ಸಪ್ತಸಾಗರ ವಾರ್ತೆ, ವಿಜಯಪುರ, ಜ. 14: ಭಾರತದ ಅನೇಕ ಹಬ್ಬಗಳಲ್ಲಿ ಮಕರ ಸಂಕ್ರಾಂತಿಯು ವಿಶೇಷ ಹಬ್ಬವೆನಿಸಿದೆ. ಚಳಿಗಾಲ ಮುಗಿದು ಬೇಸಿಗೆಯ ಮುನ್ಸೂಚನೆಯ ಹಬ್ಬವಾಗಿ ಋತುಗಳ ಬದಲಾವಣೆಯನ್ನು ಸೂಚಿಸುತ್ತದೆ. ಭಾರತದ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆದರೂ ಕರ್ನಾಟಕದಲ್ಲಿ ಮಕರ ಸಂಕ್ರಮಣ ಹಬ್ಬವೆಂದು ಪ್ರಸಿದ್ಧಿ ಪಡೆದಿದೆ. ರೈತರಿಗೆ ಇದು ಸುಗ್ಗಿಯ ಹಬ್ಬವೆನಿಸಿದೆ ಎಂದು ಮಕ್ಕಳನ್ನುದ್ದೇಶಿಸಿ ವೇದ ಅಕಾಡೆಮಿಯ ನಿರ್ದೇಶಕಿ ಶಿವಲೀಲಾ ಕೆಲೂರ ಅವರು ಹೇಳಿದರು.
ನಗರದ ಹೊರವಲಯದ ಇಟ್ಟಂಗಿಹಾಳ ರಸ್ತೆಯಲ್ಲಿರುವ ವೇದ ಅಕಾಡೆಮಿಯಲ್ಲಿ ಮಕರ ಸಂಕ್ರಮಣ ಹಬ್ಬವನ್ನು ಮಕ್ಕಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು.
ಮಕ್ಕಳಿಗೆ ಬೇರೆ ಬೇರೆ ರಾಜ್ಯಗಳ ವೇಷಭೂಷಣ ಹಾಕಲಾಗಿತ್ತು. ಮಕ್ಕಳಿಗೆ ಮಕರ ಸಂಕ್ರಾಂತಿಯ ಸಂಪೂರ್ಣ ಕಲ್ಪನೆ ಕೊಡುವ ದೃಷ್ಟಿಯಿಂದ ಮಕರ ಸಂಕ್ರಮಣದ ಪೂರ್ಣ ಚಿತ್ರಣವನ್ನು ನೈಜವಾಗಿ ಹಾಕಲಾಗಿತ್ತು. ಕಬ್ಬು, ಕಡಲೆ, ತರಕಾರಿಗಳ ಮತ್ತು ಹೂಗಳಿಂದ ಅಲಂಕೃತಗೊಂಡ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲ ಮಧ್ವಪ್ರಸಾದ ಜಿ.ಕೆ, ಮುಖ್ಯೋಪಾಧ್ಯಾಯನಿ ರಶ್ಮಿ ಕವಟಗಿಮಠ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. ಅಂಬುಜಾ ದೇಶಪಾಂಡೆ ಸ್ವಾಗತಿಸಿದರು. ರೋಹಿಣಿ ಮಾನೆ ನಿರೂಪಿಸಿದರು.
ವೇದ ಅಕಾಡೆಮಿಯಲ್ಲಿ ವಿಜೃಂಭಣೆಯ ಮಕರ ಸಂಕ್ರಾಂತಿ ದಿನಾಚರಣೆ


