‘ಗುಲಾಬಿ’ ಚಿತ್ರದ ಪೋಸ್ಟರ್ ಬಿಡುಗಡೆ: ಶೀಘ್ರದಲ್ಲೇ ತೆರೆಗೆ

ಸಪ್ತಸಾಗರ ವಾರ್ತೆ,ತುಮಕೂರು, ಅ. 12:
ಶ್ರೀಸಿದ್ಧಿವಿನಾಯಕ ಸೇವಾ ಮಂಡಳಿ, ತುಮಕೂರು ಇವರ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ನಮ್ಮ ಜೇನುಗೂಡು ಬಳಗ’ದ ಸಹಯೋಗದಲ್ಲಿ ಸಾವಿತ್ರಿ ರಾಮಚಂದ್ರ ಬ್ಯಾನರ್‌ ನಿರ್ಮಾಣದ ‘ಗುಲಾಬಿ’ ಕನ್ನಡ ಚಲನಚಿತ್ರದ ಪೋಸ್ಟರ್‌ ಬಿಡುಗಡೆ ಮಾಡಲಾಯಿತು.
ಪ್ಯಾನ್ ಇಂಡಿಯಾ ಸಿನೆಮಾವಾಗಿ ಮೂಡಿಬರುತ್ತಿರುವ ‘ಗುಲಾಬಿ’ ಚಿತ್ರವನ್ನು ಅಡ್ವೊಕೇಟ್ ಡಾ. ಆರ್. ವಿಜಯಕುಮಾರ್ ನಿರ್ದೇಶಿಸಿದ್ದು, ಅವರೇ ನಾಯಕನಾಗಿ ಅಭಿನಯಿಸಿದ್ದಾರೆ. ಜೇನುಗೂಡು ಬಳಗದ ಅಧ್ಯಕ್ಷ ಸೆಲ್ವಂ ಹಾಗೂ ತಂಡದವರು ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಚಿತ್ರದ ನಾಯಕಿ ಅನಿತಾಶ್ರೀ, ಸಹ ನಿರ್ದೇಶಕ ವಾಸುದೇವ ಶೆಟ್ಟಿ ಸೇರಿದಂತೆ ಚಿತ್ರತಂಡದ ಸದಸ್ಯರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಡಾ. ಆರ್. ವಿಜಯಕುಮಾರ್ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಮಾತನಾಡಿದ ಡಾ. ವಿಜಯಕುಮಾರ್, ‘ಗುಲಾಬಿ’ ಚಿತ್ರದ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ, ತಾತಗುಣಿ, ಭೂಮಿಕಾ ಸ್ಟುಡಿಯೋ ಹಾಗೂ ಕನಕಪುರ ಸುತ್ತಮುತ್ತ ನಡೆದಿದ್ದು, ಚಿತ್ರದಲ್ಲಿ ಆರು ಹಾಡುಗಳು ಹಾಗೂ ಆರು ಸಾಹಸ ದೃಶ್ಯಗಳಿವೆ. ಈಗಾಗಲೇ ‘ದೊಡ್ಡಣ್ಣ’, ‘ಪುಟ್ಟಣ್ಣ’, ‘ರಕ್ಷಕ’ ಮತ್ತು ‘ರಕ್ಷಕ-2’ ಸೇರಿದಂತೆ ಮೂರು ಚಿತ್ರಗಳು ಶತದಿನೋತ್ಸವ ಆಚರಿಸಿದ್ದು, ಪ್ರೇಕ್ಷಕರ ಪ್ರೋತ್ಸಾಹವೇ ಇದಕ್ಕೆ ಕಾರಣವಾಗಿದೆ. ‘ಗುಲಾಬಿ’ ಚಿತ್ರವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಚಿತ್ರದಲ್ಲಿ ಡಾ. ವಿಜಯಕುಮಾರ್, ರಾಧಿಕಾ, ಚಂದನಾ, ಅನಿತಾಶ್ರೀ, ನಾಗೇಂದ್ರ ಅರಸ್, ಲಯಕೋಕಿಲ, ಉಗ್ರಂ ರವಿ, ಬಿಗ್‌ಬಾಸ್ ಮಲ್ಲಮ್ಮ, ಸುರೇಂದ್ರ ಕುಮಾರ್, ಅಜಿತ್ ಜೈನ್, ಲೋಕೇಶ್ ಸೇರಿದಂತೆ ಹಲವರು ನಟಿಸಿದ್ದಾರೆ.
ತಾಂತ್ರಿಕ ವಿಭಾಗದಲ್ಲಿ ಛಾಯಾಗ್ರಹಣ ವೀರೇಶ್, ಸಂಗೀತ ಸಂತೋಷ್ ಜೋಶಿ, ಪ್ರಸಾಧನ ನಾಗೇಶ್, ಕೊರಿಯೋಗ್ರಫಿ ಬಾಲಕೃಷ್ಣ, ಸಾಹಸ ಗುಲಾಬಿ ಚಿನ್ನಯ್ಯ, ಸಂಕಲನ ನಿಸಿತ್, ಪಿಆರ್‌ಒ ಡಾ. ಪ್ರಭು ಗಂಜಿಹಾಳ, ಡಾ. ವೀರೇಶ್ ಹಂಡಿಗಿ ಸೇರಿದಂತೆ ಹಲವರು ಕಾರ್ಯನಿರ್ವಹಿಸಿದ್ದಾರೆ. ವಾಸುದೇವ ಶೆಟ್ಟಿ ಸಹ ನಿರ್ದೇಶಕರಾಗಿ, ಎಸ್. ಮೇಘರಾಜ್ ಗೌಡ ನಿರ್ಮಾಣ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಹಾಗೂ ನಿರ್ಮಾಣದ ಹೊಣೆಗಾರಿಕೆಯನ್ನು ಡಾ. ವಿಜಯಕುಮಾರ್ ವಹಿಸಿದ್ದಾರೆ.

Share this