ಗುರುವೆಂದರೆ ಜ್ಞಾನದ ಆತ್ಮನಿದ್ದಂತೆ-ಉಪಮನ್ಯು ಶಿವಾಚಾರ್ಯ ಶ್ರೀಗಳು

ಸಪ್ತಸಾಗರ ವಾರ್ತೆ, ವಿಜಯಪುರ, ಆ. 26:
ಅನಾದಿ ಕಾಲದಿಂದಲೂ ಗುರುವನ್ನು ಗೌರವಿಸುವ ಶ್ರೇಷ್ಠ ಸಂಸ್ಕೃತಿ, ಪರಂಪರೆ ಭಾರತದಲ್ಲಿದೆ.
ಗುರುವೆಂದರೆ ಜ್ಞಾನದ ಆತ್ಮನಿದ್ದಂತೆ ಎಂದು ಬೀದರ ಜಿಲ್ಲೆಯ ಐನಾಪುರ ಹಿರೇಮಠದ ಷ ಬ್ರ ಉಪಮನ್ಯು ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಸೋಮವಾರದಂದು ತಾಲೂಕಿನ ನಾಗಠಾಣ ಗ್ರಾಮದ ಉದಯಲಿಂಗೇಶ್ವರ ಮಠದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಳ ಪುರಾಣ ಮಹಾಮಂಗಲ ಹಾಗೂ ಧರ್ಮಸಭೆಯನ್ನು ಉದ್ಧೇಶಿಸಿ ಅವರು ಮಾತನಾಡಿದರು.
ಗುರು ಪರಂಪರೆಗೆ ನಮ್ಮ ನಾಡಿನಲ್ಲಿ ದೊಡ್ಡ ಇತಿಹಾಸವೇ ಇದೆ. ಗುರು ಎಂದರೆ ಜನರನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ರಾಜಮಾರ್ಗ ಎಂದು ಹೇಳಿದರು.
ಅಗರಖೇಡ ವಿರಕ್ತಮಠದ ಮ.ನಿ. ಪ್ರ ಅಭಿನವ ಸಿದ್ದಲಿಂಗೇಶ್ವರ ಮಹಾಸ್ವಾಮೀಜಿ ಮಾತನಾಡಿ,ಗುರುವು ಅಂತರಂಗದ ಬೆಳಕನ್ನು ಬೆಳಗುತ್ತ, ಬದುಕಿಗೆ ಮಾರ್ಗದರ್ಶಿಯಾಗಿ ಮೋಕ್ಷವನ್ನು ನೀಡುತ್ತಾನೆ. ಆತ ಇಡೀ ಮನುಕುಲಕ್ಕೆ ದಾರಿ ತೋರುವ ಮಹಾನುಭಾವ ಎಂದು ಹೇಳಿದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಮ.ಘ.ಚ ಚನ್ನಮಲ್ಲಿಕಾರ್ಜುನ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಗುರುವಿನಲ್ಲಿ ದೇವರನ್ನು ಕಾಣುವ ಪರಂಪರೆ ನಮ್ಮದು. ತಂದೆ, ತಾಯಿ, ಗುರುವನ್ನು ಗೌರವಿಸುವಂಥ ಸಂಸ್ಕೃತಿ ನಮ್ಮದು. ಹರ ಪೂಜೆ, ಗುರು ಸೇವೆ ಬದುಕಿನಲ್ಲಿ ಮುಖ್ಯ ಎಂದು ಹೇಳಿದರು.
ಬೊಮ್ಮನಹಳ್ಳಿ ಗವಿಮಠದ ಷ. ಬ್ರ. ಗುರುಶಾಂತ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ರೂಡಗಿ ವಿರಕ್ತಮಠದ ಷ ಬ್ರ ಅಭಿನವ ಶಿವಲಿಂಗೇಶ್ವರ ಮಹಾಸ್ವಾಮಿಗಳು, ಯಾದಗಿರಿಯ ಬಸವೇಶ್ವರ ಸ್ವಾಮೀಜಿ, ಮಡ್ಡಿ ಮಣೂರದ ಸಂಗಮೇಶ ಸ್ವಾಮೀಜಿ, ಬಸವನ ಬಾಗೇವಾಡಿಯ ಮುತ್ತಯ್ಯ ಸ್ವಾಮೀಜಿ ಉಪಸ್ಥಿತರಿದ್ದರು.
ಪರಮಾನಂದ ದೇವರ ಪಟ್ಟದ ಪೂಜಾರಿ ಶರಣಬಸು ಪೂಜೇರಿ, ಪುರಾಣಿಕರಾದ ಉಮರಾಣಿಯ ಮುರುಗೇಂದ್ರ ಶಾಸ್ತ್ರಿ,ಗಾಯಕ ವಿರುಪಾಕ್ಷಯ್ಯ ಗೌಡಗಾಂವ, ತಬಲಾ ವಾದಕ ಬಸವರಾಜ ಆಳಂದ ಉಪಸ್ಥಿತರಿದ್ದರು.ಪ್ರಭು ಶಾಸ್ತ್ರಿ ಹೋಮ ಪೂಜೆ ಸಲ್ಲಿಸಿದರು.
ಗ್ರಾಮದಲ್ಲಿ ಶ್ರೀ ಉದಯಲಿಂಗೇಶ್ವರ ದೇವರ ಅಡ್ಡ ಫಲ್ಲಕ್ಕಿ ಮಹೋತ್ಸವವು ವಿವಿಧ ವಾದ್ಯ ಮೇಳ,ಭಜನಾ ಮಂಡಳಿ, ಪುರವಂತರ ಸೇವೆಯೊಂದಿಗೆ ಜರುಗಿತು. ಗ್ರಾಮದ ಮಾಜಿ ಸೈನಿಕರನ್ನು ಸತ್ಕರಿಸಲಾಯಿತು.
ಶಿರಕನಹಳ್ಳಿ ಗ್ರಾಮದ ಲೋಣಿ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಮಾತೋಶ್ರೀ ಶಶಿಕಲಾ ಲೋಣಿ ಅವರ ಪರಿವಾರದಿಂದ ನಾಗಠಾಣ ಪೂಜ್ಯರಿಗೆ ಸ್ಮರಣೀಯ ಭಕ್ತಿಯ ಕಾಣಿಕೆ ರೂಪದಲ್ಲಿ ಬೆಳ್ಳಿಯ ಕಿರೀಟ ಸಮರ್ಪಿಸಲಾಯಿತು. ಶ್ರೀಶೈಲ ಹುಂಡೇಕಾರ ಭಕ್ತಾದಿಗಳಿಗೆ ಮಹಾಪ್ರಸಾದದ ಸೇವೆ ಸಲ್ಲಿಸಿದರು. ನಾಗಠಾಣ,ಗಂಗನಳ್ಳಿ, ಶಿರಕನಹಳ್ಳಿ ಸೇರಿದಂತೆ ಅನೇಕ ಗ್ರಾಮದ ಭಕ್ತರು, ತಾಯಂದಿರು ಪಾಲ್ಗೊಂಡಿದ್ದರು.

Share