ಸಾಂಸ್ಕೃತಿಕ ಪರಂಪರೆಯ ಪ್ರತೀಕ ಗಣೇಶ ಹಬ್ಬ: ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ

ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 14: ಗಣೇಶ ಹಬ್ಬವು ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಅರಿವು, ಆಧ್ಯಾತ್ಮಿಕತೆ ಹಾಗೂ ಪರಿಸರ ಪ್ರಜ್ಞೆಯನ್ನು ಬೆಳೆಸುವ ಮಹತ್ವದ ಆಚರಣೆಯಾಗಿದೆ ಎಂದು ಉದಯಲಿಂಗೇಶ್ವರ ಮಠದ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಗಣೇಶ ಮೂರ್ತಿ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಗಣೇಶೋತ್ಸವವು ವಿದ್ಯಾರ್ಥಿಗಳಿಗೆ ನಮ್ಮ ಸಾಂಸ್ಕೃತಿಕ ಪರಂಪರೆಯ ಪರಿಚಯದ ಜೊತೆಗೆ ಆಧ್ಯಾತ್ಮಿಕ ಮೌಲ್ಯಗಳನ್ನು ತಿಳಿಸಿಕೊಡುತ್ತದೆ. ಇಂತಹ ಆಚರಣೆಗಳು ಮಕ್ಕಳಲ್ಲಿ ಶೈಕ್ಷಣಿಕ ತಿಳುವಳಿಕೆಯೊಂದಿಗೆ ಸಂಸ್ಕೃತಿ ಹಾಗೂ ಸಂಪ್ರದಾಯಗಳ ಬಗ್ಗೆ ಗೌರವ ಬೆಳೆಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.
ಮುಖ್ಯ ಅತಿಥಿ ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಇಂದಿನ ಪೀಳಿಗೆಗೆ ಗಣೇಶ ಹಬ್ಬವು ಸಂಸ್ಕೃತಿ ಹಾಗೂ ಪರಿಸರ ಪ್ರಜ್ಞೆ ಮೂಡಿಸುವ ವೇದಿಕೆಯಾಗಿದೆ. ಹಬ್ಬದ ಸಂದರ್ಭದಲ್ಲಿ ಆಡಂಬರಕ್ಕೆ ಆದ್ಯತೆ ನೀಡದೆ, ಸಹಬಾಳ್ವೆ ಮತ್ತು ಭಕ್ತಿಯೇ ಅದರ ಮೂಲ ಆಶಯ ಎಂಬುದನ್ನು ಅರಿತು ಆಚರಿಸುವ ಜವಾಬ್ದಾರಿ ಯುವ ಪೀಳಿಗೆಯ ಮೇಲಿದೆ ಎಂದರು.
ಮುಖ್ಯ ಶಿಕ್ಷಕ ಸುರೇಶಗೌಡ ಬಿರಾದಾರ ಮಾತನಾಡಿ, ಬುದ್ಧಿವಂತಿಕೆ, ಸಮೃದ್ಧಿ ಹಾಗೂ ಹೊಸ ಆರಂಭದ ಸಂಕೇತವಾಗಿ ಗಣೇಶನನ್ನು ಪೂಜಿಸಲಾಗುತ್ತದೆ. ವಿದ್ಯೆ ಮತ್ತು ಬುದ್ಧಿಯನ್ನು ಕರುಣಿಸುವ ವಿಘ್ನನಿವಾರಕನಾಗಿ ಗಣೇಶನ ಆರಾಧನೆ ನಡೆಯುತ್ತದೆ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಣೇಶ ಹಬ್ಬವು ಯುವ ಪೀಳಿಗೆಯನ್ನು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ಬೆಸೆಯುವ ಪ್ರಮುಖ ಹಬ್ಬವಾಗಿದೆ. ಇದು ಮಕ್ಕಳಲ್ಲಿ ಹೊಸ ಭರವಸೆ, ಧನಾತ್ಮಕ ಚಿಂತನೆ ಹಾಗೂ ಮಾನಸಿಕ ಧೈರ್ಯವನ್ನು ತುಂಬುತ್ತದೆ ಎಂದರು.
ಕಾರ್ಯದರ್ಶಿ ಸುನಂದಾ ಹುಣಶ್ಯಾಳ, ಶಿಕ್ಷಕರಾದ ರಾಘು ಮೊಗಳ, ಸಿದ್ದು ರತ್ನಾಕರ, ಈರಣ್ಣ, ಜಯಶ್ರೀ ಬಂಗಾರಿ, ಲಕ್ಷ್ಮೀ ಮಸೂತಿ, ಸ್ನೇಹಾ ಹಕ್ಕಿ, ಶ್ರುತಿ ಪೂಜಾರಿ, ರೇಣುಕಾ ಭಜಂತ್ರಿ, ರಿಜ್ವಾನ್ ಬೇಗಂ ತಾಂಬೋಳಿ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಗಣೇಶ ಮೂರ್ತಿ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.

Share this