ಭೀಮಾ, ಸೀನಾ ನದಿ ಪ್ರವಾಹ ನಿರ್ವಹಣೆಗೆ ಸಮಿತಿ ರಚನೆ ಅಗತ್ಯ: ಶಾಸಕ ಯಶವಂತರಾಯಗೌಡ

ಸಪ್ತಸಾಗರ ವಾರ್ತೆ ವಿಜಯಪುರ, ಅ. 6 :
ಪ್ರತಿವರ್ಷ ಪ್ರವಾಹ ಬಂದಾಗಲೇ ಎಚ್ಚೆತ್ತುಕೊಳ್ಳುವುದಕ್ಕಿಂತ ಪ್ರಭಾವ ನಿರ್ವಹಣೆಗೆ ತುಂಗಭದ್ರಾ ಪ್ರವಾಹ ನಿರ್ವಹಣೆಯನ್ನು ಆಂಧ್ರಪ್ರದೇಶ ಹಾಗೂ ಕರ್ನಾಟಕ ಜಂಟಿಯಾಗಿ ನಿರ್ವಹಣೆ ಮಾಡುತ್ತದೆ. ಅದೇ ಮಾದರಿಯಲ್ಲಿ ಭೀಮಾ, ಸೀನಾ ನದಿ ವಿಚಾರದಲ್ಲೂ ಕರ್ನಾಟಕ ಹಾಗೂ ಮಹಾರಾಷ್ಟ್ರ ಜಂಟಿಯಾಗಿ ಪ್ರವಾಹ ನಿರ್ವಹಣೆ ಸಮಿತಿ ರಚಿಸುವುದು ತೀರಾ ಅಗತ್ಯ ಇದೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಅಭಿಪ್ರಾಯ ಪಟ್ಟರು.
ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿ ವರ್ಷ ಪ್ರವಾಹ ವೇಳೆಯಲ್ಲಿ ಮಹಾರಾಷ್ಟ್ರ ಹಾಗೂ ಕರ್ನಾಟಕದ ಭೀಮಾನದಿ ತೀರದ ಪ್ರದೇಶದಲ್ಲಿ ಆಗುತ್ತಿರುವ ಸಾವು ನೋವು, ಬೆಳೆ ಹಾನಿಯಂತಹ ಅಪಾರ ನಷ್ಟವನ್ನು ತಪ್ಪಿಸಲು ಪ್ರವಾಹ ನಿರ್ವಹಣೆ ಸಮಿತಿ ಅಗತ್ಯವಿದೆ ಎಂದು ಹೇಳಿದರು.
ಕೃಷ್ಣಾ, ಕಾವೇರಿ ಜತೆಗೆ ಉಪ ನದಿಗಳ ಬಗ್ಗೆ ಕೂಡಾ ಗಮನ ಹರಿಸಬೇಕು. ಮಹಾರಾಷ್ಟ್ರ ಸರ್ಕಾರ ಅನೇಕ ವಿಷಯದಲ್ಲಿ ನಿಯಮಾವಳಿ ಮೀರಿ ವರ್ತನೆ ಮಾಡಿದೆ. ಇದು ಸಹ ಪ್ರವಾಹ ಪರಿಸ್ಥಿತಿ ಗಂಭೀರ ರೂಪ ತಾಳುವಲ್ಲಿ ಕಾರಣವಾಗಿದೆ. ಪ್ರವಾಹ ನಿರ್ವಹಣೆ ಮಾಡುವುದು ಎಲ್ಲ ಸರ್ಕಾರಗಳ ಹೊಣೆಯಾಗಿದ್ದು, ಆಯಾ ರಾಜ್ಯಗಳ ನೀರಿನ ನಿರ್ವಹಣೆ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಬೇಕಾಗಿರುವುದು ಕೂಡಾ ಅಗತ್ಯವಾಗಿದೆ ಎಂದರು.
ಬಿಜೆಪಿ ನಾಯಕರು ಪ್ರವಾಹ ಪರಿಸ್ಥಿತಿ ಅವಲೋಕನ ಮಾಡುತ್ತಿರುವುದಕ್ಕೆ ಸ್ವಾಗತಿಸುತ್ತೇನೆ. ಅವರು ಕೇಂದ್ರ ಸರ್ಕಾರಕ್ಕೆ ಈ ಸಂಗತಿಯನ್ನು ಮನವರಿಕೆ ಮಾಡಿಕೊಟ್ಟು ಪರಿಹಾರವನ್ನು ಬಿಡುಗಡೆ ಮಾಡಿಸುವ ಕೆಲಸ ಮಾಡಿಸಲಿ. ಇಲ್ಲಿ ರಾಜ್ಯ ಸರ್ಕಾರ ಕಾಂಗ್ರೆಸ್ ಇದೆ ಎಂದು ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಮಲತಾಯಿ ಧೋರಣೆ ಅನುಸರಿಸಬಾರದು. ಈ ಹಿಂದೆ ರಾಯಚೂರು ಜಿಲ್ಲೆಯಲ್ಲಿ ಪ್ರವಾಹ ಉಂಟಾದ ವೇಳೆಯಲ್ಲಿ ಡಾ.ಮನಮೋಹನ್ ಸಿಂಗ್ ಬಂದು ಪರಿಶೀಲನೆ ಮಾಡಿದ್ದರು. ಅದೇ ರೀತಿಯಾಗಿ ಕೇಂದ್ರ ಸರ್ಕಾರದಿಂದ ಪರಿಹಾರ, ನೆರವು ಕೊಡಿಸುವ ಪ್ರಯತ್ನ ಮಾಡಲಿ. ರಾಜ್ಯಗಳ ಹಾಗೂ ಕೇಂದ್ರ ಸರ್ಕಾರಗಳು ಜಂಟಿ ಜವಾಬ್ದಾರಿ ಹೊತ್ತು, ಅದನ್ನು ಪರಿಹಾರ ಕಾರ್ಯವನ್ನು ಮಾಡಬೇಕಿದೆ ಎಂದರು.
ದೇಶ, ರಾಜ್ಯದಲ್ಲಿ ಅನೇಕ ಕಡೆಗಳಲ್ಲಿ ಮಳೆ ಹೆಚ್ಚಾಗಿದೆ. ಮಹಾರಾಷ್ಟ್ರದ ಭೀಮಾ, ಸೀನಾ ಹೆಚ್ಚಿನ ಪ್ರವಾಹ ಬಂದಿದೆ. ಸೀನಾ ನದಿಯಲ್ಲಿ ಹಿಂದೆಂದೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪ್ರವಾಹ ಬಂದಿರಲಿಲ್ಲ. ಆದರೆ ಈ ಬಾರಿಯ ಪ್ರವಾಹ ರೈತರ ಆತ್ಮಸ್ಥೈರ್ಯ ವನ್ನೇ ಕುಗ್ಗಿಸಿದೆ. ರಾಜ್ಯದಲ್ಲಿ ಈ ಪ್ರವಾಹ ಪರಿಸ್ಥಿತಿಯಿಂದಾಗಿ ಅಂದಾಜು ೧೦ ಲಕ್ಷ ಹೆಕ್ಟೇರ್‌ನಷ್ಟು ಬೆಳೆ ಹಾನಿಯಾಗಿದೆ. ಈ ಪೈಕಿ ೨.೨೭ ಲಕ್ಷ ಹೆಕ್ಟೇರ್ ಬೆಳೆ ವಿಜಯಪುರ ಜಿಲ್ಲೆಯಲ್ಲಿ ಹಾನಿಯಾಗಿದ್ದರೆ, ಇಂಡಿ ತಾಲೂಕಿನಲ್ಲಿ ೯೭ ಸಾವಿರ ಹೆಕ್ಟೇರ್‌ನಷ್ಟು ಬೆಳೆ ಹಾನಿಯಾಗಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ ಎಂದರು.
ಸೊನ್ನ ಬ್ಯಾರೆಜ್ ನಲ್ಲಿ ನೀರಿನ ಅವೈಜ್ಞಾನಿಕ ನಿರ್ವಹಣೆ ಆಗುತ್ತಿತ್ತು. ಈ ಬಾರಿ ಮುಂಚಿತವಾಗಿ ಎಲ್ಲ ಗೇಟ್ ಗಳನ್ನು ತೆರೆದು ಪ್ರವಾಹದ ಪ್ರಮಾಣದ ತಗ್ಗಿಸುವ ಯತ್ನ ಮಾಡಲಾಗಿದೆ ಎಂದು ತಿಳಿಸಿದರು.
ನಾಲ್ಕು ರಾಜ್ಯಗಳ ಜನಪ್ರತಿನಿಧಿಗಳು, ಅಧಿಕಾರಿಗಳು ಸಭೆ ಮಾಡಿ, ಪರಿಹಾರವನ್ನೂ ಸಿಎಂ ಘೋಷಿಸಿದ್ದಾರೆ. ಮೂಲಭೂತ ಸೌಕರ್ಯಗಳ ಹಾನಿಯಾಗಿದೆ. ಮಣ್ಣು ಗಟ್ಟಿ ಇರದ ಕಾರಣಕ್ಕಾಗಿ ರಸ್ತೆಗಳು ಹಾಗೂ ಮನೆಗಳು ಕುಸಿಯಲು ಪ್ರಮುಖ ಕಾರಣವಾಗಿದೆ ಎಂದು ಯಶವಂತರಾಗೌಡ ಪಾಟೀಲ ತಿಳಿಸಿದರು.
ನಾಲ್ಕು ಬಾರಿ ಜಿಲ್ಲಾ ಪಂಚಾಯತಿ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ನನಗೆ ಜನರು ಮತ ಹಾಕಿದ್ದಾರೆ. ಹೀಗಾಗಿ ಬೆಂಗಳೂರು, ವಿಜಯಪುರದಲ್ಲಿ ಕುಳಿತು ಯಶವಂತರಾಯಗೌಡರು ಎಲ್ಲಿದ್ದಾರೆ ಎಂದು ಕೇಳುವ ಬದಲಿಗೆ, ಕ್ಷೇತ್ರದ ಜನರು ಕೇಳಿದರೆ ಗೊತ್ತಾಗುತ್ತದೆ.
ನಾನು ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ನಾನು ನಮ್ಮ ಸರ್ಕಾರಕ್ಕೆ ಮನವಿ, ಒತ್ತಾಯ ಮಾಡುತ್ತೇನೆ. ಕೇಂದ್ರ ಸರ್ಕಾರದ ಪ್ರತಿನಿಧಿಗಳು ಈ ಕೆಲಸ ಮಾಡಲಿ, ಕೇಂದ್ರದ ಮೇಲೆ ಒತ್ತಡ ಹಾಕಲಿ ಎಂದರು.

ವಿಪತ್ತು ನಿರ್ವಹಣೆಗೆ ಪ್ರತ್ಯೇಕ ಇಲಾಖೆ ರಚಿಸಿ

ಪ್ರತಿ ಬಾರಿ ಪ್ರವಾಹ ಬಂದಾಗ ಕೃಷಿ ಸೇರಿದಂತೆ ವಿವಿಧ ಇಲಾಖೆಗಳ ಸಮೀಕ್ಷೆ ನಡೆಯಬೇಕು, ಆದರೆ ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಹುದ್ದೆಗಳೇ ಖಾಲಿ ಇವೆ, ಈ ಖಾಲಿ ಇರುವ ಹುದ್ದೆಗಳಿಂದ ಬೆಳೆ ಹಾನಿ ಸಮೀಕ್ಷೆಗೂ ಸಹ ತೊಡಕಾಗುವ ಸಾಧ್ಯತೆ ಇದೆ, ಪ್ರತಿ ಬಾರಿ ವಿಪತ್ತುಗಳು ಸಂಭವಿಸಿದಾಗ ಕೃಷಿ ಇಲಾಖೆಯನ್ನೇ ಅವಲಂಬಿಸುವುದನ್ನು ಬಿಟ್ಟು ವಿಪತ್ತು ನಿರ್ವಹಣೆಗಾಗಿಯೇ ಪ್ರತ್ಯೇಕ ಇಲಾಖೆಯೇ ರಚನೆ ಮಾಡಬೇಕು, ವಿಪತ್ತು ನಿರ್ವಹಣಾ ವಿಷಯವಾಗಿ ಕಾರ್ಯನಿರ್ವಹಿಸುವ ಕೃಷಿ, ತೋಟಗಾರಿಕೆ, ಕಂದಾಯ ಮೊದಲಾದ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಬೇಕು ಎಂದು ಸರ್ಕಾರಕ್ಕೆ ಯಶವಂತರಾಯಗೌಡ ಪಾಟೀಲ ಒತ್ತಾಯಿಸಿದರು.

ಸಿಎಂ ಅಧಿಕಾರ ಹಂಚಿಕೆ ವರಿಷ್ಠರಿಗೆ ಗೊತ್ತು
ಅಧಿಕಾರ ಹಂಚಿಕೆ ಬಗ್ಗೆ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಅವರಿಗೆ ಮಾತ್ರ ಗೊತ್ತು. ಬೇರೆಯವರು ಏನೇ ಹೇಳಿದರೂ ಅದು ಸಂಬಂಧ ಪಡುವುದಿಲ್ಲ ಎಂದು ನುಡಿದರು.

Share this