ನಾಗಠಾಣದಲ್ಲಿ ಸಂಭ್ರಮದ ಚೌಡೇಶ್ವರಿ ದೇವಿಯ ಜಾತ್ರೆ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 16:
ಬಾದ್ಮಿ ಅಮಾವಾಸ್ಯೆ ನಿಮಿತ್ತ ಶನಿವಾರದಂದು ತಾಲೂಕಿನ ನಾಗಠಾಣ ಗ್ರಾಮದಲ್ಲಿ ಶ್ರೀ ಚೌಡೇಶ್ವರಿ ಜಾತ್ರಾ ಮಹೋತ್ಸವ ಬಹು ವಿಜೃಂಭಣೆಯಿಂದ ಜರುಗಿದ್ದು, ದೇವಿಯ ದರ್ಶನಕ್ಕೆ ಭಕ್ತಸಾಗರವೇ ಹರಿದು ಬಂದಿತ್ತು.
ಶುಕ್ರವಾರ ಸಂಜೆ ಭಕ್ತ ಮಹಿಳೆಯರು ಅಂಬಲಿ ಬಿಂದಿಗೆ ಹೊತ್ತು, ಬಾಸಿಂಗ, ಕಳಸದ ಮೆರವಣಿಗೆಯು ಗುಡಿ ತಲುಪಿ, ಅಲ್ಲಿ ಎಲ್ಲರೂ ಅಂಬಲಿ ಅರ್ಪಿಸಿ, ಪುನೀತರಾದರು.
ಚೌಡೇಶ್ವರಿ ದೇವಿಯ ಮುಖವಾಡ ಹೊತ್ತವರು ಅಪಾರ ಸಂಖ್ಯೆಯ ಭಕ್ತರು, ಬಾಜಾ-ಭಜಂತ್ರಿ, ಡೊಳ್ಳು ವಾದ್ಯಗಳು ಹಾಗೂ ಭಕ್ತರ ಜಯಘೋಷಗಳೊಂದಿಗೆ ಇಡೀ ಗ್ರಾಮದ ಭಕ್ತರ ಮನೆ ಮನೆಗೆ ಭೇಟಿ ನೀಡಿ,ಕಾಯಿ-ಕರ್ಪೂರದೊಂದಿಗೆ ನೈವೇದ್ಯ ಸ್ವೀಕರಿಸಿ, ಉಡಿ ತುಂಬಿಕೊಂಡು ಆಶೀರ್ವದಿಸುವ ದೃಶ್ಯ ವಿಶೇಷವಾಗಿತ್ತು. ಮೆರವಣಿಗೆಯಲ್ಲಿ ಮಹಿಳೆಯರು ಆರತಿ ಬೆಳಗಿ ಭಕ್ತಿಭಾವ ವ್ಯಕ್ತಪಡಿಸಿದರೆ, ಯುವಕರು ವಾದ್ಯಗಳೊಂದಿಗೆ ಉತ್ಸವದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು. ಕುಂಬಾರ ಮನೆತನದ ಮಹಿಳೆಯರು ಬಜಾರಕ್ಕೆ ಗುಡಿಯಿಂದ ಕಿಚಡಿ ತರುವರು. ಅಲ್ಲಿ ಚೌಡೇಶ್ವರಿಯು ಔಡಲ ಕಟ್ಟಿಗೆಯ ಹಂದರದಲ್ಲಿ ಮಜ್ಜಿಗೆ ಕಡಿಯುವಳು. ತದನಂತರ ಅಲ್ಲಿಂದ ಕುಣಿಯುತ್ತಾ ಗುಡಿಗೆ ಮರಳಿ ಬರುವದು ಪ್ರತಿವರ್ಷದ ಸಂಪ್ರದಾಯವಾಗಿದೆ.
ಚೌಡೇಶ್ವರಿಯು ಅತ್ಯಂತ ಶಕ್ತಿಶಾಲಿ ದೇವತೆಗಳಲ್ಲಿ ಒಬ್ಬಳಾಗಿದ್ದು, ಈಕೆಯ ಬಳಿ ಏನೇ ಬೇಡಿಕೊಂಡರೂ ಅದು ಈಡೇರುತ್ತದೆ ಎನ್ನುವ ನಂಬಿಕೆ ನಾಗಠಾಣ ಗ್ರಾಮದ ಭಕ್ತರಲ್ಲಿ ಈಗಲೂ ಜನಜನಿತವಾಗಿದೆ.
ಕುಂಬಾರ ಮನೆತನದ ಭೀಮರಾಯ, ಅಮೋಘಸಿದ್ದ, ಪವಾಡೇಶ, ಶಿವಾನಂದ, ಅಮೋಘಸಿದ್ದ, ಮಲ್ಲು, ಶರಣು,
ಸೋಮನಿಂಗ,ಶ್ರೀಶೈಲ, ಸಿದ್ದು, ಪುಂಡಲೀಕ, ವಿಠಲ,ಬಾಬು,
ಮಹಾಂತೇಶ,ನರಸಪ್ಪ, ಹನಮಂತ, ಬಸವರಾಜ, ಪಿಂಟು, ಗಿರಮಲ್ಲ, ಚವಡಪ್ಪ, ಅರವಿಂದ ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.

Share this