ರಾಷ್ಟ್ರಧ್ವಜ ಗೌರವವೇ ರಾಷ್ಟ್ರಗೌರವ: ರಾಷ್ಟ್ರೀಯ ಧ್ವಜ ದಿನ ಆಚರಣೆ

ಸಪ್ತಸಾಗರ ವಾರ್ತೆ,ವಿಜಯಪುರ, ಜು. 23:
ಶ್ರೀ ಸಿದ್ದೇಶ್ವರ ಸಂಸ್ಥೆಯ ಸಂಗನಬಸವ ಪಿಯು ಕಾಲೇಜು, ಕವಲಗಿಯಲ್ಲಿ ರಾಷ್ಟ್ರೀಯ ಧ್ವಜ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
1947ರ ಜುಲೈ 22ರಂದು ಭಾರತದ ಸಂವಿಧಾನ ಸಭೆಯು ತ್ರಿವರ್ಣ ಧ್ವಜವನ್ನು ರಾಷ್ಟ್ರಧ್ವಜವಾಗಿ ಅಂಗೀಕರಿಸಿದ ಐತಿಹಾಸಿಕ ದಿನವನ್ನು ಸ್ಮರಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳನ್ನು ಹಾಡುವ ಮೂಲಕ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು.
ಕಾಲೇಜಿನ ಪ್ರಾಚಾರ್ಯರಾದ ಹೇಮಂತ್ ಕೃಷ್ಣ ಮಾತನಾಡಿ, “ರಾಷ್ಟ್ರಧ್ವಜವು ದೇಶದ ಏಕತೆ, ಅಖಂಡತೆ ಹಾಗೂ ಸ್ವಾತಂತ್ರ್ಯದ ಸಂಕೇತವಾಗಿದೆ. ಪ್ರತಿಯೊಬ್ಬ ನಾಗರಿಕರೂ ರಾಷ್ಟ್ರಧ್ವಜಕ್ಕೆ ಗೌರವ ನೀಡಿ ಅದರ ಮೌಲ್ಯವನ್ನು ಉಳಿಸಬೇಕು” ಎಂದು ಹೇಳಿದರು.
ವಿದ್ಯಾರ್ಥಿನಿ ಲಕ್ಷ್ಮೀ ಭೈರಗೊಂಡ ಕಾರ್ಯಕ್ರಮ ನಿರೂಪಣೆ ನಡೆಸಿದರೆ, ವಿದ್ಯಾರ್ಥಿನಿ ನಿಕಿತಾ ತ್ರಿವರ್ಣ ಧ್ವಜದ ವಿಶೇಷತೆ ಮತ್ತು ಅದರ ಮಹತ್ವವನ್ನು ವಿವರಿಸಿದರು.
ಇಂಗ್ಲಿಷ್ ಉಪನ್ಯಾಸಕ ವಿನೋದರಾಜ್ ಉತ್ನಾಳ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿ ರಾಷ್ಟ್ರೀಯ ಧ್ವಜ ದಿನದ ಮಹತ್ವವನ್ನು ಸ್ಮರಿಸಿದರು.
ಶ್ರೀ ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷ ಬಸನಗೌಡ ಪಾಟೀಲ (ಯತ್ನಾಳ), ಚೇರ್ಮನ್ ಬಸಯ್ಯ ಹಿರೇಮಠ ಸೇರಿದಂತೆ ಸಂಸ್ಥೆಯ ನಿರ್ದೇಶಕರು ಹಾಗೂ ಪದಾಧಿಕಾರಿಗಳು ಶುಭಾಶಯ ಕೋರಿದರು.

Share this