರ ಸಂಜೆ ತಾಲೂಕಿನ ನಾಗಠಾಣ ಗ್ರಾಮದ ಉದಯಲಿಂಗೇಶ್ವರ ಮಹಾಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಪುರಾಣ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾನವ ಜನ್ಮ ಸಾರ್ಥಕತೆಗೆ ಬಸವಾದಿ ಶರಣರ ತತ್ವ, ಸದ್ವಿಚಾರ, ಧ್ಯಾನ, ತಪಸ್ಸು, ಉಪಾಸನೆ, ಭಜನೆ, ಸಂಕೀರ್ತನೆ ಮಾಡುವುದರಿಂದ ಪ್ರಾಪಂಚಿಕ ಜಂಜಡ ದೂರವಾಗಿ ಮನಸ್ಸಿಗೆ ನೆಮ್ಮದಿ ಸಿಗಲಿದೆ ಎಂದರು.
ಪುರಾಣಿಕರಾದ ಉಮರಾಣಿಯ ವೇದಮೂರ್ತಿ ಮುರುಗೇಂದ್ರ ಶಾಸ್ತ್ರಿಗಳು ಮಾತನಾಡಿ, ಮನುಷ್ಯನಿಗೆ ಆಚಾರ-ವಿಚಾರಗಳು, ಗುರುವಿನ ಅನುಗ್ರಹ ಬಹುಮುಖ್ಯ. ನಿತ್ಯ ಪುರಾಣ ಕೇಳುತ್ತಾ, ಭಕ್ತಿಮಾರ್ಗದ ಮೂಲಕ ಎಲ್ಲರೂ ಸುಂದರ ಬದುಕನ್ನು ಸಾಧಿಸಿಕೊಳ್ಳಬೇಕು ಎಂದು ಹೇಳಿದರು.
ಶಿಕ್ಷಕ ಸಾಹಿತಿ ಸಂತೋಷ ಬಂಡೆ ಮಾತನಾಡಿ, ಸುಂದರ ಬದುಕಿಗೆ ಆಧ್ಯಾತ್ಮಿಕ ಚಿಂತನೆ ಅಗತ್ಯ. ಆಧ್ಯಾತ್ಮಿಕ ಚಿಂತನೆಯು ಶಾಂತಿಯ ಬದುಕನ್ನು ಸಾಗಿಸಲು ಪ್ರೇರೇಪಿಸಿ, ಜೀವನದಲ್ಲಿ ಸಂತೋಷ, ನೆಮ್ಮದಿ ಹೊಂದಲು ಸಹಕರಿಸುತ್ತದೆ. ಪವಿತ್ರ ಶ್ರಾವಣ ಮಾಸ ಭಕ್ತಿಯ ವೈಭವದ ಪ್ರತೀಕವಾಗಿದ್ದು, ಮಹಾತ್ಮರ ಪುರಾಣ, ಪ್ರವಚನ ಶ್ರವಣ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಪ್ರಾಪ್ತವಾಗಲು ಸಾಧ್ಯ ಎಂದು ಹೇಳಿದರು.
ಪರಮಾನಂದ ದೇವರ ಪಟ್ಟದ ಪೂಜಾರಿ ಶರಣಬಸು ಪೂಜಾರಿ, ಗಾಯಕ ವಿರೂಪಾಕ್ಷಯ್ಯ ಗೌಡಗಾಂವ, ತಬಲಾ ವಾದಕ ಬಸವರಾಜ ಆಳಂದ, ಗ್ರಾಮಸ್ಥರಾದ ಅಶೋಕ ಕತ್ನಳ್ಳಿ, ರಾವುತಪ್ಪ ಬಿಜ್ಜರಗಿ, ವಿಶ್ವನಾಥ ಕಲಗೊಂಡ, ಶಂಕರಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಬಾಬು ಕೋಲಾರ, ಸುರೇಶ ಕತ್ನಳ್ಳಿ,ಮಹಾದೇವ ಲೋಣಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

Share