ಹಿರಿಯರು ನೀಡಿದ ಸಂಸ್ಕಾರದ ಬಲದಿಂದ ಎತ್ತರಕ್ಕೆ ಬೆಳೆದಿದ್ದೇನೆ: ಸಂಗಮೇಶ ಬಬಲೇಶ್ವರ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 20:
ಅಂದು ಗುರು ಹಿರಿಯರು ಹಾಗೂ ಪೂಜ್ಯರು ನೀಡಿದ ಸಂಸ್ಕಾರದ ಬಲದಿಂದ ಇಂದು ನಾನು 2 ಕೋಟಿ ಮಕ್ಕಳ ಹಕ್ಕುಗಳನ್ನು ದೊರಕಿಸಿ ಕೊಡುವುದಕ್ಕಾಗಿ ಶ್ರಮಿಸುವ ಅವಕಾಶ ಸಿಕ್ಕಿದೆ. ಒಂದು ಕಾಲದಲ್ಲಿ ಶಿಕ್ಷಣ ಕಾಶಿ ಎಂದಾಗ ಎಲ್ಲರೂ ಕಡಲ ತಡಿ ಎಡೆಗೆ ದೃಷ್ಠಿ ಹಾಯಿಸುತ್ತಿದ್ದರು. ಆದರೆ ಇಂದು ಬಸವರಾಜ್ ಕೌಲಗಿ ಅವರು ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡಿ ಎಲ್ಲರೂ ವಿಜಯಪುರದ ಕಡೆಗೆ ತಿರುಗಿ ನೋಡುವಂತೆ ಮಾಡಿದ್ದಾರೆ ಎಂದು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ದಿಕ್ಸೂಚಿ ಕಾರ್ಯಕ್ರಮ ಹಾಗೂ ಎಕ್ಸಲಂಟ್ ಅಮೃತವಾಣಿ ಸರಣಿ ಉಪನ್ಯಾಸ ಮಾಲಿಕೆಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರದ ವತಿಯಿಂದ ನನಗೆ ನೀಡಿದ ಈ ಜವಾಬ್ದಾರಿಯ ಫಲದಿಂದ ಇಂದು ಯಾವೊಬ್ಬ ಮಗುವು ಕೂಡ ಅನಾಥ ಪ್ರಜ್ಞೆಯಿಂದ ಬಳಲುವುದನ್ನು ತಡೆಯುವುದಕ್ಕೆ ಸಾಧ್ಯವಾಗಿದೆ. ಒಂದು ಕಾಲದಲ್ಲಿ ನಾನು ಅನುಭವಿಸಿದ ನೋವು ಇಂದು ಯಾವ ಮಗುವು ಅನುಭವಿಸಬಾರದು ಎನ್ನುವ ಕಾರಣದಿಂದ ಹಗಲು ರಾತ್ರಿ ಎನ್ನದೆ ಕಾಲಿಗೆ ಚಕ್ರ ಕಟ್ಟಿಕೊಂಡು ಸುತ್ತುತ್ತಿದ್ದೇನೆ. ನನಗೆ ದೊರೆಕಿದ ಅವಕಾಶವನ್ನು ಎಂದಿಗೂ ಸ್ವಾರ್ಥಕ್ಕಾಗಿ ಬಳಸಿಕೊಳ್ಳದೆ ಸಮಾಜಕ್ಕಾಗಿ ಸಮರ್ಪಣಾ ಭಾವದಿಂದ ದುಡಿಯುತ್ತೇನೆ. ಇದಕ್ಕೆಲ್ಲ ಕಾರಣವಾಗಿದ್ದು ಬಸವರಾಜ ಕೌಲಗಿ ಅವರಂತಹ ಗುರುಗಳ ಅಡಿಯಲ್ಲಿ ಕುಳಿತು ಕಲಿತಿದ್ದು, ನಮ್ಮ ಮನೆಯಲ್ಲಿ ದೊರೆತ ಸಂಸ್ಕಾರದ ಫಲವಾಗಿದೆ. ಹೀಗಾಗಿ ಇಂದು ಪ್ರಾರಂಭಗೊಳ್ಳುತ್ತಿರುವಃತಹ ಎಕ್ಸಲಂಟ್ ಅಮೃತವಾಣಿ ಸರಣಿ ಉಪನ್ಯಾಸ ಮಾಲಿಕೆಯು ಸಂಸ್ಕಾರ ಬಿತ್ತುವ ಕಾರ್ಯ ಮಾಡಲಿ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥಾಪಕ ಎನ್.ಎಂ. ಬಿರಾದಾರ, ವಿದ್ಯಾರ್ಥಿ ಜೀವನದಲ್ಲಿ ದೊಡ್ಡ ದೊಡ್ಡ ಕನಸಿನೆಡೆಗೆ ಹೆಜ್ಜೆ ಹಾಕುವ ಬದಲಾಗಿ ಅಲ್ಪ ತೃಪ್ತಿಯಲ್ಲಿಯೇ ಬದುಕು ಕಟ್ಟಿಕೊಳ್ಳುವ ಹಂತಕ್ಕೆ ಇಳಿದಿದ್ದೇವೆ. ಹೀಗಾಗಿ ದೊಡ್ಡ ಸ್ಥಾನ ಪಡೆಯಬೇಕಾದವರು ಅಲ್ಪ ಸ್ಥಾನದಲ್ಲಿಯೇ ಉಳಿಯುವಂತಾಗಿದೆ. ಇಂದು ಮಕ್ಕಳಲ್ಲಿ ಮೌಲ್ಯಗಳನ್ನು ಬಿತ್ತುವ ಮೂಲಕ ವಿಕಾಸದ ಹಾದಿಯಲ್ಲಿ ಸಾಗುವಂತೆ ಪ್ರೋತ್ಸಾಹ ಮಾಡುವುದಕ್ಕೆ ಇಂತಹ ಕಾರ್ಯಕ್ರಮಗಳು ಅತ್ಯಂತ ಅಗತ್ಯವಾಗಿವೆ. ಸಂಸ್ಕಾರ ಕಲಿತ ವ್ಯಕ್ತಿ ಸಮಾಜದಲ್ಲಿ ಸಾಧಕನಾಗಿ ಹೊರ ಹೊಮ್ಮುತ್ತಾನೆ. ಅದಕ್ಕೆ ಹಲವಾರು ಜನಗಳನ್ನು ಉದಾಹರಣೆ ನೀಡಬಹುದಾಗಿದ್ದು. ಎಕ್ಸಲಂಟ್ ವಿದ್ಯಾರ್ಥಿಗಳು ಸಹ ಅದೇ ಹಾದಿಯಲ್ಲಿ ಸಾಗುವ ಭರವಸೆ ಮೂಡಿದೆ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಬಾಲಗಾಂವ ಕಾತ್ರಾಳದ ಗುರುದೇವಾಶ್ರಮದ ಪ.ಪೂ.ಡಾ. ಅಮೃತಾನಂದ ಸ್ವಾಮೀಜಿಯವರು, ಯಾವ ಸಂಸ್ಥೆಗಳು ಆದರ್ಶಗಳನ್ನು ಇಟ್ಟುಕೊಂಡಿರುತ್ತವೆಯೋ ಅಂತಹ ಸಂಸ್ಥೆಗಳು ಮಾತ್ರ ಸಮಾಜಕ್ಕೆ ಏನಾದರೂ ಕೊಡುಗೆ ನೀಡುವುದಕ್ಕೆ ಸಾಧ್ಯವಾಗುತ್ತದೆ. ಶಿಕ್ಷಣ ಕೊಡುವುದು ಮಾತ್ರ ನನ್ನ ಕೆಲಸ ಎನ್ನುವ ಬದಲು ಸದೃಢ ಸಮಾಜಕ್ಕಾಗಿ ಸ್ವಸ್ಥ ಹಾಗೂ ಶುದ್ಧ ಮನಸ್ಸಿನ ಮಕ್ಕಳನ್ನು ನಿರ್ಮಾಣ ಮಾಡುವುದು ನನ್ನ ಕಾಯಕ ಎಂದುಕೊಂಡಾಗ ಮಾತ್ರ ಅದು ಯಶಸ್ವಿ ಸಂಸ್ಥೆಯಾಗುತ್ತದೆ. ಅಂಥ ಯಶಸ್ವಿ ಸಂಸ್ಥೆಯಾಗಿ ಇಂದು ಎಕ್ಸಲಂಟ್ ಬೆಳದು ನಿಂತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ ಅವರನ್ನು ಹಾಗೂ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಸವರಾಜ್ ಕೌಲಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೊಟೆಲ್ ಉದ್ದಿಮೆದಾರ ಶಾಂತೇಶ ಕಳಸಗೊಂಡ, ರಾಜಶೇಖರ ಕೌಲಗಿ, ವಿ. ಡಿ ಮಾದನಶೆಟ್ಟಿ, ಶಿವಾನಂದ ಕಲ್ಯಾಣಿ, ಪ್ರಾಚಾರ್ಯ ಮಂಜುನಾಥ ಜುನಗೊಂಡ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶರಣಗೌಡ ಪಾಟೀಲ್, ಮುಸ್ತಾಕ ಮಲಘಾಣ, ಶ್ರದ್ಧಾ ಜಾಧವ ನಿರೂಪಿಸಿ ವಂದಿಸಿದರು.

Share this