ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 3: ‘ಅಡ್ಡಡ್ಡ ಮಳಿ ಬಂದು..ದೊಡ್ಡದೊಡ್ಡ ಕೆರೆ ತುಂಬಿ..ಗೊಡ್ಡುಗಳೆಲ್ಲ ಹೈನಾಗಿ..ಜೋಕುಮಾರ ಮಳಿ ತಂದ’..ಎಂಬ ಜೋಕುಮಾರನ ಬಗ್ಗೆ ಮಹಿಳೆಯರು ಪದಗಳ ಮೂಲಕ ಹಾಡುತ್ತಾ, ಉತ್ತರ ಕರ್ನಾಟಕದಲ್ಲಿ ಗಣಪತಿ ಹೋದ ಮಾರನೇ ದಿನ ಜನ್ಮ ತಾಳುವ ಜೋಕುಮಾರ ರೈತರ ಪಾಲಿಗೆ ವರವಾಗಿ ಪರಿಣಮಿಸಿದ್ದಾನೆ. ತಾಲೂಕಿನ ನಾಗಠಾಣ ಗ್ರಾಮದಲ್ಲಿ ಬಹಳ ವರ್ಷಗಳಿಂದ ಈ ಜೋಕುಮಾರನ ಹಬ್ಬ ಚಾಲ್ತಿಯಲ್ಲಿದೆ.
ಮಳೆಗಾಗಿ ಜೋಕುಮಾರನನ್ನು ನೆನೆದು ಪ್ರಾರ್ಥಿಸುವ ಮಹಿಳೆಯರು ಜೋಕುಮಾರ ಮೂರ್ತಿಯನ್ನು ಏಳು ದಿನಗಳ ಕಾಲ ಗ್ರಾಮದಲ್ಲಿನ ಮನೆ ಮನೆಗೆ ಹೊತ್ತು ಸಂಚರಿಸುತ್ತಾರೆ. ಗ್ರಾಮದ ಪಾರ್ವತಿ, ಸುಶೀಲಾ, ಮೀನಾಕ್ಷಿ, ಬನ್ನೇವ್ವ ಅವರು ಹೆಡಿಗೆಯಲ್ಲಿ ಜೋಕುಮಾರನನ್ನು ಹೊತ್ತು ಊರಲ್ಲಿ ತೆರಳಿ ಆತನ ಲೀಲಾವಳಿ ಹಾಡುತ್ತ ಬೆಣ್ಣೆ, ಎಣ್ಣೆ , ಉಪ್ಪು, ಹುಣಸೆಕಾಯಿ, ಜೋಳ, ಅಕ್ಕಿ ಮತ್ತಿತರ ಧಾನ್ಯ ಹಾಕಿಸಿಕೊಳ್ಳುವ ದೃಶ್ಯ ಗ್ರಾಮೀಣ ಸಂಸ್ಕೃತಿಯನ್ನು ಜೀವಂತವಾಗಿರಿಸುವಂತೆ ಇತ್ತು. ಇದನ್ನು ಚಿಣ್ಣರು, ಯುವಕರು, ರೈತರು ನೋಡಿ ಕೇಳಿ ಆನಂದಿಸುವದು ವಿಶೇಷ.
ಅಗಲ ಮುಖ, ಮುಖಕ್ಕೆ ತಕ್ಕಂತೆ ಕಣ್ಣು, ಚೂಪಾದ ಹುರಿಮೀಸೆ, ತೆರೆದ ಬಾಯಿ, ಗಿಡ್ಡ ಕಾಲುಗಳು, ಕೈಯಲ್ಲಿ ಸಣ್ಣದಾದ ಕತ್ತಿಯುಳ್ಳ ಮಣ್ಣಿನ ಜೋಕುಮಾರ ಮೂರ್ತಿಯನ್ನು ಬೇವಿನ ತಪ್ಪಲಲ್ಲಿ ಮುಚ್ಚಿಕೊಂಡು ಹೆಣ್ಣು ಮಕ್ಕಳು ಬಿದಿರಿನ ಬುಟ್ಟಿಯಲ್ಲಿ ಹೊತ್ತು ತರುತ್ತಾರೆ.
ಜೋಕುಮಾರನ ಹುಟ್ಟು, ಸಾವು, ಪುಂಡತನ, ಕಾಮ ಹೀಗೆ ಇತರೆ ಅವನ ಸ್ವಭಾವಗಳ ಕುರಿತಾದ ಹಾಡುಗಳನ್ನು ರಾಗ ಬದ್ಧವಾಗಿ ಹಾಡುತ್ತಾರೆ. ಮನೆ ಮುಂದೆ ಬಂದ ಜೋಕುಮಾರನಿಗೆ ಮನೆಯವರು ಮನೆಯಲ್ಲಿರುವ ಚಿಕ್ಕಾಡ, ಗುಂಗಾಡ(ಸೊಳ್ಳೆ), ತಿಗಣೆಗಳೆಲ್ಲವೂ ನಿನ್ನೊಂದಿಗೆ ಹೋಗಲಿ ಎಂದು ಇವನಿಗೆ ಮೆಣಸಿನ ಕಾಯಿ, ಉಪ್ಪು ನೀಡುತ್ತಾರೆ. ಅಲ್ಲದೇ ಜೋಳ, ಆಹಾರ ಪದಾರ್ಥಗಳನ್ನು ನೀಡಿ ಪೂಜಿಸುತ್ತಾರೆ. ಉತ್ತಮ ಮಳೆ ನೀಡಿ ಸಮೃದ್ಧವಾದ ಬೆಳೆ ನೀಡೆಂದು ಬೇಡಿಕೊಳ್ಳುತ್ತಾರೆ.
‘ಇಂದಿನ ಆಧುನಿಕತೆಯ ಜೀವನ ಶೈಲಿಯಲ್ಲಿ ಹಬ್ಬಗಳ ಆಚರಣೆಗಳಲ್ಲಿ ಶ್ರದ್ಧೆ ಕಡಿಮೆಯಾಗುತ್ತಿರುವುದು ವಿಷಾದಕರ. ಪ್ರಸ್ತುತ ದಿನಗಳಲ್ಲಿ ಜೋಕುಮಾರ ಹಬ್ಬ ವಿಶಿಷ್ಟ ಆಚರಣೆಯಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಇಂದಿಗೂ ಜೀವಂತವಾಗಿದೆ’ ಎಂದು ಗ್ರಾಮದ ಶಿಕ್ಷಕ ಸಂತೋಷ ಬಂಡೆ ಹೇಳುತ್ತಾರೆ.
‘ಕಲೆ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಇಂದಿನ ಆಧುನಿಕತೆಯಲ್ಲಿಯೂ ಸಹ ನಮ್ಮ ಗ್ರಾಮದಲ್ಲಿ ಉಳಿಸಿಕೊಂಡು ಬೆಳೆಸಿಕೊಂಡು ಬರುತ್ತಿರುವುದು ವಿಶೇಷ’ ಎನ್ನುತ್ತಾರೆ ಗೃಹಿಣಿ ಭುವನೇಶ್ವರಿ ಬಂಡೆ.
ಗಣಪ ಹೋದ, ಜೋಕುಮಾರ ಬಂದ…
