ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸರ್ಕಾರಕ್ಕೆ ಮನವರಿಕೆ ಮಾಡಿಸುವೆ- ಸಚಿವ ಶಿವಾನಂದ ಪಾಟೀಲ


ಸಪ್ತಸಾಗರ ವಾರ್ತೆ ವಿಜಯಪುರ, ಸೆ. 22 :
ನಾನು ಆರೋಗ್ಯ ಸಚಿವನಾಗಿದ್ದಾಗ ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅಗತ್ಯವಾದ ಸಂಪನ್ಮೂಲ, ಸೌಲಭ್ಯ ಕಲ್ಪಿಸಿದ್ದೇನೆ. ಹೀಗಾಗಿ ಖಾಸಗಿ ಸಹಭಾಗಿತ್ವದ ಬದಲಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಅಗತ್ಯದ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರಿಗೆ ಮನವರಿಕೆ ಮಾಡಿಕೊಡುವುದಾಗಿ ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.
ನಗರದ ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ನಡೆದಿರುವ ಸರ್ಕಾರ ಘೋಷಿಸಿರುವ ಖಾಸಗಿ ಸಹಭಾಗಿತ್ವದ ಬದಲಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ನಡೆದಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಭೇಟಿ ನೀಡಿ, ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಸಚಿವರು, ಅವಿಭಜಿತ ವಿಜಯಪುರ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿರುವ ಬಂಥನಾಳ ಶಿವಯೋಗಿಗಳ ಹೆಸರಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕೆಂಬ ಕನಸಿದೆ. ಇದಕ್ಕಾಗಿ ನಾನು ಆರೋಗ್ಯ ಸಚಿವನಾಗಿದ್ದ ಸಂದರ್ಭದಲ್ಲಿ ಸರ್ಕಾರಿ ಕಾಲೇಜು ಆರಂಭಕ್ಕೆ ಬೇಕಿರುವ ಎಲ್ಲ ಸೌಲಭ್ಯ ಕಲ್ಪಿಸಿದ್ದೇನೆ ಎಂದು ವಿವರಿಸಿದರು.
ಹೊಸದಾಗಿ ಸರ್ಕಾರಿ ಕಾಲೇಜು ಸ್ಥಾಪನೆಗೆ ಕನಿಷ್ಟ 500 ಕೋಟಿ ರೂ. ಬೇಕು‌. ಆದರೆ ವಿಜಯಪುರ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ನಾನು ಸಚಿವನಾಗಿ ಅಗತ್ಯ ಸೌಲಭ್ಯ ಕಲ್ಪಿಸಿದ್ದೇನೆ. ಹೀಗಾಗಿ ಸರ್ಕಾರ ಆರಂಭದಲ್ಲಿ 50 ಕೋಟಿ ರೂ.ನಂತೆ ಕೇವಲ 100 ಕೋಟಿ ರೂ‌. ಅನುದಾನ ನೀಡಿದರೂ ಸಾಕು ಎಂದರು.
ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ 2013 ರಿಂದಲೂ ನಾನು ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಪ್ರಯತ್ನಿಸುತ್ತಿದ್ದೇನೆ. ಆಗ ಮುಖ್ಯಮಂತ್ರಿ ಆಗಿದ್ದ ಸಿದ್ಧರಾಮಯ್ಯ ಹಾಗೂ ಈ ಹಿಂದೆ ಅಧಿಕಾರದಲ್ಲಿದ್ದ ಬಸವರಾಜ ಬೊಮ್ಮಾಯಿ ಇಬ್ಬರೂ ಈ ವಿಷಯವಾಗಿ ನನಗೆ ಸದನದಲ್ಲೂ ಭರವಸೆ ನೀಡಿದ್ದರು. ಆದರೂ ರಾಜ್ಯದಲ್ಲಿ ಮಾತ್ರವಲ್ಲ ದೇಶದ ಯಾವುದೇ ರಾಜ್ಯದಲ್ಲಿ ಇಲ್ಲದ ಖಾಸಗಿ ಸಹಭಾಗಿತ್ವದ ವೈದ್ಯಕೀಯ ಕಾಲೇಜು ಅನುಷ್ಠಾನ ವಿಜಯಪುರ ಜಿಲ್ಲೆಗೆ ಮಾತ್ರ ಏಕೆ ಎಂಬುದು ನನಗೂ ಅರ್ಥವಾಗುತ್ತಿಲ್ಲ ಎಂದರು‌
ವಿಜಯಪುರ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅಗತ್ಯವಾದ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ, ಟ್ರಾಮಾ ಸೆಂಟರ್, ಎಂ.ಆರ್.ಐ. ಸ್ಕ್ಯಾನಿಂಗ್ ಸೆಂಟರ್, ರಾಜ್ಯದಲ್ಲೇ ಎಲ್ಲೂ ಇಲ್ಲದ 150 ಹಾಸಿಗೆ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಬಿಎಸ್ಸಿ ನರ್ಸಿಂಗ್ ಹಾಗೂ ಡಿಪ್ಲೊಮಾ ನರ್ಸಿಂಗ್ ಕಾಲೇಜುಗಳು, 150 ಎಕರೆ ವಿಸ್ತೀರ್ಣದ ಸರ್ಕಾರಿ ಆಸ್ಪತ್ರೆ ಆಸ್ತಿ ಸಂರಕ್ಷಣೆಗಾಗಿ ಕಾಂಪೌಂಡ್ ನಿರ್ಮಿಸಿದ್ದೇನೆ ಎಂದು ವಿವರಿಸಿದರು.
ವಿಜಯಪುರ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಐತಿಹಾಸಿಕ ತಾಜ್ ಬಾವಡಿಯಿಂದ ನೀರಿನ ಸೌಲಭ್ಯ ಕಲ್ಪಿಸಿದ್ದು ಹಾಗೂ ರಾಜ್ಯದಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಆಯುಷ್ಯ ಆಸ್ಪತ್ರೆ ನಿರ್ಮಿಸಿದ್ದು ನನ್ನ ಅವಧಿಯಲ್ಲೇ ಎಂದು ವಿವರಿಸಿದರು.
ಬೆಳಗಾವಿ ಕಲಬುರಗಿ ವಿಭಾಗದ ಮಧ್ಯದಲ್ಲಿ ವಿಜಯಪುರದಲ್ಲಿ ಆರೋಗ್ಯ ಇಲಾಖೆಯ ಹೆಚ್ಚುವರಿ ನಿರ್ದೇಶಕರ ಹುದ್ದೆ ಸೃಷ್ಟಿಸಿದ್ದೇ ನಾನು. ನನ್ನ ಅವಧಿಯಲ್ಲಿ ನಿರ್ಮಿಸಿದ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ಈಚೆಗೆ ನಾನೇ ಸಂಪುಟ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ 200 ಹುದ್ದೆ ಮಂಜೂರು ಮಾಡಿಸಿದ್ದೇನೆ ಎನ್ನುವ ಮೂಲಕ ಸಚಿವನಾಗಿ ಮಾಡಿದ ಕೆಲಸಗಳು ಎಂದು ಜಿಲ್ಲೆಗೆ ಶಿವಾನಂದ ಪಾಟೀಲ ಅವರ ಕೊಡುಗೆ ಏನು ಎಂದು ಪ್ರಶ್ನಿಸುವವರಿಗೆ ಕಣ್ಣ ಮುಂದಿರುವ ದಾಖಲೆಗಳನ್ನು ಬಿಚ್ಚಿಟ್ಟರು.
ನಾನು ಬಸವನ ಬಾಗೇವಾಡಿ ಕ್ಷೇತ್ರದಲ್ಲಿ ಸರ್ಕಾರಿ ಪದವಿ ಕಾಲೇಜು ಆರಂಭಿಸಿದ ಬಳಿಕವೇ ಜಿಲ್ಲಾ ಕೇಂದ್ರ ವಿಜಯಪುರದಲ್ಲಿ ಪದವಿ ಕಾಲೇಜು ಸ್ಥಾಪನೆ ಆಗಿದ್ದು. ನಮ್ಮ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಮಾತ್ರವಲ್ಲ ಸರ್ಕಾರಿ ಎಂಜಿನಿಯರಿಂಗ್ ಹಾಗೂ ಕಾನೂನು ಕಾಲೇಜುಗಳಂಥ ಶೈಕ್ಷಣಿಕ ಸೌಲಭ್ಯಗಳೂ ಇಲ್ಲವಾಗಿವೆ.

ಏಮ್ಸ್ ತಂದರೆ ಸಂಸದ ಜಿಗಜಿಣಗಿಗೆ ಸನ್ಮಾನ

ಬಡ ಮಕ್ಕಳು ವೈದ್ಯಕೀಯ ಶಿಕ್ಷಣ ಪಡೆಯುವಂತಾಗಲು
ವಿಜಯಪುರ ಜಿಲ್ಲೆಗೆ ಏಮ್ಸ್ ಕಾಲೇಜು ಮಂಜೂರು ಮಾಡಿಸಿದರೆ ಸಂಸದ ರಮೇಶ ಜಿಗಜಿಣಗಿ ಅವರನ್ನು ಸನ್ಮಾನ ಮಾಡುತ್ತೇನೆ ಎಂದು ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಈ ಕುರಿತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೊಂದಿಗೆ ಮಾತನಾಡಿದ್ದೆ. ಆದರೆ ಧಾರವಾಡ, ರಾಯಚೂರು ಭಾಗದವರು ಪ್ರಯತ್ನ ಮಾಡಿದರು‌. ಈಗಲೂ ಕಾಲ ಮಿಂಚಿಲ್ಲ. ಸಂಸದ ಜಿಗಜಿಣಗಿ, ಜಿಲ್ಲೆಯ ಸಚಿವರು, ಶಾಸಕರು ಪಕ್ಷಾತೀತವಾಗಿ ಏಮ್ಸ್ ಕಾಲೇಜಿಗೆ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದರು.
ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಸಮಿತಿಯ ಡಾ.ಗೋಪಾಲ ದಾಬಡೆ (ಹುಬ್ಬಳ್ಳಿ), ಅರವಿಂದ ಕುಲಕರ್ಣಿ, ಅನಿಲ ಹೊಸಮನಿ, ಪ್ರಭುಗೌಡ ಪಾಟೀಲ, ಜಗದೀಶ ಸೂರ್ಯವಂಶಿ, ಶ್ರೀನಾಥ ಪೂಜಾರಿ, ಸಿದ್ಧಲಿಂಗ ಬಾಗೇವಾಡಿ, ಲಕ್ಷ್ಮಣ ಕಂಬಾಗಿ, ಜಗದೀಶ ಕಲಘಟಗಿ, ಭೋಗೇಶ ಸೋಲಾಪುರ, ಮಲ್ಲಿಕಾರ್ಜುನ ಕೆಂಗನಾಳ, ಭರತಕುಮಾರ ಎಚ್.ಟಿ.,ಸುರೇಶ ಬಿಜಾಪುರ, ಮಲ್ಲಿಕಾರ್ಜುನ ಬಟಗಿ, ಎಚ್.ಟಿ. ಮಲ್ಲಿಕಾರ್ಜುನ, ಅಕ್ರಮ ಮಾಶ್ಯಾಳಕರ, ಕಾವೇರಿ ರಜಪೂತ, ಸಿದ್ದರಾಮಯ್ಯ ಹಿರೇಮಠ, ಲಕ್ಷ್ಮಣ ಹಂದ್ರಾಳ, ಬಾಬುರಾವ ಬೀರಕಬ್ಬಿ, ಗೀತಾ, ಶಿವಬಾಳಮ್ಮ ಕೊಂಡಗೂಳಿ, ಚೆನ್ನು ಕಟ್ಟಿಮನಿ, ಸಂಜು ಕಂಬಾಗಿ, ಸೋಮು ರಣದಿವೆ, ಬಾಳು ಜೇವೂರ, ಸುನೀತಾ ಮೋರೆ, ಗೀತಾ ಕಟ್ಟಿ, ಗೀತಾ ಪಾಟೀಲ, ಕಾಮಿನಿ ಕಸಬೆ, ನಕುಶಾ ಹೊಸಮನಿ, ಶೋಭಾ ಬಿರಾದಾರ, ಸವಿತಾ ಹೊಸಮನಿ, ಅಪ್ಪು ಗುಣಕಿ ಸೇರಿದಂತೆ ನೂರಾರು ಮುಖಂಡರು ಇದ್ದರು.

Share