‘ನಿಮ್ಮ ಕಷ್ಟದಲ್ಲಿ ಜೊತೆ ನಿಂತವನು ನಾನು; ನಿಮ್ಮ ಬಬಲೇಶ್ವರ ನೀವು ನೋಡಿಕೊಳ್ಳಿ’ ಸಚಿವ ಎಂ.ಬಿ. ಪಾಟೀಲ ವಿರುದ್ಧ ಯತ್ನಾಳ ವಾಗ್ದಾಳಿ

ಸಪ್ತಸಾಗರ ವಾರ್ತೆ ವಿಜಯಪುರ, ಸೆ.29:
“ನಾನು ಸಚಿವ ಎಂ.ಬಿ. ಪಾಟೀಲರ ಹಂಗಿನಿಂದ ಶಾಸಕನಾಗಿಲ್ಲ. ನೀವು ಹಿಂದೆ ಸೋತಾಗ ಹಾಗೂ ಬಿಎಲ್‌ಡಿಇ ವಿಷಯದಲ್ಲಿ ತೊಂದರೆ ಅನುಭವಿಸಿದಾಗ ನಿಮ್ಮ ಕಷ್ಟದಲ್ಲಿ ಜೊತೆ ನಿಂತವನು ನಾನು. ಅಭಿವೃದ್ಧಿ ವಿಷಯದಲ್ಲೂ ಸದಾ ಬೆಂಬಲವಾಗಿ ನಿಂತಿದ್ದೇನೆ” ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಚಿವ ಎಂ.ಬಿ. ಪಾಟೀಲ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನೀವು ಬಬಲೇಶ್ವರವನ್ನು ನೋಡಿಕೊಳ್ಳಿ. ನನಗೆ ಚಾಲೆಂಜ್ ಮಾಡಲು ಬರಬೇಡಿ” ಎಂದು ಸಚಿವ ಎಂ.ಬಿ. ಪಾಟೀಲರಿಗೆ ತಿರುಗೇಟು ನೀಡಿದರು.
“ಬಬಲೇಶ್ವರ ಹೊಲಸು ನಾರುತ್ತಿದೆ, ಸಾಕಾಗಿದೆ ಎಂದು ಅಲ್ಲಿನ ಜನರು ಹೇಳುತ್ತಿದ್ದಾರೆ. ಸಚಿವ ಎಂ.ಬಿ. ಪಾಟೀಲರ ಮನೆ ತುಂಬಾ ‘ಸಾಬರು’ ಸೇರಿರುತ್ತಾರೆ ಎಂದು ಹಲವು ಹಿಂದೂ ಮುಖಂಡರು ನನ್ನ ಮುಂದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನೀವು ನಿಮ್ಮ ಕ್ಷೇತ್ರವನ್ನು ನೋಡಿಕೊಳ್ಳಿ” ಎಂದು ಯತ್ನಾಳ ಹೇಳಿದರು.
“ನಾನು ಬ್ಲ್ಯಾಕ್‌ಮೇಲ್ ಮಾಡುವ ರಾಜಕಾರಣಿಯಲ್ಲ. ಬ್ಲ್ಯಾಕ್‌ಮೇಲ್ ಮಾಡಿದ್ದರೆ ಇಂದು ನಾನೇ ಮುಖ್ಯಮಂತ್ರಿಯಾಗಿರುತ್ತಿದ್ದೆ. ಹಿಂದೂಗಳ ಮತ ಒಡೆಯಬಾರದು ಎಂಬ ಒಂದೇ ಕಾರಣಕ್ಕೆ ಪಕ್ಷ ಸ್ಥಾಪನೆ ಮಾಡುತ್ತಿಲ್ಲ. ಕೊನೆಯ ಕ್ಷಣದವರೆಗೂ ಕಾಯುತ್ತಿದ್ದೇನೆ” ಎಂದರು.

‘ಎಂ.ಬಿ. ಪಾಟೀಲರ ಹಿಂಬಾಲಕರಿಂದ ಭೂಕಬಳಿಕೆ’

ಸಚಿವ ಎಂ.ಬಿ. ಪಾಟೀಲರ ‘ರೈಟ್ ಹ್ಯಾಂಡ್‌’ಗಳಿಂದಲೇ ಭೂಕಬಳಿಕೆ ನಡೆಯುತ್ತಿದೆ ಎಂದು ಆರೋಪಿಸಿದ ಯತ್ನಾಳ, “ರುದ್ರಗೌಡ ಸೇರಿದಂತೆ ಅನೇಕರ ಜಮೀನುಗಳನ್ನು ಸಚಿವರ ಹಿಂಬಾಲಕರು ಕಬಳಿಸಿದ್ದಾರೆ. ಈ ಕುರಿತು ಅಂದಿನ ಜಿಲ್ಲಾ ಪೊಲೀಸ್‌ ಅಧೀಕ್ಷಕರ ಗಮನಕ್ಕೂ ಪ್ರಕರಣ ಬಂದಿತ್ತು. ತನಿಖೆ ಚುರುಕುಗೊಳಿಸಿದಾಗ ನಿಷ್ಠಾವಂತ ಅಧಿಕಾರಿಯನ್ನೇ ವರ್ಗಾವಣೆ ಮಾಡಲಾಯಿತು” ಎಂದು ದೂರಿದರು.
“ಭೂಕಬಳಿಕೆಗೆ ಸಂಬಂಧಿಸಿದ ಎಲ್ಲ ದಾಖಲೆಗಳು ನನ್ನ ಬಳಿಯಿವೆ. ಅಗತ್ಯವಿದ್ದರೆ ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ” ಎಂದು ಸವಾಲು ಹಾಕಿದರು.

ದಲಿತ ಅಧಿಕಾರಿಯ ವ್ಯಕ್ತಿತ್ವಕ್ಕೆ ಮಸಿ ಬಳಿಯಬೇಡಿ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಅವರು ದಕ್ಷ ಅಧಿಕಾರಿ. ಅವರು ಯಾವುದೇ ಪಕ್ಷದ ಏಜೆಂಟ್ ಅಲ್ಲ ಎಂದು ಯತ್ನಾಳ ಹೇಳಿದರು.
“ಈ ಹಿಂದೆ ನವೀನ್ ಚಾವ್ಲಾ ಮುಖ್ಯ ಚುನಾವಣಾ ಆಯುಕ್ತರಾಗಿದ್ದಾಗ ಸಭೆ ನಡೆದ ನಂತರ ಎಐಸಿಸಿ ನಾಯಕತ್ವಕ್ಕೆ ತಕ್ಷಣ ಮಾಹಿತಿ ನೀಡುತ್ತಿದ್ದರು ಎಂಬ ಆರೋಪಗಳಿದ್ದವು. ಆದರೆ ಈಗ ದಕ್ಷ ದಲಿತ ಅಧಿಕಾರಿಯ ವ್ಯಕ್ತಿತ್ವಕ್ಕೆ ಕಾಂಗ್ರೆಸ್ ಮಸಿ ಬಳಿಯುವ ಕೆಲಸ ಮಾಡುತ್ತಿದೆ” ಎಂದು ಆರೋಪಿಸಿದರು.
ಚುನಾವಣಾ ಆಯೋಗವನ್ನು ಕಾಂಗ್ರೆಸ್ ಈ ಹಿಂದೆ ಹೇಗೆ ಬಳಸಿಕೊಂಡಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದ ಅವರು, “ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಘನತೆ ಬದಿಗೊತ್ತಿ ಮುಖ್ಯ ಚುನಾವಣಾ ಆಯುಕ್ತರ ಪ್ರತಿಕೃತಿ ದಹಿಸಿರುವುದು ಅವರಿಗೆ ಶೋಭೆ ತರುವುದಿಲ್ಲ. ನಿಮ್ಮ ಸಂಪುಟದ ಸಚಿವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎನ್ನುವುದಾದರೆ ಅವರ ಪ್ರತಿಕೃತಿ ದಹಿಸಿ” ಎಂದು ಸವಾಲು ಹಾಕಿದರು.

ಅ.6ರಂದು ಬೃಹತ್ ಪ್ರತಿಭಟನಾ ರ‍್ಯಾಲಿ

ಮುಖ್ಯ ಚುನಾವಣಾ ಆಯುಕ್ತರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಹಾಗೂ ರಾಜ್ಯದ ರೈತರಿಗೆ ಬರ ಪರಿಹಾರ ಘೋಷಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅ.6ರಂದು ವಿಜಯಪುರದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಯತ್ನಾಳ ತಿಳಿಸಿದರು.

ಎರಡೆರಡು ಕಡೆ ಹೆಸರು: 16 ಸಾವಿರ ಮತದಾರರ ಬಗ್ಗೆ ಯತ್ನಾಳ ಅನುಮಾನ

ಮತದಾರರ ಪಟ್ಟಿಯಲ್ಲಿ ಕೆಲವರ ಹೆಸರುಗಳು ಒಂದಕ್ಕಿಂತ ಹೆಚ್ಚು ಕಡೆ ದಾಖಲಾಗಿವೆ ಹಾಗೂ ಮೃತಪಟ್ಟವರ ಹೆಸರುಗಳೂ ಮುಂದುವರಿದಿವೆ ಎಂದು ಆರೋಪಿಸಿರುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, 16 ಸಾವಿರಕ್ಕೂ ಅಧಿಕ ಮತದಾರರ ಕುರಿತು ಅನುಮಾನ ವ್ಯಕ್ತಪಡಿಸಿ ದಾಖಲೆ ಸಹಿತ ಆಕ್ಷೇಪಣೆ ಸಲ್ಲಿಸಲಾಗಿದೆ ಎಂದು ಹೇಳಿದರು. ಒಂದೇ ವ್ಯಕ್ತಿಯ ಛಾಯಾಚಿತ್ರಗಳು ವಿವಿಧ ಮತದಾರರ ಪಟ್ಟಿಗಳಲ್ಲಿ ಬೇರೆ ಬೇರೆ ಉಡುಪುಗಳೊಂದಿಗೆ ಕಾಣಿಸಿಕೊಂಡಿರುವ ಉದಾಹರಣೆಗಳಿವೆ. ಮೃತಪಟ್ಟವರ ಮರಣ ಉತಾರೆಗಳನ್ನು ಲಗತ್ತಿಸಿ ಆಕ್ಷೇಪಣೆ ಸಲ್ಲಿಸಲಾಗಿದೆ. ಈ ಕುರಿತ ದಾಖಲೆಗಳು ಹಾಗೂ ಛಾಯಾಚಿತ್ರಗಳನ್ನು ಬಿಡುಗಡೆ ಮಾಡಿದರು.
ನಗರ ಕ್ಷೇತ್ರದಲ್ಲಿ ಸಲ್ಲಿಸಿರುವ ಆಕ್ಷೇಪಣೆಗಳನ್ನು ಹಿಂಪಡೆದಿಲ್ಲ. ಬಬಲೇಶ್ವರ ಕ್ಷೇತ್ರಕ್ಕೆ ಸಂಬಂಧಿಸಿದ ಆಕ್ಷೇಪಣೆಗಳನ್ನು ಹಿಂಪಡೆದಿರಬಹುದು. ಆದರೆ ವಿಜಯಪುರ ನಗರ ಕ್ಷೇತ್ರದಲ್ಲಿ ದಾಖಲೆ ಸಹಿತ ಸಲ್ಲಿಸಿರುವ ಆಕ್ಷೇಪಣೆಗಳನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಯತ್ನಾಳ ಸ್ಪಷ್ಟಪಡಿಸಿದರು.

8,300ಕ್ಕೂ ಅಧಿಕ ಆಕ್ಷೇಪಣೆ:

ಎಸ್‌ಐಆರ್‌ ಪ್ರಕ್ರಿಯೆಯಡಿ ನಗರ ಕ್ಷೇತ್ರದಲ್ಲಿ 8,300ಕ್ಕೂ ಅಧಿಕ ಆಕ್ಷೇಪಣೆಗಳನ್ನು ಸಲ್ಲಿಸಲಾಗಿದೆ. ಮತದಾರರ ಪಟ್ಟಿಯಲ್ಲಿ ಒಂದಕ್ಕಿಂತ ಹೆಚ್ಚು ಕಡೆ ಹೆಸರು ಹೊಂದಿರುವವರು, ಮೃತಪಟ್ಟವರು ಹಾಗೂ ಅಕ್ರಮವಾಗಿ ವಾಸಿಸುತ್ತಿರುವವರ ಕುರಿತು ಅನುಮಾನಗಳಿದ್ದು, ನಿಯಮಾನುಸಾರ ಆಕ್ಷೇಪಣೆ ಸಲ್ಲಿಸಲಾಗಿದೆ. ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಎಸ್‌ಐಆರ್‌ನಲ್ಲಿ ಹಸ್ತಕ್ಷೇಪ ಆರೋಪ:
ಬಿಎಲ್‌ಒಗಳು ಮನೆ-ಮನೆಗೆ ತೆರಳಿ ಎಸ್‌ಐಆರ್‌ ಪ್ರಕ್ರಿಯೆ ನಡೆಸಬೇಕಿದ್ದರೂ ಕೆಲವು ಸಂಘಟನೆಗಳು ಕಾನೂನುಬಾಹಿರವಾಗಿ ಹಸ್ತಕ್ಷೇಪ ಮಾಡುತ್ತಿವೆ ಎಂದು ಯತ್ನಾಳ ಆರೋಪಿಸಿದರು. ಬಿಎಲ್‌ಒಗಳ ಸಭೆಯನ್ನು ಖಾಸಗಿ ಶಾಲೆಯಲ್ಲಿ ನಡೆಸಿರುವ ಆರೋಪದ ಬಗ್ಗೆಯೂ ಪರಿಶೀಲನೆ ನಡೆಸಬೇಕು ಎಂದರು.
ಸೌಹಾರ್ದತೆಯ ಬಗ್ಗೆ ಈಗ ಕೆಲವರು ಮಾತನಾಡುತ್ತಿದ್ದಾರೆ. ಮಸೀದಿ ಎದುರು ಡಿಜೆ ಹಾಕಬಾರದು, ಅಜಾನ್‌ ವೇಳೆ ಡಿಜೆ ನಿಲ್ಲಿಸಬೇಕು ಎಂದು ಹೇಳುವವರು ಈ ಹಿಂದೆ ಎಲ್ಲಿ ಇದ್ದರು ಎಂದು ಪ್ರಶ್ನಿಸಿದ ಅವರು, ಇಂತಹ ವಿಚಾರಗಳಲ್ಲಿ ಎಲ್ಲರೂ ಕಾನೂನು ಮತ್ತು ನಿಯಮ ಪಾಲಿಸಬೇಕು ಎಂದರು.
ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ ಆಕ್ಷೇಪಣೆಗಳನ್ನು ಅಧಿಕಾರಿಗಳು ನಿಯಮಾನುಸಾರ ಪರಿಶೀಲಿಸಬೇಕು. ಯಾರೇ ತಪ್ಪು ಮಾಡಿದ್ದರೂ ದಾಖಲೆಗಳ ಆಧಾರದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಯತ್ನಾಳ ಹೇಳಿದರು.
ಮೇಯರ್ ಎಂ.ಎಸ್. ಕರಡಿ, ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ಗಿರೀಶ ಬಿರಾದಾರ, ರಾಜು ಕುರಿಯವರ, ಜವಾಹರ್ ಗೋಸಾವಿ, ಕಿರಣ ಪಾಟೀಲ, ರಾಜೇಶ ದೇವಗಿರಿ, ರಾಹುಲ್ ಜಾಧವ, ಕುಮಾರ ಗಡಗಿ ಹಾಗೂ ಮುಖಂಡರಾದ ಚಂದ್ರು ಚೌಧರಿ, ಗುರು ಗಚ್ಚಿನಮಠ, ವಿಜಯಕುಮಾರ ಡೋಣಿ, ಶಂಕರ ಹೂಗಾರ, ಬಾಬು ಶಿರಶ್ಯಾಡ, ವಿಕ್ರಂ ಗಾಯಕವಾಡ ಮೊದಲಾದವರು ಉಪಸ್ಥಿತರಿದ್ದರು.

Share this