ವಿಜಯಪುರದಲ್ಲಿ ಮೊದಲ ಬಾರಿಗೆ ಆಯೋಜನೆ; 12 ಅಡಿ ಎತ್ತರದ ರಾಯಣ್ಣನ ಮೂರ್ತಿಯ ಭವ್ಯ ಮೆರವಣಿಗೆ
ಸಪ್ತಸಾಗರ ವಾರ್ತೆ,ವಿಜಯಪುರ, ಆ. 20:
ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ ಸಮಿತಿ ವತಿಯಿಂದ ಇದೇ ಮೊದಲ ಬಾರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಬೃಹತ್ ಜಾತ್ರಾ ಮಹೋತ್ಸವವನ್ನು ಆ. 23ರಂದು ನಗರದ ದರಬಾರ ಪ್ರೌಢಶಾಲೆ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಹುಲಿಜಂತಿ ಪಟ್ಟದ ಶ್ರೀ ಮಹಾಳಿಂಗರಾಯ ಮಹಾರಾಜರು ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವಕರಲ್ಲಿ ದೇಶಭಕ್ತಿ, ಶೌರ್ಯ, ಪರಾಕ್ರಮ, ಧೈರ್ಯ ಹಾಗೂ ಸ್ಥೈರ್ಯ ಬೆಳೆಸುವ ಉದ್ದೇಶದಿಂದ ರಾಯಣ್ಣನವರ ಬೃಹತ್ ಜಾತ್ರೆ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಯುವಕರ ತಂಡಗಳನ್ನು ರಚಿಸಿ ಪೂರ್ವಭಾವಿ ಸಭೆಗಳನ್ನು ನಡೆಸಲಾಗಿದ್ದು, ರಾಯಣ್ಣನ ಅಭಿಮಾನಿಗಳಿಗೆ ಅಧಿಕೃತ ಆಹ್ವಾನ ನೀಡಲಾಗಿದೆ. ರಾಜ್ಯದ ವಿವಿಧೆಡೆಯಿಂದ ಸಾವಿರಾರು ಅಭಿಮಾನಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.
12 ಅಡಿ ಎತ್ತರದ ರಾಯಣ್ಣನ ಮೂರ್ತಿ ಮೆರವಣಿಗೆ
ಜಾತ್ರೆಯ ಪ್ರಮುಖ ಆಕರ್ಷಣೆಯಾಗಿ 12 ಅಡಿ ಎತ್ತರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಭವ್ಯ ಮೂರ್ತಿಯ ಮೆರವಣಿಗೆ ನಡೆಯಲಿದೆ. ನಗರದ ಆರಾಧ್ಯ ದೈವ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಮೆರವಣಿಗೆಗೆ ಚಾಲನೆ ದೊರೆಯಲಿದ್ದು, ಗಾಂಧಿವೃತ್ತ, ಅಂಬೇಡ್ಕರ್ ವೃತ್ತ, ಕನಕದಾಸ ವೃತ್ತ ಮಾರ್ಗವಾಗಿ ದರಬಾರ ಪ್ರೌಢಶಾಲೆ ಮೈದಾನ ತಲುಪಲಿದೆ.
ಮೆರವಣಿಗೆ ಬಳಿಕ ಮಧ್ಯಾಹ್ನ 1 ಗಂಟೆಗೆ ಮೈದಾನದಲ್ಲಿ ಬೃಹತ್ ಬಹಿರಂಗ ಸಭೆ ನಡೆಯಲಿದೆ. ಡಿಜೆ ಸೌಂಡ್ ಮತ್ತು ಲೈಟಿಂಗ್ಸ್, ಡೊಳ್ಳು ಕುಣಿತ, ಗೊಂಬೆ ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳ ಪ್ರದರ್ಶನ ಮೆರವಣಿಗೆಗೆ ಮೆರುಗು ನೀಡಲಿವೆ ಎಂದು ಮಹಾಳಿಂಗರಾಯ ಮಹಾರಾಜರು ಹೇಳಿದರು.
ನಂದಗಡದಲ್ಲಿ ಕೈಗೊಂಡಿದ್ದ ಸಂಕಲ್ಪ
ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣದ ಹಂಗು ತೊರೆದು ಹೋರಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನನ್ನು ನಂದಗಡದಲ್ಲಿ ಗಲ್ಲಿಗೇರಿಸಲಾಗಿತ್ತು. ಆ ಪವಿತ್ರ ಸ್ಥಳಕ್ಕೆ ತೆರಳಿ ವಿಜಯಪುರದಲ್ಲಿ ರಾಯಣ್ಣನ ಬೃಹತ್ ಜಾತ್ರೆ ನಡೆಸುವ ಸಂಕಲ್ಪ ಮಾಡಲಾಗಿತ್ತು. ಇದೀಗ ರಾಯಣ್ಣ ಉತ್ಸವ ಸಮಿತಿ ಹಾಗೂ ಹಾಲುಮತ ಸಮಾಜದ ಸಹಕಾರದಿಂದ ಜಾತ್ರೆ ಆಯೋಜಿಸಲಾಗುತ್ತಿದೆ ಎಂದರು.
ರಾಯಣ್ಣನ ಜಯಂತಿ ಆಚರಣೆ ಹಲವು ಕಡೆಗಳಲ್ಲಿ ನಡೆಯುತ್ತಿದ್ದರೂ, ವಿಜಯಪುರದಲ್ಲಿ ಇದೇ ಮೊದಲ ಬಾರಿಗೆ ಬೃಹತ್ ಜಾತ್ರೆಯ ರೂಪದಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಖ್ಯಾತ ವಾಗ್ಮಿ ಮೋಹನ ಮೇಟಿ ಮಾತನಾಡಿ, ಆ. 23ರಂದು ನಡೆಯಲಿರುವ ಐತಿಹಾಸಿಕ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ರಾಯಣ್ಣನ ಅಭಿಮಾನಿಗಳು ಆಗಮಿಸಲಿದ್ದಾರೆ. ಜಾತ್ರೆಯು ಜಾತ್ಯತೀತ ಹಾಗೂ ರಾಜಕೀಯೇತರ ಕಾರ್ಯಕ್ರಮವಾಗಿ ಹೊರಹೊಮ್ಮಲಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ, ಇನ್ಸೈಟ್ ಸಂಸ್ಥೆಯ ಅಧ್ಯಕ್ಷ ವಿನಯಕುಮಾರ ಜಿ.ಬಿ., ಬಿಎಂಟಿಸಿ ಉಪಾಧ್ಯಕ್ಷ ನಿಕೇತರಾಜ್ ಮೌರ್ಯ, ಹಾಸನ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಆನೇಕಲ್ ದೊಡ್ಡಯ್ಯ, ಜಿಪಂ ಮಾಜಿ ಸದಸ್ಯ ಕೆ.ಇ. ಕಾಂತೇಶ, ವಿನೋದ ಅಸೂಟಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ, ರಷ್ಮಿ ರಾಜಶೇಖರ ಹಿಟ್ನಾಳ, ಜಿಪಂ ಮಾಜಿ ಸದಸ್ಯ ದಿಲೀಪ ಪಾಟೀಲ ಸೇರಿದಂತೆ ಸಮಾಜದ ವಿವಿಧ ಮುಖಂಡರು ಭಾಗವಹಿಸಲಿದ್ದಾರೆ ಎಂದು ಮೋಹನ ಮೇಟಿ ವಿವರಿಸಿದರು.
ರಾಯಣ್ಣ ಉತ್ಸವ ಸಮಿತಿ ಅಧ್ಯಕ್ಷ ಪ್ರಕಾಶ ಜಾಲಗೇರಿ ಮಾತನಾಡಿ, 12 ಅಡಿ ಎತ್ತರದ ರಾಯಣ್ಣನ ಭವ್ಯ ಮೂರ್ತಿಯ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಡಿಜೆ ಹಾಗೂ ಯುವಕರ ನರ್ತನ ಪ್ರಮುಖ ಆಕರ್ಷಣೆಯಾಗಲಿದೆ ಎಂದರು.
ಇಂಡಿ ತಾಲೂಕಿನ ಗೊಳಸಾರ ಮಠದ ಶ್ರೀ ಅಭಿನವ ಪುಂಡಲಿಂಗೇಶ್ವರ ಮಹಾರಾಜರು, ಅರಕೇರಿ-ಜಾಲಗೇರಿ ಮುಮ್ಮೆಟ್ಟಗುಡ್ಡದ ಶ್ರೀ ಅಮೋಘಸಿದ್ದೇಶ್ವರ ದೇವಸ್ಥಾನದ ಧರ್ಮದರ್ಶಿ ಶ್ರೀ ಅಮಗೊಂಡ ಮಹಾರಾಜರು ಹಾಗೂ ಉತ್ಸವ ಸಮಿತಿ ಪದಾಧಿಕಾರಿಗಳಾದ ರವಿ ಕಿತ್ತೂರ, ಎ.ಪಿ. ಕಾಗವಾಡಕರ, ನಾಗಪ್ಪ ಶಿವೂರ, ಶ್ರೀಕಾಂತ ಸಂಗೋಗಿ, ಗುರನಾಥ ಮುರಡಿ, ವಿಠ್ಠಲಗೌಡ ಬಿರಾದಾರ, ರಾಜು ಕಗ್ಗೋಡ, ಸದಾಶಿವ ಪೂಜಾರಿ, ರಾಹುಲ್ ಜೌರಂಗಬಾದ, ರೇವಣ್ಣಸಿದ್ದಗೌಡ ಆರ್. ಗೋಡಕೆ, ಸುರೇಶ ಡೋಂಬಾಳ, ಗಣೇಶ ಹೊಸಟ್ಟಿ, ಶಿವಾನಂದ ಹೀರೆಕುರಬರ, ಶರಣು ಪೂಜಾರಿ, ವಿಶ್ವನಾಥ ಬಳಗಾನೂರ, ಸಂಜುಕುಮಾರ್ ಬಿದರಿ, ಲಕ್ಷ್ಮಣ ಹುಲಜಂತಿ ಮತ್ತಿತರರು ಉಪಸ್ಥಿತರಿದ್ದರು.


