ಆರೋಗ್ಯಕರ ಹವ್ಯಾಸಗಳಿಂದ ಸುಂದರ ಸಮಾಜ ನಿರ್ಮಾಣ ಸಾಧ್ಯ: ಬ್ರಹ್ಮಕುಮಾರಿ ಲಲಿತಾ

ಸಪ್ತಸಾಗರ ವಾರ್ತೆ,ವಿಜಯಪುರ, ಆ. 12:
ವಿದ್ಯಾರ್ಥಿಗಳು ಬಾಲ್ಯದಿಂದಲೇ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು, ದುಶ್ಚಟಗಳಿಂದ ದೂರವಿದ್ದರೆ ಆರೋಗ್ಯಕರ ಹಾಗೂ ಸುಂದರ ಸಮಾಜ ನಿರ್ಮಿಸಲು ಸಾಧ್ಯ ಎಂದು ಬ್ರಹ್ಮಕುಮಾರಿ ಲಲಿತಾ ಅಕ್ಕನವರು ಹೇಳಿದರು.
ನಗರದ ಆದರ್ಶನಗರದ ಎಕ್ಸಲೆಂಟ್ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ಶಿವಮಂದಿರ ಆದರ್ಶನಗರ ಹಾಗೂ ಮಾತಾ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ನಶಾಮುಕ್ತ ಭಾರತ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಫ್ಯಾಷನ್ ಮತ್ತು ಪ್ರಚಾರದ ಅಬ್ಬರಕ್ಕೆ ಸಿಲುಕಿ ಗುಟ್ಖಾ, ಮದ್ಯಪಾನ, ಧೂಮಪಾನ ಸೇರಿದಂತೆ ವಿವಿಧ ದುಶ್ಚಟಗಳಿಗೆ ಯುವಜನತೆ ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇಂತಹ ದುಶ್ಚಟಗಳು ಆರೋಗ್ಯ ಹಾಳು ಮಾಡುವುದರ ಜೊತೆಗೆ ಕುಟುಂಬದ ನೆಮ್ಮದಿಗೂ ಧಕ್ಕೆ ತರುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಓದುವ ವಯಸ್ಸಿನಲ್ಲಿಯೇ ದುಶ್ಚಟಗಳಿಂದ ದೂರವಿದ್ದು, ಉತ್ತಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಗುರು ಎಂ.ಐ. ಬಿರಾದಾರ, ಮಾನವನ ಜನ್ಮ ಅಮೂಲ್ಯವಾದದ್ದು. ಜೀವನದುದ್ದಕ್ಕೂ ಸದಾಚಾರ, ಸಕಾರಾತ್ಮಕ ಚಿಂತನೆ ಹಾಗೂ ಉತ್ತಮ ಗುಣಗಳನ್ನು ಬೆಳೆಸಿಕೊಂಡು ವೈಯಕ್ತಿಕವಾಗಿ ಬೆಳೆಯುವುದರ ಜೊತೆಗೆ ಸಮಾಜದ ಒಳಿತಿಗೂ ಕೊಡುಗೆ ನೀಡಬೇಕು ಎಂದರು.
ಎಕ್ಸಲೆಂಟ್ ಸಂಸ್ಥೆಯ ನಿರ್ದೇಶಕ ರಾಜಶೇಖರ ಕೌಲಗಿ ಮಾತನಾಡಿ, ಉತ್ತಮ ಹವ್ಯಾಸಗಳು ಮತ್ತು ರೂಢಿಗಳು ನಮ್ಮ ಹಿತವನ್ನು ಕಾಪಾಡುತ್ತವೆ. ಆದರೆ ದುಶ್ಚಟಗಳು ವ್ಯಕ್ತಿಯ ಅವನತಿಗೆ ಕಾರಣವಾಗುತ್ತವೆ. ವಿದ್ಯಾರ್ಥಿಗಳು ಓದುವ ದಿನಗಳಲ್ಲಿ ಸೃಜನಶೀಲ ಹಾಗೂ ಶೀಲಸಂಪನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾರದಾ ಹಿರೇಮಠ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ವಿಚಾರಗಳನ್ನು ಮೈಗೂಡಿಸಿಕೊಂಡು ಭವಿಷ್ಯವನ್ನು ಸದೃಢಗೊಳಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಗುರುರಾಜ ಬಿರಾದಾರ, ಸುಲೋಚನಾ ಬಿ.ಕೆ., ಪ್ರಭು ಬಿ.ಕೆ., ಶ್ರೀಪತಿ ವಾಲಿಕಾರ, ಎನ್.ಎಚ್. ಬೈಚಬಾಳ, ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಬಡಾವಣೆಯ ನಾಗರಿಕರು ಭಾಗವಹಿಸಿದ್ದರು.

Share this