ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 12:
ಮನುಷ್ಯ ತನ್ನ ಜೀವಿತಾವಧಿಯಲ್ಲಿ ಗಳಿಸುವ ಆಸ್ತಿ-ಪಾಸ್ತಿ ಹಾಗೂ ಸಂಪತ್ತಿಗಿಂತ ಒಂದು ಸಸಿಯನ್ನು ನೆಟ್ಟು, ಅದನ್ನು ಪೋಷಿಸಿ ಬೆಳೆಸುವುದರಿಂದ ದೊರೆಯುವ ಸಂತೋಷ ಮತ್ತು ತೃಪ್ತಿ ಹೆಚ್ಚು ಮಹತ್ವದ್ದಾಗಿದೆ. ಬೆಳೆದ ಮರಗಳನ್ನು ಕಡಿದಾಗ ಸಾರ್ವಜನಿಕರು ವ್ಯಕ್ತಪಡಿಸುವ ಆಕ್ರೋಶವು ಪರಿಸರ ಮತ್ತು ಹಸಿರೀಕರಣದ ಕುರಿತು ಜನರಲ್ಲಿ ಹೆಚ್ಚುತ್ತಿರುವ ಜಾಗೃತಿಗೆ ಸಾಕ್ಷಿಯಾಗಿದೆ ಎಂದು ವಿಜಯಪುರ ಸೈಕ್ಲಿಂಗ್ ಗ್ರೂಪ್ ಅಧ್ಯಕ್ಷ ಡಾ. ಮಹಾಂತೇಶ ಬಿರಾದಾರ ಹೇಳಿದರು.
ನಗರದ ಐಶ್ವರ್ಯ ನಗರದ ಉದ್ಯಾನವನದಲ್ಲಿ 75 ಸಸಿಗಳನ್ನು ನೆಡುವ ವನಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗಣಪತಿ ಪೆಂಡಾಲ್ ನಿರ್ಮಿಸಲು ಉದ್ಯಾನವನದಲ್ಲಿದ್ದ ಮರಗಳನ್ನು ಕಡಿದ ಸಂದರ್ಭದಲ್ಲಿ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ತಮ್ಮ ತಪ್ಪನ್ನು ಅರಿತು, ಕಡಿದ ನಾಲ್ಕು ಮರಗಳಿಗೆ ಪರ್ಯಾಯವಾಗಿ 75 ಸಸಿಗಳನ್ನು ನೆಟ್ಟು ಅವುಗಳ ರಕ್ಷಣೆಗೆ ಮುಂದಾಗಿರುವುದು ಶ್ಲಾಘನೀಯ. ಪರಿಸರದ ಮೇಲಿನ ಕಾಳಜಿಗೆ ಇದು ಉತ್ತಮ ಉದಾಹರಣೆಯಾಗಿದೆ ಎಂದರು.
ಐಶ್ವರ್ಯ ನಗರದ ನಿವಾಸಿ ಜಯಪ್ರಕಾಶ ಸೊಡ್ಡಗಿ ಮಾತನಾಡಿ, ಮನೆ-ಮಠಗಳಲ್ಲಿ ಹೋಮ-ಹವನ ಹಾಗೂ ಮಂತ್ರಪಠಣದಿಂದ ದೊರೆಯುವ ಪುಣ್ಯದಷ್ಟೇ ಸಸಿಯನ್ನು ನೆಟ್ಟು ಬೆಳೆಸುವುದಕ್ಕೂ ಮಹತ್ವವಿದೆ ಎಂಬ ಸಂದೇಶ ಅಗ್ನಿಪುರಾಣದಲ್ಲಿದೆ. ಜನ್ಮದಿನ ಹಾಗೂ ವಿವಿಧ ಸಭೆ-ಸಮಾರಂಭಗಳಲ್ಲಿ ದುಂದು ವೆಚ್ಚ ಮಾಡುವ ಬದಲು ಮನೆಗಳ ಸುತ್ತಮುತ್ತ, ರಸ್ತೆ ಬದಿ ಮತ್ತು ಉದ್ಯಾನಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವ ಮೂಲಕ ಹಸಿರು ಪರಿಸರ ನಿರ್ಮಿಸಬೇಕು. ಇದರಿಂದ ತಾಪಮಾನ ನಿಯಂತ್ರಣಕ್ಕೆ ಸಹಕಾರಿಯಾಗುವುದಲ್ಲದೆ, ನಗರವೂ ಸುಂದರವಾಗುತ್ತದೆ. ವ್ಯಕ್ತಿಯು ತನ್ನ ಜೀವನದಲ್ಲಿ ತಿಳಿದು-ತಿಳಿಯದೆ ಮಾಡಿದ ತಪ್ಪುಗಳಿಗೆ ಪ್ರಾಯಶ್ಚಿತ್ತವಾಗಿ ಸಸಿ ನೆಟ್ಟು ಪೋಷಿಸುವುದು ಉತ್ತಮ ಕಾರ್ಯವಾಗಿದೆ ಎಂದು ಹೇಳಿದರು.
ಐಶ್ವರ್ಯ ನಗರದ ನಿವಾಸಿ ಬಸವರಾಜ ಕೋರಿ ಮಾತನಾಡಿ, ನೆಡಲಾದ ಸಸಿಗಳಿಗೆ ಡ್ರಿಪ್ ನೀರಾವರಿ ವ್ಯವಸ್ಥೆ ಕಲ್ಪಿಸಿ, ಅವುಗಳ ನಿರಂತರ ಪೋಷಣೆಯ ಜವಾಬ್ದಾರಿ ವಹಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಹಾಪೌರ ಮಡಿವಾಳ ಕರಡಿ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಭೀಮಶಿ ಬಿರಾದಾರ, ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ ಅಜೂರ, ವಿಜಯಪುರ ಸೈಕ್ಲಿಂಗ್ ಗ್ರೂಪ್ ಉಪಾಧ್ಯಕ್ಷ ಶಿವನಗೌಡ ಪಾಟೀಲ, ರಾಜ್ಯ ಗುತ್ತಿಗೆದಾರರ ಸಂಘದ ಸಂಘಟನಾ ಕಾರ್ಯದರ್ಶಿ ಹಣಮಂತ
ಚಿಂಚಲಿ, ಐಶ್ವರ್ಯ ನಗರದ ನಿವಾಸಿಗಳಾದ ಅಶೋಕ ದೇಶಟ್ಟಿ, ಈರಣ್ಣ ಹುಳಸೂರ, ವಿವೇಕ ಹುಂಡೇಕಾರ, ಜಯಪ್ರಕಾಶ ಅಂಬಲಿ, ಎಸ್.ಎಸ್. ತೊದಲಬಾಗಿ, ಗಂಟನೂರ ಮಠ, ಸಿದ್ದು ತೇಜೂರ, ಗಿರೀಶ ಅಮತೆಪ್ಪ, ಎಂ.ಎಸ್. ಬಿರಾದಾರ ಸೇರಿದಂತೆ ವಿಜಯಪುರ ಸೈಕ್ಲಿಂಗ್ ಗ್ರೂಪ್ ಸದಸ್ಯರು ಉಪಸ್ಥಿತರಿದ್ದರು.
ಮರ ಕಡಿದ ಕೈಗಳಲ್ಲೇ ಹಸಿರು ಸಂಕಲ್ಪ: 75 ಸಸಿಗಳ ನೆಡುವಿಕೆ


