ಭಾಷೆ ಮೂಲಕ ಜ್ಞಾನ ವಿಸ್ತರಣೆಗೆ ವಿದ್ಯಾರ್ಥಿಗಳು ಮುಂದಾಗಬೇಕು: ಪ್ರೊ. ವಿಜಯಾ ಬಿ. ಕೋರಿಶೆಟ್ಟಿ
ಸಪ್ತಸಾಗರ ವಾರ್ತೆ,ವಿಜಯಪುರ, ಅ. 1:
ಹಿಂದಿ ಸಾಹಿತ್ಯವು ಸಮೃದ್ಧವಾಗಿದ್ದು, ಅದರಲ್ಲಿರುವ ಉತ್ತಮ ಕೃತಿಗಳನ್ನು ಓದುವ ಮೂಲಕ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು. ಭಾಷೆಯ ಮೂಲಕ ಜೀವನವನ್ನು ಕಟ್ಟಿಕೊಳ್ಳುವ ಸಾಧ್ಯತೆಗಳಿದ್ದು, ಯುವಜನರು ಭಾಷಾ ಅಧ್ಯಯನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಜಯಾ ಬಿ. ಕೋರಿಶೆಟ್ಟಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಹಿಂದಿ ಅಧ್ಯಯನ ವಿಭಾಗದ ವತಿಯಿಂದ ಬುಧವಾರ ಆಯೋಜಿಸಿದ್ದ ಹಿಂದಿ ದಿನಾಚರಣೆ ಹಾಗೂ ‘ಹಿಂದಿ ಭಾಷೆ–ಸಾಹಿತ್ಯದ ವಿವಿಧ ಆಯಾಮಗಳು’ ವಿಷಯದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿ ಭಾಷೆಯಲ್ಲಿ ರಚನೆಯಾಗಿರುವ ಉತ್ತಮ ಸಾಹಿತ್ಯವನ್ನು ಎಲ್ಲರೂ ಓದಿ, ಅರ್ಥೈಸಿಕೊಳ್ಳುವ ಮೂಲಕ ಭಾಷೆ ಹಾಗೂ ಸಾಹಿತ್ಯದ ಬೆಳವಣಿಗೆಗೆ ಸಹಕರಿಸಬೇಕು. ಹಿಂದಿ ದೇಶದ ಪ್ರಮುಖ ಸಂಪರ್ಕ ಭಾಷೆಯಾಗಿದ್ದು, ಭಾಷೆಯ ಬೆಳವಣಿಗೆಗೆ ಶ್ರಮಿಸುತ್ತಿರುವ ಎಲ್ಲ ಹಿಂದಿ ಪ್ರೇಮಿಗಳನ್ನು ಅಭಿನಂದಿಸಬೇಕು ಎಂದರು.
ವಿಶೇಷ ಅತಿಥಿಯಾಗಿ ಮಾತನಾಡಿದ ಕುಲಸಚಿವ ಡಾ. ವಿಜಯಕುಮಾರ್ ಅಜೂರ, ಹಿಂದಿ ಭಾಷೆಯ ಮಹತ್ವ, ಅದರ ಹುಟ್ಟು ಹಾಗೂ ಬೆಳವಣಿಗೆಯ ಕುರಿತು ವಿವರಿಸಿದರು. ಇಂದಿನ ಸ್ಪರ್ಧಾತ್ಮಕ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಭಾಷೆಗಳನ್ನು ಕಲಿಯಲು ಸಿದ್ಧರಾಗಬೇಕು. ಹಿಂದಿ ಸಂಪರ್ಕ ಭಾಷೆಯಾಗಿರುವುದರಿಂದ ಅದರ ಜೊತೆಗೆ ಎಲ್ಲ ಭಾಷೆಗಳಿಗೂ ಗೌರವ ನೀಡಬೇಕು ಎಂದು ಹೇಳಿದರು.
ಮುಖ್ಯ ಭಾಷಣಕಾರ ನಾಲದುರ್ಗ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಹಾಶಿಂ ಬೇಗ್ ಮಿರ್ಜಾ, ಹಿಂದಿ ಸಾಹಿತ್ಯದ ವಿವಿಧ ಆಯಾಮಗಳ ಕುರಿತು ಮಾತನಾಡಿ, ಹಿಂದಿ ಸಾಹಿತ್ಯದ ವೈವಿಧ್ಯತೆ, ಸಾಮಾಜಿಕ ಬದ್ಧತೆ ಹಾಗೂ ಸಮಕಾಲೀನ ಪ್ರಸ್ತುತತೆಯನ್ನು ವಿದ್ಯಾರ್ಥಿಗಳು ಮತ್ತು ಸಂಶೋಧಕರು ಅರ್ಥೈಸಿಕೊಳ್ಳಬೇಕು ಎಂದು ಹೇಳಿದರು.
ಡಾ. ಗುಲಾಬ್ ರಾಠೋಡ್ ಅವರ ನೇತೃತ್ವದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ರಾಜ್ಯದ ವಿವಿಧ ಕಾಲೇಜುಗಳ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ವಿಚಾರಗಳನ್ನು ಮಂಡಿಸಿದರು.
ಕಾರ್ಯಕ್ರಮದಲ್ಲಿ ಕಲಾ ನಿಕಾಯದ ಡೀನ್ ಪ್ರೊ. ರಾಜು ಬಾಗಲಕೋಟ, ಆಂತರಿಕ ಗುಣಮಟ್ಟ ಭರವಸೆ ಕೋಶದ ನಿರ್ದೇಶಕಿ ಪ್ರೊ. ಶಾಂತಾದೇವಿ ಟಿ. ಉಪಸ್ಥಿತರಿದ್ದರು. ಡಾ. ಅಮರನಾಥ ಪ್ರಜಾಪತಿ ವಂದಿಸಿದರು. ಪದ್ಮಶ್ರೀ ಚೌಗಲೆ ಕಾರ್ಯಕ್ರಮ ನಿರೂಪಿಸಿದರು.


