ಜಿಲ್ಲಾಧಿಕಾರಿ ಕಚೇರಿಗೆ ಹುಸಿ ಬಾಂಬ್ ಬೆದರಿಕೆ

ಸಪ್ತಸಾಗರ ವಾರ್ತೆ ವಿಜಯಪುರ, ಡಿ. 16:
ಕಿಡಿಗೇಡಿಗಳು ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಇಟ್ಟಿರುವುದಾಗಿ ಮೇಲ್ ಕಳಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೆಲ ಹೊತ್ತು ಆತಂಕಕ್ಕೀಡಾಗಿದ್ದರು.
ಯಾರೋ ಕಿಡಿಗೇಡಿಗಳು ಜಿಲ್ಲಾಧಿಕಾರಿಗಳ ಕಚೇರಿ ಮೇಲ್ ಗೆ ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಮೇಲ್ ಕಳಿಸಿದ್ದರು.
ಈ ವಿಷಯ ಜಿಲ್ಲಾಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆಯೇ ಪೊಲೀಸರಿಗೆ ತಕ್ಷಣ ಸುದ್ದಿ ಮುಟ್ಟಿಸಲಾಯಿತು. ವಿಳಂಬ ಮಾಡದೆ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ನೋಡು ನೋಡುತ್ತಿದ್ದಂತೆಯೇ ಬಾಂಬ್ ನಿಗ್ರಹದಳ ಶ್ವಾನದಳದ ಜೊತೆಗೆ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಎಲ್ಲಾ ಕೊಠಡಿಗಳನ್ನು ತಪಾಸಣೆ ನಡೆಸಲಾಯಿತು. ಡಿಎಸ್ಪಿ, ಸಿಪಿಐ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಈ ವಿಷಯವನ್ನು ತೀರಾ ಗಂಭೀರವಾಗಿ ಪರಿಗಣಿಸಿ ಎಲ್ಲ ಕಡೆ ಜಾಲಾಡಿದರೂ ಎಲ್ಲೂ ಬಾಂಬ್ ಪತ್ತೆಯಾಗಲಿಲ್ಲ. ಇದು ಹುಸಿ ಬಾಂಬ್ ಕರೆ ಎಂದು ಗೊತ್ತಾಯಿತು.

ಆತಂಕ ಬೇಡ
ಸಾರ್ವಜನಿಕರು ಯಾವುದೇ ರೀತಿ ಆತಂಕಕ್ಕೆ ಒಳಗಾಗಬಾರದು. ಕಿಡಿಗೇಡಿಗಳು ಬಾಂಬ್ ಇಟ್ಟಿರುವುದಾಗಿ ಮೇಲ್ ನಲ್ಲಿ ಮೆಸ್ಸೇಜ್ ಹಾಕಿದ್ದರು. ಇದರಿಂದ ಕೆಲ ಹೊತ್ತು ಜನರು ಆತಂಕ್ಕೀಡಾಗಿದ್ದರು. ಆದರೆ ತಪಾಸಣೆ ನಂತರ ಬಾಂಬ್ ಇಟ್ಟಿರುವುದು ಸುಳ್ಳು ಎಂದು ಗೊತ್ತಾಗಿದೆ. ಹೀಗಾಗಿ ಯಾರೂ ಭಯಪಡಬಾರದು ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ತಿಳಿಸಿದ್ದಾರೆ.

Share this