‘ಸಚಿವ ಸ್ಥಾನ ತಪ್ಪಿಸಲು ನಾನೇ ಕಾರಣ’ ಎಂಬ ಆರೋಪ ಸುಳ್ಳು

ವಿಜಯಪುರಕ್ಕೆ ಮತ್ತೊಂದು ಸಚಿವ ಸ್ಥಾನಕ್ಕಾಗಿ ನಾನೇ ಒತ್ತಾಯಿಸಿದ್ದೆ: ಎಂ.ಬಿ. ಪಾಟೀಲ್

ನಾಗೇಂದ್ರ ದೆಹಲಿ ಪ್ರವಾಸದ ಬಗ್ಗೆ ನನಗೆ ಮಾಹಿತಿ ಇಲ್ಲ; ನ್ಯಾಯಾಲಯದ ನಿರ್ಬಂಧವೂ ಗೊತ್ತಿಲ್ಲಮಾಹಿತಿ ಪಡೆದು ಮಾತನಾಡುವೆ

ಸಪ್ತಸಾಗರ ವಾರ್ತೆ | ವಿಜಯಪುರ, ಆ.10:
ವಿಜಯಪುರ ಜಿಲ್ಲೆಯಲ್ಲಿ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನೊಳಗೆ ಕೇಳಿಬರುತ್ತಿರುವ ಅಸಮಾಧಾನ ಹಾಗೂ ಆರೋಪಗಳಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಸೋಮವಾರ ವಿಜಯಪುರ ನಗರದಲ್ಲಿ ಸ್ಪಷ್ಟ ಪ್ರತಿಕ್ರಿಯೆ ನೀಡಿದ್ದಾರೆ.
“ಸಚಿವ ಸ್ಥಾನ ತಪ್ಪಿಸಲು ನಾನೇ ಕಾರಣ ಎಂಬ ಆರೋಪ ಸರಿಯಲ್ಲ. ವಿಜಯಪುರ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದ್ದೇ ನಾನೇ. ಆದರೆ ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಅಂತಿಮ ತೀರ್ಮಾನ ಮುಖ್ಯಮಂತ್ರಿ ಹಾಗೂ ಪಕ್ಷದ ಹೈಕಮಾಂಡ್‌ಗೆ ಸೇರಿದ್ದು” ಎಂದು ಅವರು ಸ್ಪಷ್ಟಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರಾದ ಸಿ.ಎಸ್. ನಾಡಗೌಡ ಹಾಗೂ ಯಶವಂತರಾಯಗೌಡ ಪಾಟೀಲರಿಗೆ ಸಚಿವ ಸ್ಥಾನ ತಪ್ಪಲು ಎಂ.ಬಿ. ಪಾಟೀಲ್ ಕಾರಣ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದರು.
“ಸಚಿವ ಸ್ಥಾನ ಏಕೆ ಸಿಕ್ಕಿಲ್ಲ ಎಂಬುದನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ರಾಹುಲ್ ಗಾಂಧಿ ಅವರನ್ನು ಕೇಳಬೇಕು. ಸಚಿವ ಸ್ಥಾನ ನೀಡುವ ಅಧಿಕಾರ ನನ್ನ ಕೈಯಲ್ಲಿಲ್ಲ” ಎಂದು ತಿರುಗೇಟು ನೀಡಿದರು.

ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನಕ್ಕಾಗಿ ಒತ್ತಾಯ

ವಿಜಯಪುರ ಜಿಲ್ಲೆಗೆ ಈಗಿರುವ ಸಚಿವ ಸ್ಥಾನಗಳ ಜೊತೆಗೆ ಮತ್ತೊಂದು ಸ್ಥಾನ ನೀಡಬೇಕೆಂಬ ಬೇಡಿಕೆಯನ್ನು ತಾನೇ ಪಕ್ಷದ ವರಿಷ್ಠರ ಮುಂದೆ ಇಟ್ಟಿದ್ದಾಗಿ ಎಂ.ಬಿ. ಪಾಟೀಲ್ ತಿಳಿಸಿದರು.
“ಜಿಲ್ಲೆಯ ಹಿತದೃಷ್ಟಿಯಿಂದ ಮತ್ತೊಂದು ಸಚಿವ ಸ್ಥಾನ ನೀಡಬೇಕು ಎಂದು ನಾನೇ ಒತ್ತಾಯಿಸಿದ್ದೇನೆ. ನಿರ್ಧಾರ ಕೈಗೊಳ್ಳುವುದು ಹೈಕಮಾಂಡ್. ಹೀಗಿರುವಾಗ ಸಚಿವ ಸ್ಥಾನ ತಪ್ಪಿಸಲು ನಾನೇ ಕಾರಣ ಎನ್ನುವುದು ಅರ್ಥಹೀನ” ಎಂದರು.
‘ಯಾರನ್ನು ಸಚಿವರನ್ನಾಗಿಸಬೇಕು ಎಂಬುದು ನನ್ನ ಕೈಯಲ್ಲಿಲ್ಲ’
ರಾಜ್ಯದಲ್ಲಿ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಗೆ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ ಹಲವು ಶಾಸಕರ ಅಸಮಾಧಾನ ಬಹಿರಂಗವಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಸಚಿವ ಸ್ಥಾನ ಹಂಚಿಕೆ ಪಕ್ಷದ ಆಂತರಿಕ ನಿರ್ಧಾರವಾಗಿದ್ದು, ಈ ಕುರಿತು ಅಂತಿಮ ತೀರ್ಮಾನವನ್ನು ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹೈಕಮಾಂಡ್ ಕೈಗೊಳ್ಳಲಿದೆ ಎಂದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲಾ ಹಾಗೂ ರಾಹುಲ್ ಗಾಂಧಿ ಅವರು ಈ ಕುರಿತು ನಿರ್ಧರಿಸಲಿದ್ದಾರೆ ಎಂದು ಹೇಳಿದರು.

ನಾಗೇಂದ್ರ ದೆಹಲಿ ಪ್ರವಾಸದ ಬಗ್ಗೆ ‘ನನಗೆ ಗೊತ್ತಿಲ್ಲ’

ಇದೇ ವೇಳೆ, ನ್ಯಾಯಾಲಯದ ನಿರ್ಬಂಧದ ನಡುವೆಯೂ ಸಚಿವ ನಾಗೇಂದ್ರ ಅವರು ದೆಹಲಿಗೆ ತೆರಳಿರುವ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಂ.ಬಿ. ಪಾಟೀಲ್, “ಸಚಿವ ನಾಗೇಂದ್ರ ದೆಹಲಿಗೆ ಹೋಗಿರುವ ವಿಚಾರ ನನಗೆ ಗೊತ್ತಿಲ್ಲ. ರಾಜ್ಯದ ಆಚೆ ಹೋಗಬಾರದು ಎಂದು ನ್ಯಾಯಾಲಯ ನಿರ್ಬಂಧ ಹೇರಿರುವುದೂ ನನಗೆ ತಿಳಿದಿಲ್ಲ” ಎಂದು ಹೇಳಿದರು.
ಈ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಂಡ ಬಳಿಕ ಮಾತನಾಡುವುದಾಗಿ ಅವರು ಸ್ಪಷ್ಟಪಡಿಸಿದರು.
ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ವಿಜಯಪುರ ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನಕ್ಕೆ ಸಂಬಂಧಿಸಿದಂತೆ ಎದ್ದಿರುವ ಅಸಮಾಧಾನದ ನಡುವೆ, ‘ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ಬೇಕು’ ಎಂಬ ಬೇಡಿಕೆಯನ್ನು ತಾನೇ ಮುಂದಿಟ್ಟಿದ್ದೇನೆ ಎಂಬ ಎಂ.ಬಿ. ಪಾಟೀಲ್ ಅವರ ಹೇಳಿಕೆ ಇದೀಗ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.

Share this