ಪ್ರವಾಸೋದ್ಯಮ ಅಭಿವೃದ್ಧಿಯಿಂದ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿ ಸಾಧ್ಯ: ಡಾ. ಆನಂದ ಕುಲಕರ್ಣಿ

ಸಪ್ತಸಾಗರ ವಾರ್ತೆ,ವಿಜಯಪುರ, ಅ. 13:
ಐತಿಹಾಸಿಕ ವಿಜಯಪುರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ವಿಪುಲ ಅವಕಾಶಗಳಿದ್ದು, ಪ್ರವಾಸೋದ್ಯಮ ಅಭಿವೃದ್ಧಿಯಾದರೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಖ್ಯಾತ ಇತಿಹಾಸ ತಜ್ಞ ಹಾಗೂ ಸಂಶೋಧಕ ಡಾ. ಆನಂದ ಕುಲಕರ್ಣಿ ಹೇಳಿದರು.
ನಗರದ ಶ್ರೀ ಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ದಿ. ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಕ್ರಿಯಾ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ವಿಜಯಪುರ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ವಿಶೇಷ ಉಪನ್ಯಾಸ ನೀಡಿದರು.
ವಿಜಯಪುರವು ಕರ್ನಾಟಕದ ಐತಿಹಾಸಿಕ ರಾಜಧಾನಿಯಾಗಿ ಗುರುತಿಸಿಕೊಂಡಿದ್ದು, ವಿಶ್ವದ ಎರಡನೇ ಅತಿ ದೊಡ್ಡ ಗುಮ್ಮಟ ಸೇರಿದಂತೆ ಹಲವು ಮಹತ್ವದ ಸ್ಮಾರಕಗಳನ್ನು ಹೊಂದಿದೆ. ಗೋಳಗುಮ್ಮಟ, ಇಬ್ರಾಹಿಂ ರೋಜಾ, ಸಂಗೀತ ಮಹಲ್, ಉಪಲಿ ಬುರ್ಜ್, ಬಾರಾ ಕಮಾನ್, ಗಗನ ಮಹಲ್, ಶಿವಗಿರಿ ಸೇರಿದಂತೆ ಅನೇಕ ಐತಿಹಾಸಿಕ ತಾಣಗಳು ಜಿಲ್ಲೆಯ ಪ್ರವಾಸೋದ್ಯಮಕ್ಕೆ ದೊಡ್ಡ ಆಸ್ತಿಯಾಗಿವೆ ಎಂದರು.
ದಶಕಗಳಿಂದ ಸ್ಥಗಿತಗೊಂಡಿರುವ ನವರಸಪುರ ರಾಷ್ಟ್ರೀಯ ಉತ್ಸವವನ್ನು ಪುನರಾರಂಭಿಸುವ ಅಗತ್ಯವಿದ್ದು, ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದ ಇಲಾಖೆಗಳ ಸಮನ್ವಯ ಅತ್ಯಗತ್ಯವಾಗಿದೆ ಎಂದು ಅವರು ಒತ್ತಾಯಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಹಾಗೂ ನಿವೃತ್ತ ಪ್ರಾಚಾರ್ಯ ಡಾ. ಜಿ.ಆರ್. ಕುಲಕರ್ಣಿ, ಪ್ರವಾಸೋದ್ಯಮ ಅಭಿವೃದ್ಧಿಯಿಂದ ಜಿಲ್ಲೆಯ ಆರ್ಥಿಕ ಚಟುವಟಿಕೆಗಳಿಗೆ ವೇಗ ದೊರೆಯುವುದರ ಜೊತೆಗೆ ಯುವಜನರಿಗೆ ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ ಎಂದರು.
ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿ, ವಿಜಯಪುರ ಜಿಲ್ಲೆಯ ಪ್ರವಾಸಿ ತಾಣಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಎಲ್ಲರ ಜವಾಬ್ದಾರಿಯಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿ ಕ್ರಿಯಾ ಸಮಿತಿಯ ಪದಾಧಿಕಾರಿಗಳು ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಹ್ಯಾದ್ರಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಬಿ.ಎಸ್. ಬಾಪುಗೊಂಡ ಅವರು, ವಿಜಯಪುರದ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ, ಪ್ರವಾಸಿ ತಾಣಗಳ ಅಭಿವೃದ್ಧಿ ಹಾಗೂ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಮೂಲಕ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡಬೇಕಿದೆ. ಸ್ಮಾರಕಗಳ ಮಹತ್ವದ ಕುರಿತು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಕ್ರಿಯಾ ಸಮಿತಿಯ ಸದಸ್ಯರಿಗೆ ಸನ್ಮಾನಿಸಿ ಪದಗ್ರಹಣ ಮಾಡಿಸಲಾಯಿತು. ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಸುಧಾ ಬೋಳರೆಡ್ಡಿ ಪ್ರಾರ್ಥಿಸಿದರು. ಡಾ. ಮಾಧವ ಗುಡಿ ಸ್ವಾಗತಿಸಿ ಗೌರವ ಸಮರ್ಪಣೆ ನೆರವೇರಿಸಿದರು. ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಅಂಬಾದಾಸ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸುಭಾಷ ಕನ್ನೂರ ನಿರೂಪಿಸಿದರು. ರವಿ ಕಿತ್ತೂರ ಪರಿಸರ ಗೀತೆ ಹಾಡಿದರು. ಉಪನ್ಯಾಸಕ ಶರಣಗೌಡ ಪಾಟೀಲ ವಂದಿಸಿದರು.
ಸಮಾರಂಭದಲ್ಲಿ ಎಸ್.ಎಂ. ಮಾಲಿಪಾಟೀಲ, ಜಿ.ಬಿ. ಜಿಟ್ಟಿಮನಿ, ಸುರೇಶ ಕೋತ, ಗುಂಡಪ್ಪ ಕಂಬಾರ, ಮಾದೇವ ರೆಬಿನಾಳ, ಜಗದೀಶ ಗಲಗಲಿ, ಜೈನು ಗುಂಡಬಾವಡಿ, ನಾಗರಾಜ ಪತ್ತಾರ, ಅಮೋಘ, ರಾಜೇಂದ್ರ ಕುಲಕರ್ಣಿ, ಸುರೇಶ ಬಿಜಾಪುರ, ಹಿರೇಮಠ, ವಿ.ಆರ್. ಡೋಣೂರ, ಡಾ. ಶಾರದಾ ಮನವಿ, ಶೋಭಾ ನಾವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share this