ಜಿ ಎಸ್ ಎಸ್ ಕನ್ನಡ ಕಾವ್ಯಲೋಕದ ಸಮನ್ವಯ ಕವಿ- ಸಂತೋಷ ಬಂಡೆ

ಸಪ್ತಸಾಗರ ವಾರ್ತೆ, ವಿಜಯಪುರ,ಫೆ. 7: ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪನವರು ಕನ್ನಡ ಕಾವ್ಯ ಲೋಕದ ಸಮನ್ವಯ ಕವಿ. ಅವರ ಕಾವ್ಯ ರಚನೆಯಲ್ಲಿ ಶಿಸ್ತು, ಶ್ರದ್ಧೆ, ಆದರ್ಶ, ಇತರರಿಗೆ ಸ್ಫೂರ್ತಿಯ ಅಂಶಗಳನ್ನು ಕಾಣುತ್ತೇವೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ಶನಿವಾರ ತಾಲೂಕಿನ ನಾಗಠಾಣ ಗ್ರಾಮದ ಅರಿವು ಕೇಂದ್ರದಲ್ಲಿ ಹಮ್ಮಿಕೊಂಡ ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪನವರ ಜನ್ಮ ಶತಾಬ್ದಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನವೋದಯ ಕಾವ್ಯದ ರಮ್ಯತೆ ಮತ್ತು ನವ್ಯ ಕಾವ್ಯದ ಬೌದ್ಧಿಕತೆಗಳೆರಡನ್ನೂ ಸೇರಿಸಿ, ಕಾವ್ಯದಲ್ಲಿ ಸಮನ್ವಯತೆ ಸಾಧಿಸಿದವರು. ಸರಳ, ನೇರ ಮತ್ತು ಸಹಜ ಸಂವಹನ ಶೈಲಿಯನ್ನು ಬಳಸಿದ ಇವರ ಕವಿತೆಗಳು ಓದುಗನಿಗೆ ಪಾಠವಾಗದೆ, ಅನುಭವವಾಗಿ ಹತ್ತಿರವಾಗುತ್ತವೆ ಎಂದು ಹೇಳಿದರು.
‘ಆಡು ಪುಟ್ಟದ ಸೊಪ್ಪಿಲ್ಲ’ ಎಂಬ ಲೋಕೋಕ್ತಿಯಂತೆ ಕವಿ, ಲೇಖಕ, ಸಂಶೋಧಕ, ನಾಟಕಕಾರ, ವಿಮರ್ಷಕ ಹೀಗೆ ವಿಶಾಲ ಸಾಹಿತ್ಯ ತೋಟದ ಮೂಲೆ ಮೂಲೆಗಳಲ್ಲೂ ತಮ್ಮ ಛಾಪು ಮೂಡಿಸಿರುವ ಜಿ ಎಸ್ ಶಿವರುದ್ರಪ್ಪನವರು
ಕರ್ನಾಟಕದ ಸಾಹಿತ್ಯ ಕಣಜ ಎಂದು ಹೇಳಿದರು.
ಶಿಕ್ಷಕ ಸಿದ್ದು ರತ್ನಾಕರ ಮಾತನಾಡಿ, ಬಂಡಾಯ-ದಲಿತ ಸಾಹಿತ್ಯ ಕಾಲ ಘಟ್ಟದಲ್ಲೂ ತಮ್ಮದೇ ತಣ್ಣಗಿನ ಶೈಲಿಯಲ್ಲಿ ಕಾವ್ಯ ಕೃಷಿ ಮಾಡುತ್ತ ಬಂದ ಜಿ ಎಸ್ ಎಸ್ ಅವರ ಭಾವಗೀತೆಗಳು ಕನ್ನಡಿಗರ ಮನದಲ್ಲಿ ಸದಾ ಉಳಿಯುತ್ತವೆ ಎಂದು ಹೇಳಿದರು.
ಗ್ರಂಥಪಾಲಕ ಮಂಜುನಾಥ ಗಂಗನಳ್ಳಿ ಮಾತನಾಡಿ, ಗೋವಿಂದ ಪೈ ಮತ್ತು ಕುವೆಂಪು ಅವರ ನಂತರ ‘ರಾಷ್ಟ್ರಕವಿ’ ಪಟ್ಟವನ್ನು ಪಡೆದ ಮೂರನೇ ಕವಿಯೇ ಜಿ ಎಸ್ ಎಸ್. ಅವರು ಕುವೆಂಪುರವರ ಶಿಷ್ಯವರ್ಗದಲ್ಲಿ ಪ್ರಮುಖರಾಗಿದ್ದರು ಎಂದು ಹೇಳಿದರು.
ರಾಜು ಕತ್ನಳ್ಳಿ, ಮಲ್ಲು ಸಮಗೊಂಡ, ಪ್ರವೀಣ ಅರಕೇರಿ, ಜಟಿಂಗರಾಯ ಕಕ್ಕೇರಗೊಳ ಸೇರಿದಂತೆ ಮಕ್ಕಳು ಭಾಗವಹಿಸಿದ್ದರು.

Share this