ಸಪ್ತಸಾಗರ ವಾರ್ತೆ ವಿಜಯಪುರ, ಆ. 28:
ಗಣೇಶ ಹಬ್ಬವು ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಅರಿವು, ತಂಡದ ಭಾವನೆ ಮತ್ತು ಆಧ್ಯಾತ್ಮಿಕತೆಯನ್ನು ಬೆಳೆಸುತ್ತದೆ ಎಂದು ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ ಹೇಳಿದರು.
ಬುಧವಾರ ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಗಣೇಶ ಚತುರ್ಥಿ ಹಬ್ಬದ ಆಚರಣೆಯನ್ನು ಉದ್ಧೇಶಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಈ ಹಬ್ಬವು ಆಧ್ಯಾತ್ಮಿಕತೆ, ಸಾಂಸ್ಕೃತಿಕ ಪರಂಪರೆ ಮತ್ತು ಶೈಕ್ಷಣಿಕ ತಿಳುವಳಿಕೆಯನ್ನು ಒದಗಿಸುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರಾದ ಲೋಕಮಾನ್ಯ ಬಾಲ ಗಂಗಾಧರ ತಿಲಕ್‌ರವರು ಭಾರತದಲ್ಲಿ ಈ ಹಬ್ಬವನ್ನು ಸಾಮೂಹಿಕ ಚಳುವಳಿ ಮತ್ತು ಏಕತೆಯ ಪ್ರತೀಕವಾಗಿ ಆಚರಿಸುವ ಪದ್ದತಿ ಆರಂಭಿಸಿದ್ದಾರೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ಸುರೇಶಗೌಡ ಬಿರಾದಾರ ಮಾತನಾಡಿ, ಬುದ್ಧಿವಂತಿಕೆ, ಸಮೃದ್ಧಿ ಮತ್ತು ಹೊಸ ಆರಂಭಗಳ ದೇವರಾದ ಗಣೇಶನನ್ನು ವಿದ್ಯೆ ಬುದ್ಧಿ ಕೊಡುವ ವಿಘ್ನ ನಿವಾರಕ ಎಂದು ಪೂಜಿಸಲಾಗುತ್ತದೆ ಎಂದು ಹೇಳಿದರು.
ಕಾರ್ಯದರ್ಶಿ ಸುನಂದಾ ಹುಣಶ್ಯಾಳ, ಶಿಕ್ಷಕರಾದ ರಾಘು ಮೊಗಳ, ಸಚೀನ ಅವಟಿ, ಸಿದ್ದು ರತ್ನಾಕರ, ಅಲ್ಲಾಭಕ್ಷ ಇನಾಮದಾರ, ರಾಜಶೇಖರ ಶಿರಶ್ಯಾಡ, ಲಕ್ಷ್ಮೀ ಮಸೂತಿ, ಸ್ನೇಹಾ ಹಕ್ಕಿ, ಶ್ರುತಿ ಪೂಜಾರಿ, ರೇಣುಕಾ ಭಜಂತ್ರಿ, ಸಂಗೀತಾ ಅಂಕಲಗಿ ಸೇರಿದಂತೆ ಶಾಲಾ ಮಕ್ಕಳು ಪಾಲ್ಗೊಂಡಿದ್ದರು.
ಸಾಂಸ್ಕೃತಿಕ ಪರಂಪರೆ-ಶೈಕ್ಷಣಿಕ ತಿಳಿವಳಿಕೆ ಹೇಳುವ ಗಣೇಶ ಹಬ್ಬ: ಶಂಕರ ಹುಣಶ್ಯಾಳ
