ಸಪ್ತಸಾಗರ ವಾರ್ತೆ ವಿಜಯಪುರ, ಜ. 9:
ಯಾರೇ ಒಳ್ಳೆ ಕೆಲಸ ಮಾಡಿದರೂ ಅವರನ್ನು ನಾನು ಅಭಿನಯಿಸುತ್ತೇನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಳ್ಳೆ ಕೆಲಸ ಮಾಡಿದ್ದಾರೆ. ಅವರನ್ನು ಅಭಿನಂದಿಸುತ್ತೇನೆ. ಅಭಿನಂದಿಸಿದ ಮಾತ್ರಕ್ಕೆ ನಾನು ಸಿದ್ದರಾಮಯ್ಯ ಏಜೆಂಟ್ ಅಲ್ಲ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
ವಿಜಯಪುರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಒಳ್ಳೆ ಕೆಲಸ ಮಾಡಿದವರಿಗೆ ಅಭಿನಂದನೆ ಹೇಳುವುದು ನನ್ನ ಸಂಸ್ಕಾರ. ಅದು ನನ್ನ ಧರ್ಮ. ಅವರು ಒಳ್ಳೆಯ ಕಾರ್ಯಕ್ರಮ ಮಾಡಿದ್ದಾರೆ. ಹೀಗಾಗಿ ಅವರನ್ನು ಬಣ್ಣಿಸುವುದು ನನ್ನ ಕರ್ತವ್ಯ. ಇದಕ್ಕಾಗಿ ನಾನು ಯಾರಿಗೂ ಅಂಜುವುದಿಲ್ಲ. ಸಿದ್ಧರಾಮಯ್ಯ ಅವರ ಏಜೆಂಟ್ ಕೂಡಾ ಅಲ್ಲ, ನಾನು ಸಿದ್ಧರಾಮಯ್ಯ ಏಜೆಂಟ್ ಎಂದು ಅನೇಕರು ಹೇಳುತ್ತಾರೆ ಎಂದರು.
ಒಳ್ಳೆಯ ಕೆಲಸ ಮಾಡಿದಾಗ ಅವರನ್ನು ಹೊಗಳಿದ್ದೇನೆ, ಕೆರೆ ತುಂಬುವ ಯೋಜನೆ, ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಅವರ ಹೆಸರು ಇರಿಸಿದ್ದಕ್ಕೆ ಹಾಗೂ ಕೇಂದ್ರ ಬಸ್ ನಿಲ್ದಾಣದಲ್ಲಿ ರಾಣಿ ಚೆನ್ನಮ್ಮ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದಕ್ಕೆ ನಾನು ಅಭಿನಂದನೆ ಸಲ್ಲಿಸುವೆ,
ಸಂಗೊಳ್ಳಿ ರಾಯಣ್ಣನ ಪೂರ್ವಜನರು ಹತ್ತರಕಿಯವರು, ಕಾಲಘಟ್ಟದ ಅನಿವಾರ್ಯತೆ ಹಾಗೂ ಬರಗಾಲದ ಹಿನ್ನೆಲೆಯಲ್ಲಿ ಸಂಗೊಳ್ಳಿಗೆ ಹೋಗಿದ್ದರು, ಸಂಗೊಳ್ಳಿ ರಾಯಣ್ಣನ ಜನ್ಮಭೂಮಿ ವಿಜಯಪುರವೇ. ವೀರ ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಅವರದ್ದು ತಾಯಿ ಮಗನ ಸಂಬಂಧ. ಸಂಗೊಳ್ಳಿ ರಾಯಣ್ಣನ ಗಲ್ಲಿಗೇರಿದ ಪವಿತ್ರ ಸ್ಥಳ ಕಾಲಿಡುತ್ತಿದ್ದೆ. ಆಗ ಸುಪ್ರೀಂಕೋರ್ಟ್ ನಲ್ಲಿ ಸಕ್ಕರೆ ಕಾರ್ಖಾನೆ ಹೋರಾಟಗಾರರು ಸ್ವಾರ್ಥಕ್ಕಾಗಿ ಹೋರಾಟ ಮಾಡಲಿಲ್ಲ. ಕುರ್ಚಿಗಾಗಿ ಹೋರಾಟ ಮಾಡಲಿಲ್ಲ. ಸಂಗೊಳ್ಳಿ ರಾಯಣ್ಣ, ವಡ್ಡರ ಯಲ್ಲಣ್ಣನಂತಹ ಮಹನೀಯರು ದೇಶದ ಸ್ವಾತಂತ್ರö್ಯಕ್ಕಾಗಿ ಹೋರಾಡಿದ ಅಪ್ರತಿಮರು, ದೇಶದ ಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಗಾರ್ತಿ ಕಿತ್ತೂರ ರಾಣಿ ಚೆನ್ನಮ್ಮ ಎಂದರು.
ನಗುತ್ತಲೇ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಭಗತಸಿಂಗ್ ಅವರಂತೆ ಸಂಗೊಳ್ಳಿ ರಾಯಣ್ಣನವರ ಜೊತೆ ಏಳು ಜನ ಗಲ್ಲಿಗೇರಿದ್ದಾರೆ, ಅವರೆಲ್ಲರ ತ್ಯಾಗವನ್ನು ನಾವು ನಿತ್ಯ ಸ್ಮರಿಸಬೇಕು ಎಂದರು.
ನಗರದಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ಪ್ಲೖಓವರ್ ನಿರ್ಮಾಣ ಅವಶ್ಯಕತೆ ಇದೆ. ದ್ರಾಕ್ಷಾ ಮಂಡಳಿಗೆ 100 ಕೋಟಿ ರೂ. ಕೊಡುವುದಾಗಿ ಘೋಷಣೆ ಮಾಡಿದ್ದರು. ಈ ಬಗ್ಗೆ ಮೊನ್ನೆ ಸದನದಲ್ಲಿಯೂ ಸಹ ಮುಖ್ಯಮಂತ್ರಿಗಳು ಮಿಸ್ಟರ್ ಯತ್ನಾಳ ರೆಡಿ ಎಂದಿದ್ದಾರೆ. ಅದೇ ರೀತಿ ಮುಖ್ಯಮಂತ್ರಿಗಳು ನುಡಿದಂತೆ ನಡೆಯಬೇಕು ಎಂದು ಯತ್ನಾಳ ನುಡಿದರು.
ಬಜೆಟ್‌ನಲ್ಲಿ ಮೆಡಿಕಲ್ ಕಾಲೇಜ್ ಘೋಷಣೆ ಮಾಡಿ
ಸಕ್ಕರೆ ಸಚಿವ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಬರುವ ಬಜೆಟ್‌ನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ಘೋಷಣೆ ಮಾಡುವ ಮೂಲಕ ಜಿಲ್ಲೆಯ ಜನತೆಯ ಬೇಡಿಕೆಯನ್ನು ಈಡೇರಿಸಿ ಎಂದು ವಿನಂತಿಸಿದರು. ಸಂಪೂರ್ಣ ನೀರಾವರಿಯ ಕನಸು ಕಂಡವರು ಅನೇಕರು, ದಿ.ಸುಗಂಧಿ ಮುರಿಗೆಪ್ಪಣ್ಣ ಸೇರಿದಂತೆ ಅನೇಕರು ಹೋರಾಟ ಮಾಡಿದ್ದು, ಅವರೆಲ್ಲ ಮಹನೀಯರ ಕನಸನ್ನು ನನಸು ಮಾಡಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೀರಾವರಿಗೆ ದೊಡ್ಡ ಮಟ್ಟದ ಅನುದಾನ ನೀಡಿ ಸಹಕರಿಸಬೇಕು ಎಂದು ಕರೆ ನೀಡಿದರು.
ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಮಹಾಸ್ವಾಮೀಜಿ ಆಶೀವರ್ಚನ ನೀಡಿ, ಕರ್ನಾಟಕ ವಿಧಾನಸೌಧದ ಎದುರು ಸಂಸತ್ ಭವನ ಮಾದರಿಯಲ್ಲಿ ರಾಣಿ ಚೆನ್ನಮ್ಮನವರ ಅಶ್ವಾರೂಢ ಪ್ರತಿಮೆ ಸ್ಥಾಪಿಸಿ ಎಂದು ಸಲಹೆ ನೀಡಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಚಿವ ಡಾ.ಎಂ.ಬಿ. ಪಾಟೀಲ ಉಪಸ್ಥಿತರಿದ್ದರು. ಮನಗೂಳಿ ಹಿರೇಮಠದ ಶ್ರೀ ಸಂಗನಬಸವ ಸ್ವಾಮೀಜಿ, ಬುರಾಣಪೂರದ ಮಾತೋಶ್ರೀ ಯೋಗೇಶ್ವರಿ ಮಾತಾಜಿ ಸಾನ್ನಿಧ್ಯ ವಹಿಸಿದ್ದರು.
ಸಚಿವರಾದ ರಾಮಲಿಂಗಾರೆಡ್ಡಿ, ಶಿವಾನಂದ ಪಾಟೀಲ, ಡಾ.ಎಚ್.ಸಿ. ಮಹಾದೇವಪ್ಪ, ಡಾ.ಎಂ.ಸಿ. ಸುಧಾಕರ, ಭೈರತಿ ಸುರೇಶ, ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ಸಾಬೂನು-ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್. ನಾಡಗೌಡ, ಶಾಸಕರಾದ ಯಶವಂತರಾಯಗೌಡ ಪಾಟೀಲ, ವಿಠ್ಠಲ ಕಟಕಧೋಂಡ, ಅಶೋಕ ಮನಗೂಳಿ, ರಾಜುಗೌಡ ಪಾಟೀಲ ಕುದರಿಸಾಲೋಡಗಿ, ಸುನೀಲಗೌಡ ಪಾಟೀಲ, ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಎಸ್. ಕವಲಗಿ, ಮೇಯರ್ ಎಂ.ಎಸ್. ಕರಡಿ, ವಿಡಿಎ ಅಧ್ಯಕ್ಷ ಕನ್ನಾನ್ ಮುಶ್ರೀಫ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಇಲಿಯಾಸ ಬೋರಾಮಣಿ, ಜಿ.ಪಂ. ಮಾಜಿ ಅಧ್ಯಕ್ಷ ಉಮೇಶ ಕೋಳಕೂರ, ವಿವಿಧ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಆಯುಕ್ತರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ವಿರೇಶ ವಾಲಿ ಹಾಗೂ ಸಂಗಡಿಗರು ನಾಡಗೀತೆ ಪ್ರಸ್ತುತಪಡಿಸಿದರು. ರಾಜಶೇಖರ ದೈವಾಡಿ ಹಾಗೂ ಸಂಗೀತಾ ಮಠಪತಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾಧಿಕಾರಿ ಡಾ.ಕೆ. ಆನಂದ ಸ್ವಾಗತಿಸಿದರು.


