ಸಪ್ತಸಾಗರ ವಾರ್ತೆ ವಿಜಯಪುರ, ಸೆ. 20 :
ಮೈಸೂರು ದಸರಾ ಹಬ್ಬದ ಮಾದರಿಯಲ್ಲಿಯೇ ವೈಭವಯುತವಾಗಿ ತಾಂಬಾದಲ್ಲಿ ಕಳೆದ ೫೪ ವರ್ಷಗಳಿಂದಲೂ ಶಿಕ್ಷಣಪ್ರೇಮಿ ದಿ.ಫೂಲಸಿಂಗ್ ಚವ್ಹಾಣ ಅವರ ನೇತೃತ್ವದಲ್ಲಿ ದಸರಾ ಆಚರಿಸಿಕೊಂಡು ಬರಲಾಗುತ್ತಿದ್ದು, ಈ ಪರಂಪರೆಯನ್ನು ಮಾಜಿ ಶಾಸಕ ಹಾಗೂ ಅವರ ಪುತ್ರ ಡಾ.ದೇವಾನಂದ ಚವ್ಹಾಣ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಈ ಬಾರಿಯೂ ಸಹ ತಾಂಬಾದಲ್ಲಿ ಸೆ. ೨೨ ರಿಂದ ಅ. ೨ ರವರೆಗೆ ನವರಾತ್ರಿ ಉತ್ಸವ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಮಾಜಿ ಶಾಸಕ ಡಾ. ದೇವಾನಂದ ಚವ್ಹಾಣ, ನಾಡದೇವಿ ಉತ್ಸವಕ್ಕೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಈ ಬಾರಿ ವಿಭಿನ್ನ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ನಾಡದೇವಿಯ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ನಡೆಯಲಿದ್ದು, ೨೦೦೧ ಮಹಿಳೆಯರು ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಭಾಗಿಯಾಗಲಿದ್ದಾರೆ. ಯಕ್ಷಗಾನ, ನಾಸಿಕ್ ಡೋಲು, ಬೃಹತ್ ಬೊಂಬೆಗಳು, ಲೇಝಿಮ್ ನಿನಾದ, ನವಿಲು ಕುಣಿತ, ಕರಡಿ ಕುಣಿತ, ಕೀಲುಕುದುರೆ ಕುಣಿತ, ಜಗ್ಗಲಿಗೆ ಸೇರಿದಂತೆ ಹಲವಾರು ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿದ್ದು, ಮೈಸೂರು ದಸರಾ ಮಾದರಿಯಲ್ಲಿಯೇ ವೈಭವದ ದಸರಾ ನಡೆಯಲಿದೆ ಎಂದು ಚವ್ಹಾಣ ವಿವರಿಸಿದರು.
ಸೆ.೨೨ ರಂದು ಕಾತ್ರಾಳ ಗುರುದೇವಾಶ್ರಮದ ಶ್ರೀ ಅಮೃತಾನಂದ ಸ್ವಾಮೀಜಿ, ಖ್ಯಾತ ಜೋತಿಷಿ ಗಿರಿಧರ ರಾಜು ಅವರ ಸಾನ್ನಿಧ್ಯದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ. ಎಂ.ಬಿ. ಪಾಟೀಲ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗುರುಮಿಠಕಲ್ ಶಾಸಕ ಶರಣಗೌಡ ಕಂದಕೂರ ಕುಂಭಮೇಳಕ್ಕೆ ಚಾಲನೆ ನೀಡಲಿದ್ದಾರೆ. ಶಾಸಕ ಭೀಮಾ ನಾಯಕ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಶಾಸಕ ಅಶೋಕ ಮನಗೂಳಿ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಯಶವಂತರಾಯಗೌಡ ಪಾಟೀಲ ಆಗಮಿಸಲಿದ್ದು, ಅನ್ನ ದಾಸೋಹಕ್ಕೆ ಸಿಂದಗಿ ಶಾಸಕ ರಮೇಶ ಭೂಸನೂರ ಚಾಲನೆ ನೀಡಲಿದ್ದಾರೆ. ಹಲವಾರು ಸಾಧಕರಿಗೆ ಗೌರವ ಸನ್ಮಾನ ನೆರವೇರಿಸಲಾಗುವುದು ಎಂದರು.
ಸೆ.೨೩ ರಂದು ಬೆಳಿಗ್ಗೆ ಖೋಖೋ ಪಂದ್ಯಾವಳಿ, ಅದೇ ದಿನ ರಾತ್ರಿ ೮ ಕ್ಕೆ ಕೋಲಾಟ, ಸೆ.೨೪ ರಂದು ಬೆಳಿಗ್ಗೆ ಖೋಖೋ, ರಾತ್ರಿ ೮ ಕ್ಕೆ ಜಾನಪದ ಜಾತ್ರೆ ನಡೆಯಲಿದೆ. ಸೆ.೨೬ ರಂದು ಲೋಕ ಕಲ್ಯಾಣಾರ್ಥವಾಗಿ ನವಚಂಡಿ ಹೋಮ, ನಾಡದೇವಿ ತೆರೆಬಂಡಿ ವೈಭವ ನಡೆಯಲಿದೆ. ಅದೇ ದಿನ ರಾತ್ರಿ ೮ ಕ್ಕೆ ಕರಿಮಣಿ ಮಾಲೀಕ ನೀನಲ್ಲ ಎಂಬ ನಾಟಕ ಪ್ರದರ್ಶನ ನಡೆಯಲಿದೆ. ಸೆ.೨೭ ರಂದು ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ ನಡೆಯಲಿದ್ದು. ಅಕ್ಟೋಬರ್ ೨ ರಂದು ಚಿತ್ತಾಕರ್ಷಕ ಮದ್ದು ಸುಡುವ ಕಾರ್ಯಕ್ರಮ ನಡೆಯಲಿವೆ ಎಂದು ಡಾ. ಚವ್ಹಾಣ ವಿವರಿಸಿದರು.
ನಾಡದೇವಿ ಉತ್ಸವ ಸಮಿತಿ ಅಧ್ಯಕ್ಷ ಅಭಿನವ ಚವ್ಹಾಣ, ಕಾರ್ಯದರ್ಶಿ ರವಿಕುಮಾರ ಚವ್ಹಾಣ, ಪ್ರೀತಂ ಚವ್ಹಾಣ, ರಾಚಪ್ಪ ಗಳೇದ, ಅಪ್ಪಣ್ಣಾ ಕಲ್ಲೂರ, ಮೊಸೀನ್ ವಾಲೀಕಾರ, ಪರಶು ಬಿಸನಾಳ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಮೈಸೂರು ದಸರಾ ಮಾದರಿಯಲ್ಲಿ ಹಿಟ್ಟಿನಹಳ್ಳಿ ದಸರಾ ನಾಡದೇವಿ ನವರಾತ್ರಿ ಉತ್ಸವಕ್ಕೆ ಭರದ ಸಿದ್ಧತೆ
