ಸಪ್ತಸಾಗರ ವಾರ್ತೆ,ವಿಜಯಪುರ, ಆ.2: ಮಹಿಳೆಯರ ಆರೋಗ್ಯವೇ ಕುಟುಂಬ ಹಾಗೂ ಸಮಾಜದ ಆರೋಗ್ಯದ ಮೂಲಾಧಾರವಾಗಿದ್ದು, ಯುವತಿಯರಲ್ಲಿ ಋತುಚಕ್ರ, ಪೌಷ್ಟಿಕ ಆಹಾರ ಮತ್ತು ಆರೋಗ್ಯದ ಬಗ್ಗೆ ಸಮರ್ಪಕ ಅರಿವು ಮೂಡಿಸುವುದು ಅತ್ಯಂತ ಅಗತ್ಯ ಎಂದು ಮಾನ್ಯತಾ ಆಸ್ಪತ್ರೆಯ ವೈದ್ಯೆ ಡಾ. ಶ್ವೇತಾ ಶರಣ್ ಹೇಳಿದರು.
ಮನು ಸಾಮಾಜಿಕ ಜನಜಾಗೃತಿ ವಿವಿಧೋದ್ದೇಶ ಸಂಸ್ಥೆ ಹಾಗೂ ಎ.ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಜುಲೈ 31ರಂದು ಆಯೋಜಿಸಿದ್ದ “ಸ್ವಸ್ಥ ಮಹಿಳೆ–ಸುಂದರ ಸಮಾಜ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮವನ್ನು ಖ್ಯಾತ ಚಿನ್ನ-ಬೆಳ್ಳಿ ವ್ಯಾಪಾರಿ ಹಾಗೂ ಸುವರ್ಣಕಾರ ಸಂಘದ ಖಜಾಂಚಿ ಚೇತನ ದಿ. ಗಿರಿಕವಕರ ಉದ್ಘಾಟಿಸಿ, ಇಂದಿನ ಸಮಾಜದಲ್ಲಿ ಮಹಿಳಾ ಆರೋಗ್ಯ ಕುರಿತ ಜಾಗೃತಿ ಕಾರ್ಯಕ್ರಮಗಳು ಅತ್ಯಗತ್ಯವಾಗಿದ್ದು, ಇಂತಹ ಸಾಮಾಜಿಕ ಕಾರ್ಯಗಳನ್ನು ಸಂಸ್ಥೆ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.
ಮುಖ್ಯ ಉಪನ್ಯಾಸ ನೀಡಿದ ಡಾ. ಶ್ವೇತಾ ಶರಣ್, ಇತ್ತೀಚಿನ ದಿನಗಳಲ್ಲಿ ಯುವತಿಯರಿಗೆ ಋತುಚಕ್ರದ ಕುರಿತು ಸೂಕ್ತ ಮಾರ್ಗದರ್ಶನ ಮತ್ತು ಆಪ್ತ ಸಮಾಲೋಚನೆಯ ಕೊರತೆಯಿಂದ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ಮಹಿಳೆ ಆರೋಗ್ಯವಂತಳಾಗಿದ್ದರೆ ಮಾತ್ರ ಕುಟುಂಬವೂ ಆರೋಗ್ಯಕರವಾಗಿರುತ್ತದೆ. ಒತ್ತಡರಹಿತ ಜೀವನ, ಸಮತೋಲನ ಆಹಾರ, ಸಾಕಷ್ಟು ನೀರು ಸೇವನೆ ಮತ್ತು ನಿಯಮಿತ ಆರೋಗ್ಯ ತಪಾಸಣೆಯಿಂದ ಶೇ.70ರಷ್ಟು ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು.
ಪ್ಲಾಸ್ಟಿಕ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ, ನಿಯಮಿತವಾಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಹಾಗೂ ವೈದ್ಯರ ಸಲಹೆ ಪಡೆದು ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯ ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಕೇಳಿದ ಆರೋಗ್ಯ ಸಂಬಂಧಿತ ಪ್ರಶ್ನೆಗಳಿಗೆ ಅವರು ಸಮಗ್ರ ಉತ್ತರ ನೀಡಿ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಭಾರತಿ ಮಠ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರೊ. ಭಾರತಿ ನಾಯಕೋಡಿ, ಡಾ. ಶುಭಾಷ್ ಕೊನ್ನೂರ, ಎನ್‌ಎಸ್‌ಎಸ್ ಅಧಿಕಾರಿ ಪ್ರೊ. ವಿಜಯಕುಮಾರ ತಳವಾರ ಹಾಗೂ ಸಂಸ್ಥೆಯ ಪದಾಧಿಕಾರಿಗಳಾದ ಅರ್ಚನಾ ಪಾಠಕ್ ಮತ್ತು ಜಯಶ್ರೀ ಅಂಗಡಿ ಉಪಸ್ಥಿತರಿದ್ದರು.
ಸಂಸ್ಥೆಯ ಕಾರ್ಯದರ್ಶಿ ಮೋಹನ ಕಟ್ಟಿಮನಿ ಸ್ವಾಗತಿಸಿದರು. ಸಂಸ್ಥೆಯ ಅಧ್ಯಕ್ಷೆ ಪ್ರೀತಿ ಪತ್ತಾರ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿನಿಯರಿಗೆ 1,000ಕ್ಕೂ ಹೆಚ್ಚು ಉಚಿತ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸಲಾಯಿತು.
ಸ್ವಸ್ಥ ಮಹಿಳೆ–ಸುಂದರ ಸಮಾಜ: ಆರೋಗ್ಯ ಜಾಗೃತಿಗೆ ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್ ವಿತರಣೆ


