ಹಡಪದ ಅಪ್ಪಣ್ಣರ ಕಾಯಕನಿಷ್ಠೆ, ವಿನಯ ಮಾದರಿ: ಮಮತಾ ಮುಳಸಾವಳಗಿ

ಸಪ್ತಸಾಗರ ವಾರ್ತೆ,ವಿಜಯಪುರ, ಅ. 12:
ಕಾಯಕನಿಷ್ಠೆ, ಕಾರ್ಯತತ್ಪರತೆ ಹಾಗೂ ವಿನಯದಿಂದ ಬದುಕಿದ ಹಡಪದ ಅಪ್ಪಣ್ಣ ಅವರು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಶರಣ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದರು ಎಂದು ಸಾಹಿತಿ ಮಮತಾ ಮುಳಸಾವಳಗಿ ಹೇಳಿದರು.
ನಗರದ ಸಹ್ಯಾದ್ರಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಪ್ಪಣ್ಣ ಅವರ ಅಧ್ಯಾತ್ಮಶಕ್ತಿ, ಸರಳತೆ ಹಾಗೂ ವ್ಯಕ್ತಿತ್ವ ಅನುಕರಣೀಯ. ಅಪ್ಪಣ್ಣ ಮತ್ತು ಲಿಂಗಮ್ಮ ಶರಣ ದಂಪತಿಗಳಾಗಿ ಅನುಭಾವದ ಮೇರುಗೇರಿದ್ದರು ಎಂದರು.
ಜಂಬುನಾಥ ಕಂಚ್ಯಾಣಿ ಮಾತನಾಡಿ, ಯುವಕರು ಬಸವಾದಿ ಶರಣರ ವಚನಗಳಲ್ಲಿನ ಆಚಾರ-ವಿಚಾರ ಹಾಗೂ ಅನುಭವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸದೃಢ ಸಮಾಜ ನಿರ್ಮಿಸಲು ಸಾಧ್ಯ ಎಂದರು. ಪರಿಷತ್ತಿನ ಅಧ್ಯಕ್ಷ ಪ್ರೊ. ಸಾಹೇಬಗೌಡ ಬಸರ್ಕೋಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ಬಿ.ಎಸ್. ಬಾಪುಗೊಂಡ ಅಧ್ಯಕ್ಷತೆ ವಹಿಸಿದ್ದರು. ಈರಣ್ಣ ತೊಂಡಿಕಟ್ಟಿ ಸ್ವಾಗತಿಸಿದರು. ಓ.ಎಸ್. ನಾವಿ ವಂದಿಸಿದರು. ಚಂದ್ರಶೇಖರ ನಾಡಗೌಡ, ರವೀಂದ್ರ ಮೆಡೇಗಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share this