ಸಪ್ತಸಾಗರ ವಾರ್ತೆ,ವಿಜಯಪುರ, ಜು.7: ನಗರದ ಹೊರವಲಯದ ಸೊಲ್ಲಾಪುರ ರಸ್ತೆಯ ರಾಷ್ಟ್ರೀಯ ಹೆದ್ದಾರಿ-50 (ಎನ್‌ಎಚ್-50)ರಲ್ಲಿ ಮಂಗಳವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್‌ನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೋರ್ವ ಪಾದಚಾರಿ ಯುವಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರನ್ನು ವಿಜಯಪುರ ಮೂಲದ ಭೂಷಣ್ ನಾಯಕ (24) ಹಾಗೂ ಗಗನ್ ಪರಮೇಶ (19) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡಿರುವ ಬಿಲಾಲ್ ಜಾತಗಾರ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಡಿಕ್ಕಿಯ ರಭಸಕ್ಕೆ ಇಬ್ಬರೂ ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದ ಬಳಿಕ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.
ಘಟನಾ ಸ್ಥಳಕ್ಕೆ ವಿಜಯಪುರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಈ ಘಟನೆ ವಿಜಯಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿಜಯಪುರದಲ್ಲಿ ಭೀಕರ ರಸ್ತೆ ಅಪಘಾತ: ಲಾರಿ–ಬೈಕ್ ಡಿಕ್ಕಿಗೆ ಇಬ್ಬರು ಯುವಕರು ಸ್ಥಳದಲ್ಲೇ ಸಾವು


