ಸಪ್ತಸಾಗರ ವಾರ್ತೆ, ವಿಜಯಪುರ, ಜ. 8 : ರಾಜ್ಯದ ಸುದೀರ್ಘ ಆಡಳಿತ ನಡೆಸಿದ ಮುಖ್ಯಮಂತ್ರಿ ಎಂಬ ದಾಖಲೆ ಮಾಡಿದ ಬಳಿಕ ಜಿಲ್ಲೆಗೆ ವೈದ್ಯಕೀಯ ಕಾಲೇಜಿನ ಕೊಡುಗೆ ನೀಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳನ್ನು ಜಿಲ್ಲೆಯ ಜನತೆಯ ಪರವಾಗಿ ಹೃತ್ಪೂರ್ವಕ ಸ್ವಾಗಿತಿಸಿ, ಕೃತಜ್ಞತೆ ಸಲ್ಲಿಸುವುದಾಗಿ ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಹೇಳಿದರು.
ಗುರುವಾರ ನಗರದ ವಿಡಿಸಿಸಿ ಬ್ಯಾಂಕ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುದೀರ್ಘ ಕಾಲದವರೆಗೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ಸಾಧನೆ ಮಾಡಿದ್ದು, ಇದಕ್ಕಾಗಿ ಸಿದ್ಧರಾಮಯ್ಯ ಅವರನ್ನು ಅಭಿನಂದಿಸುತ್ತೇನೆ. ಶುಕ್ರವಾರ ಜಿಲ್ಲೆಗೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹಾವೇರಿ ಕಾರ್ಯಕ್ರಮದಲ್ಲಿ ಈಗಾಗಲೇ ಘೋಷಿಸಿರುವ ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜಿನ ಘೋಷಣೆಯನ್ನು ಪುನರುಚ್ಚರಿಸಲಿ ಎಂದು ಮನವಿ ಮಾಡಿದರು.
ಹೋರಾಟಗಾರರಿಗೆ ನಾನು ಬೆಂಬಲ ನೀಡಿದ್ದು ನಿಜ, ಹೀಗಾಗಿ ಹೋರಾಟದ ಸಂದರ್ಭದಲ್ಲಿ ಅಚಾತುರ್ಯ ಆಗಿದ್ದರೆ ಅದಕ್ಕೆ ವಿಷಾದಿಸುತ್ತೇನೆ. ಹೋರಾಟ ಮಾಡುವುದು ಎಲ್ಲರ ಹಕ್ಕು, ಅದನ್ನು ಯಾರೂ ಕಿತ್ತುಕೊಳ್ಳಲಾಗದು. ಹೋರಾಟಗಾರರ ಮೇಲೆ ದಾಖಲಿಸಿರುವ ಪ್ರಕರಣ ಹಿಂಪಡೆಯುವ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ನಾನು ಆರೋಗ್ಯ ಸಚಿವನಾಗಿದ್ದ ಸಂದರ್ಭದಲ್ಲೇ ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೆ. ಆದರೆ ಅಷ್ಟರಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸರ್ಕಾರ ಪತನವಾಯ್ತು ಎಂದರು.
ಆದರೆ ನಂತರ ಬಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಕಾಲೇಜು ಸ್ಥಾಪನೆಗೆ ನಿರ್ಧರಿಸಿತ್ತು. ಆದರೆ ಸಿದ್ಧರಾಮಯ್ಯ ಅವರು 2014-15 ನೇ ಸಾಲಿನ ಬಜೆಟ್ನಲ್ಲಿ ಪ್ರತಿ ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು ಘೋಷಿಸಿದ್ದರು. ಇದೀಗ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಘೋಷಿಸಿದ್ದು, ಅದಕ್ಕಾಗಿ ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಮುಖ್ಯಮಂತ್ರಿಗಳು ಸರ್ಕಾರಿ ಕಾಲೇಜು ಘೋಷಣೆ ಕುರಿತು ಅನುಮಾನ ಬೇಡ, ಬರುವ ಬಜೆಟ್ ನಲ್ಲಿ ಅನುದಾನದ ಅವಕಾಶ ಸಿಗಲಿದೆ ಎಂದರು.
ಹಾವೇರಿಯಲ್ಲಿ ಕೇವಲ 56 ಎಕರೆ ಜಮೀನಿದ್ದು, ಯಾವುದೇ ಸೌಲಭ್ಯ ಇರಲಿಲ್ಲ. ಆದರೆ ನಾನು ಆ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡ ಬಳಿಕ ಸರ್ಕಾರಿ ವೈದ್ಯಕೀಯ ಕಾಲೇಜಿನ ಕಟ್ಟಡ ಪೂರ್ಣಗೊಳಿಸಿದ್ದೇನೆ. ಕಳೆದ ಲೋಕಸಭಾ ಚುನಾವಣೆ ಪೂರ್ವದಲ್ಲೇ ಬಹುತೇಕ ಕಾಮಗಾರಿ ಮುಗಿದಿತ್ತು, ಆದರೆ ಸಂಸದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸರ್ಕಾರದ ಪಾಲೂ ಇರುವ ಕಾರಣ ಕೇಂದ್ರದ ಸಚಿವರು ಪಾಲ್ಗೊಳ್ಳಲು ಅವಕಾಶ ಆಗುವಂತೆ ಕಾರ್ಯಕ್ರಮ ಮಾಡೋಣ ಎಂದು ಮನವಿ ಮಾಡಿದ್ದರು. ಹೀಗಾಗಿ ಇದೀಗ ಲೋಕಾರ್ಪಣೆ ಮಾಡಿದ್ದೇವೆ ಎಂದು ವಿವರಿಸಿದರು.
ಆದರೆ ವಿಜಯಪುರ ಜಿಲ್ಲೆಯಲ್ಲಿ 153 ಎಕರೆ ಜಮೀನಿದ್ದು, ನಾನು ಆರೋಗ್ಯ ಸಚಿವನಾಗಿದ್ದಾಗ 150 ಹಾಸಿಗೆಯ ತಾಯಿ ಮಕ್ಕಳ ಆಸ್ಪತ್ರೆ, ಟ್ರಾಮಾ ಸೆಂಟರ್ ಸೇರಿದಂತೆ ಹಲವು ಸೌಲಭ್ಯ ಕಲ್ಪಿಸಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಿದ್ದಲ್ಲದೇ ಕ್ಯಾನ್ಸರ್ ಚಿಕಿತ್ಸಾ ಘಟಕ ಸ್ಥಾಪಿಸಿದ್ದೇನೆ. ಈ ಕಾಮಗಾರಿ ಇನ್ನಷ್ಟೇ ಪೂರ್ಣಗೊಳ್ಳಬೇಕಿದೆ. ಇಷ್ಟೆಲ್ಲ ಸೌಲಭ್ಯಗಳನ್ನು ಹೊಂದಿರುವ ವಿಜಯಪುರ ಜಿಲ್ಲಾ ಆಸ್ಪತ್ರೆ ಪರಿಸರದಲ್ಲಿ ಸರ್ಕಾರ ಕೇವಲ 100 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಅವಕಾಶವಿದೆ ಎಂದರು.
4 ಬೋಧನೆ ಕೋಣೆ, ಒಂದು ಆಡಿಟೋರಿಯಂ, ಪರೀಕ್ಷಾ ಘಟಕ ಸ್ಥಾಪಿಸಿದರೆ 250 ಎಂಬಿಬಿಎಸ್ ಸೀಟ್ ಗಳೊಂದಿಗೆ ವೈದ್ಯಕೀಯ ಕಾಲೇಜು ಸ್ಥಾಪಿಸಬಹುದು. ಹೊಸದಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಪಾನೆಗೆ 6-7 ನೂರು ಕೋಟಿ ರೂ. ಅನುದಾನ ಬೇಕು. ವಿಜಯಪುರ ಜಿಲ್ಲೆಯಲ್ಲಿ ಎಲ್ಲಾ ಮೂಲಭೂತ ಸೌಲಭ್ಯಗಳು ಈಗಾಗಲೆರ ಇದ್ದು, ಕೇವಲ ನೂರು ಕೋಟಿ ರೂ. ಸಾಕು ಎಂದು ತಮ್ಮ ಕಾಲಾವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಇರುವ ಸುಲಭ ಅವಕಾಶಗಳನ್ನು ವಿವರಿಸಿದರು.
ಪತ್ರಕರ್ತರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸಂಸದ ರಮೇಶ ಜಿಗಜಿಣಗಿ ಅವರು ಕೇಂದ್ರದಿಂದ ಏಮ್ಸ್ ಕಾಲೇಜು ಮಂಜೂರು ಮಾಡಿಸಿದರೆ ಅಭಿನಂದಿಸುತ್ತೇನೆ. ಪಕ್ಕದ ಕಲಬುರಗಿ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜೂ ಇದೆ, ಏಮ್ಸ್ ಆಸ್ಪತ್ರೆಯ ಸೌಲಭ್ಯವೂ ಇದೆ. ನಮ್ಮ ಸಂಸದರು ಈ ನಿಟ್ಟಿನಲ್ಲಿ ಕೇಂದ್ರದಿಂದ ಜಿಲ್ಲೆಗೆ ಸೌಲಭ್ಯ ತರಲಿ. ಎಲ್ಲಕ್ಕಿಂತ ಮುಖ್ಯವಾಗಿ ಜಿಲ್ಲೆಯಲ್ಲಿ ಗುಂಡಿ ಬಿದ್ದಿರುವ ರಾಷ್ಟ್ರೀಯ ಹೆದ್ದಾರಿಗಳ ಗುಂಡಿ ಮುಚ್ಚುವ ಕೆಲಸವನ್ನು ತುರ್ತಾಗಿ ಮಾಡಲಿ ಎಂದು ನಿಮ್ಮ ಮೂಲಕ ಮನವಿ ಮಾಡುತ್ತೇನೆ ಎಂದರು.
ಜಿಲ್ಲೆಯ ಜನತೆ ಪರವಾಗಿ ಸಿ.ಎಂ. ಸಿದ್ದುಗೆ ಕೃತಜ್ಞತೆ- ಸಚಿವ ಶಿವಾನಂದ ಪಾಟೀಲ


