ವಿಜಯಪುರದಲ್ಲಿ ರಾಣಿ ಚೆನ್ನಮ್ಮ ಭವ್ಯ ಪ್ರತಿಮೆ ಅನಾವರಣ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 9 : ವಿಜಯಪುರ ಕೇಂದ್ರ ಬಸ್ ನಿಲ್ದಾಣದ ಎದುರು ಪ್ರತಿಷ್ಠಾಪಿಸಲಾಗಿರುವ ಭವ್ಯ ಅಶ್ವಾರೂಢ ವೀರ ರಾಣಿ ಕಿತ್ತೂರ ಚೆನ್ನಮ್ಮ ಅವರ ಪ್ರತಿಮೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಶುಕ್ರವಾರ ಅನಾವರಣಗೊಳಿಸಿದರು.
ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಮಹಾಸ್ವಾಮೀಜಿ ಸೇರಿದಂತೆ ಹಲವಾರು ಸ್ವಾಮೀಜಿಗಳ ಪಾವನ ಸಾನ್ನಿಧ್ಯದಲ್ಲಿ ನಡೆದ ಸರಳ ಸಮಾರಂಭದಲ್ಲಿ ಬೃಹತ್ ಕೆಂಪು ವಸ್ತ್ರವನ್ನು ಸರಿಸುವ ಮೂಲಕ ಮೂರ್ತಿಯನ್ನು ಅನಾವರಣಗೊಳಿಸಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಚಿವರಾದ ಡಾ.ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ, ರಾಮಲಿಂಗಾರೆಡ್ಡಿ, ಭೈರತಿ ಸುರೇಶ, ಡಾ.ಎಚ್.ಸಿ. ಮಹದೇವಪ್ಪ, ಲಕ್ಷ್ಮಿ ಹೆಬ್ಬಾಳಕರ, ಸುಧಾಕರ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಮೂರ್ತಿ ಅನಾವರಣಗೊಳಿಸಿ ನೆರೆದ ಸಾವಿರಾರು ಜನರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಸೇರಿದಂತೆ ಸಮಸ್ತ ಸಚಿವರು ಆತ್ಮೀಯತೆಯಿಂದ ಕೈ ಮುಗಿದರು.
ಇದೇ ವೇಳೆ ವಿಜಯಪುರ ಕೇಂದ್ರ ಬಸ್ ನಿಲ್ದಾಣವನ್ನು ಕಿತ್ತೂರ ರಾಣಿ ಚೆನ್ಮಮ್ಮ ಬಸ್ ನಿಲ್ದಾಣ ಎಂದು ನಾಮಕರಣ ಮಾಡಿದ ನಾಮಫಲಕವನ್ನು ಸಹ ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಅನಾವರಣಗೊಳಿಸಿದರು.
ಹರ ಹರ ಮಹಾದೇವ…..ಜೈ ಚೆನ್ನಮ್ಮಾ ಜೀ…..
ಹರ ಹರ ಮಹಾದೇವ, ಜೈ ಚೆನ್ನಮ್ಮಾ ಜೀ ಎಂಬ ಉದ್ಘೋಷಗಳು ಮುಗಿಲು ಮುಟ್ಟಿದವು. ಈ ಅಪೂರ್ವ ಸಮಾರಂಭವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ಕೇಂದ್ರ ಬಸ್ ನಿಲ್ದಾಣದ ಎದುರು ಜಮಾಯಿಸಿದ್ದರು.
ರಾಣಿ ಕಿತ್ತೂರ ಚೆನ್ನಮ್ಮ ಅವರ ಮೂರ್ತಿ ಅನಾವರಣ ಹಿನ್ನೆಲೆಯಲ್ಲಿ ಅವರ ಜನ್ಮಭೂಮಿ ಜಂಬಗಿಯಿಂದ `ವೀರ ಜ್ಯೋತಿ’ ವಿಜಯಪುರಕ್ಕೆ ತಲುಪಿತು. ಅಲ್ಲಿಂದ ಸಾವಿರಾರು ಮಹಿಳೆಯರು ಶ್ರೀ ಸಿದ್ದೇಶ್ವರ ದೇವಾಲಯಕ್ಕೆ ಜಮಾಯಿಸಿ ಅಲ್ಲಿ ಮಹಿಳೆಯರು ಪೂರ್ಣಕುಂಭ ಹೊತ್ತು ಭವ್ಯ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಜೈ ಚೆನ್ನಮ್ಮಾ ಜೀ ಎಂಬ ಸಂದೇಶ ಹೊತ್ತ ಕೇಸರಿ ವರ್ಣದ ಶಲ್ಯ ಹಾಗೂ ಕೇಸರಿ ವರ್ಣದ ಟೊಪ್ಪಿಗೆ ಧರಿಸಿ ಸಾವಿರಾರು ಯುವಕರು ಮೆರವಣಿಗೆಯಲ್ಲಿ ಭಾಗಿಯಾದರು.
ಕೇಂದ್ರ ಬಸ್ ನಿಲ್ದಾಣದ ಎದುರು ಬೃಹತ್ ಶಾಮಿಯಾದ ಎದುರು ಸಾವಿರಾರು ಮಹಿಳೆಯರು, ಸಾರ್ವನಿಕರಿಗೆ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಅಲ್ಲಿಯೂ ಸಾವಿರಾರು ಜನರು ಈ ಅಪೂರ್ವ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.
ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಕರ್ನಾಟಕ ಸಾಬೂನು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್. ನಾಡಗೌಡ, ಶಾಸಕರಾದ ಯಶವಂತರಾಯಗೌಡ ಪಾಟೀಲ, ವಿಠ್ಠಲ ಕಟಕಧೋಂಡ, ಅಶೋಕ ಮನಗೂಳಿ, ರಾಜುಗೌಡ ಪಾಟೀಲ, ಪಂಚಮಸಾಲಿ ಸಮಾಜದ ಮುಖಂಡರಾದ ಜಿ.ಪಂ. ಮಾಜಿ ಅಧ್ಯಕ್ಷ ಉಮೇಶ ಕೋಳಕೂರ, ರಾಜು ತೊರವಿ, ವಿದ್ಯಾರಾಣಿ ತುಂಗಳ, ಡಾ.ಸುರೇಶ ಬಿರಾದಾರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಸೇರಿದಂತೆ ಅನೇಕ ಪ್ರಮುಖರು ಪಾಲ್ಗೊಂಡಿದ್ದರು.

Share this