ಸಪ್ತಸಾಗರ ವಾರ್ತೆ ವಿಜಯಪುರ, ಆ. 31:
ವಿಜಯಪುರ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜ್ ಬೇಕು ಎನ್ನುವ ಇರಾದೆ ನನ್ನದೂ ಇದೆ. ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜ್ ಬರುವುದನ್ನು ನಾನು ವಿರೋಧಿಸುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಸ್ಪಷ್ಟಪಡಿಸಿದರು.
ಭಾನುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ವಿಜಯಪುರ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜ್ ಬರುವುದಕ್ಕೆ ನಾನು ವಿರೋಧಿಯಾಗಿದ್ದೇನೆ ಎಂಬ ಅರ್ಥ ಬರುವಂತೆ ಕೆಲವರು ಬಿಂಬಿಸುತ್ತಿದ್ದಾರೆ. ಆದರೆ ಇದರಲ್ಲಿ ನನ್ನ ಯಾವುದೇ ಪಾತ್ರ ಇಲ್ಲ. ನಾನು ಕೂಡಾ ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಬೇಕು ಎನ್ನುವ ಸಾಲಿಗೆ ಸೇರಿದವನು ಎಂದು ಹೇಳಿದರು.
ನನ್ನದು ಮೆಡಿಕಲ್ ಕಾಲೇಜು ಇದೆ. ಡೀಮ್ಡ್ ಯುನಿವರ್ಸಿಟಿ ಇದೆ. ನಾನು ಮನಸ್ಸು ಮಾಡಿದರೆ ಇನ್ನೂ 10 ಮೆಡಿಕಲ್ ಕಾಲೇಜು ಮಾಡಬಹುದು. ನನಗೆ ಯಾವುದೇ ಸ್ವಾರ್ಥ ಇಲ್ಲ. ನಾನು ಕೂಡಾ ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಅವರಿಗೆ ಕೇಳಿದ್ದೇನೆ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು.
ನಾನು ವೈದ್ಯಕೀಯ ಶಿಕ್ಷಣ ಸಚಿವನಾಗಿದ್ದ ವೇಳೆ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಕುರಿತು ಪ್ರಯತ್ನ ಮಾಡಿದ್ದ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯ ಸಚಿವರು ಹಾಗೂ ಶಾಸಕರು ಸಹಕಾರ ನೀಡಲಿಲ್ಲ ಎಂಬ ಸಚಿವ ಶಿವಾನಂದ ಪಾಟೀಲ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ, ಸಚಿವರು, ಕ್ಯಾಬಿನೆಟ್ ಇದೆ. ಫೋರ್ಮ್ ಇದೆ. ಮುಖ್ಯಮಂತ್ರಿಗಳಿದ್ದಾರೆ. ವೈದ್ಯಕೀಯ ಸಚಿವರಿದ್ದಾರೆ. ಅಲ್ಲಿ ಕುಳಿತು ಚರ್ಚಿಸಲಿ. ಅದು ಬಿಟ್ಟು ಇಲ್ಲಿ ಬಂದು ಹೇಳಿಕೆ ನೀಡುವುದು, ಅಸಹಕಾರ ಮಾಡಿದರು ಎಂದು ನನ್ನ ಹೆಸರು ಬಳಸಿಕೊಂಡಿದ್ದಾರೆ. ನಾನು ಕೂಡಾ ಸರ್ಕಾರಿ ಮೆಡಿಕಲ್ ಕಾಲೇಜ್ ಆಗಬೇಕು ಎನ್ನುತ್ತೇನೆ ಎಂದರು.
ಆದರೂ ಸಚಿವರು ನನ್ನ ಹೆಸರು ಹೇಳುತ್ತಿರುವುದು ಸರಿಯಲ್ಲ. ಪದೇ ಪದೇ ಸುಮ್ಮನೆ ಈ ತರಹ ಮುಜುಗರ ಹೇಳಿಕೆ ಕೊಡುವಂತಹದ್ದು ಸರಿಯಲ್ಲ. ನಾನೂ ಹೇಳಿಕೆ ಕೊಡಬಹುದು. ವೈದ್ಯಕೀಯ ಸಚಿವರಿಗೆ ಭೇಟಿಯಾಗಲಿ. ನಾನೂ ಶಿವಾನಂದ ಪಾಟೀಲರ ಜೊತೆಗೆ ಬರುತ್ತೇನೆ ಎಂದರು. ನಾನೂ ಐದು ವರ್ಷ ಸಚಿವನಿದ್ದಾಗ ನನಗೆ ಯಾರೆಲ್ಲಾ ಏನೇನು ಸಹಕಾರ ನೀಡಿದ್ದಾರೆ ಎಂದು ಹೇಳಿದರೆ ಅದು ಒಂದು ದೊಡ್ಡ ಪುಸ್ತಕವೇ ಆಗುತ್ತದೆ ಎಂದು ಹೇಳಿದರು.
ಅಲ್ ಅಮೀನ್ ಮೆಡಿಕಲ್ ಕಾಲೇಜ್ ತಮಗೆ ಕೊಟ್ಟರೂ ನಮಗೆ ಬೇಡ ಎಂದರು.
ನನಗೂ ಪಿಪಿಪಿ ಮಾದರಿ ಸರ್ಕಾರಿ ಮೆಡಿಕಲ್ ಕಾಲೇಜ್ ಬೇಡ: ಸಚಿವ ಎಂ.ಬಿ. ಪಾಟೀಲ
