ನರ್ಸಿಂಗ್ ಕ್ಷೇತ್ರದಲ್ಲಿ ಸಂಶೋಧನೆಗಳ ಪ್ರಮಾಣ ಹೆಚ್ಚಳ: ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 11: ನರ್ಸಿಂಗ್ ಕ್ಷೇತ್ರದಲ್ಲಿ ಸಂಶೋಧನೆಗಳ ಪ್ರಮಾಣ ಹೆಚ್ಚುತ್ತಿರುವುದರಿಂದ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಅನುಕೂಲವಾಗುತ್ತಿದೆ ಎಂದು ಬಿ.ಎಲ್.ಡಿ.ಇ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅಶೋಕ ಪಾಟೀಲ ಹೇಳಿದ್ದಾರೆ.
ಮಂಗಳವಾರ ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ.ಎಂ. ಪಾಟೀಲ್ ನರ್ಸಿಂಗ್ ಮಹಾವಿದ್ಯಾಲಯದಲ್ಲಿ, ಬಿ.ಎಲ್.ಡಿ.ಇ ಮೆಡಿಕಲ್ ಕಾಲೇಜಿನ ಸಹಯೋಗದೊಂದಿಗೆ ಆಯೋಜಿಸಲಾದ ರಾಜ್ಯಮಟ್ಟದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.
ಆಯುರ್ವೇದದಲ್ಲಿ ವಿವರಿಸಿದಂತೆ ರೋಗಿಗೆ ವೈದ್ಯರ ಅವಶ್ಯಕತೆ ಎಷ್ಟು ಮುಖ್ಯವೋ, ಅಷ್ಟೇ ಮಹತ್ವ ನರ್ಸಿಂಗ್ ವೃತ್ತಿಪರರಿಗೂ ಇದೆ. ನರ್ಸಿಂಗ್ ವೃತ್ತಿ ಸಮಾಜದ ಹೆಮ್ಮೆಯಾಗಿದೆ ಎಂದು ಅವರು ಹೇಳಿದರು.
ಡಾ. ಎಂ.ಎಂ. ಪಾಟೀಲ ಮಾತನಾಡಿ, ಇತ್ತೀಚಿನ ತಂತ್ರಜ್ಞಾನಗಳ ಬೆಳವಣಿಗೆ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿವೆ. ಸಂಶೋಧನೆಯ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಜವಾಬ್ದಾರಿಗಳು ಹೆಚ್ಚಾಗಿವೆ. ಈ ಬದಲಾವಣೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಸಾಮರ್ಥ್ಯ ನಮ್ಮಲ್ಲಿರಬೇಕು ಎಂದು ಹೇಳಿದರು.
ತುಮಕೂರಿನ ಡಾ. ಪರಮೇಶ, ಬಾಗಲಕೋಟೆಯ ಡಾ. ಶ್ರೀಹರ್ಷ ಹಾಗೂ ವೈದ್ಯಕೀಯ ಕ್ಷೇತ್ರದ ಡಾ. ನಿರ್ಮಲಾ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಸಂಶೋಧನೆಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಶಾಲ್ಮನ್ ಚೋಪಡೆ, ಪ್ರೊ. ಸುಚಿತ್ರಾ ರಾಟಿ, ಬಶೀರ ಅಹ್ಮದ್, ಕವಿತಾ ಕೆ., ಅಮರನಾಥ್, ಸೌಜನ್ಯ ಸಂಕಪ್ಪ, ಅಪ್ಪನಗೌಡ ಪಾಟೀಲ, ಡಾ. ಅಮಿತಕುಮಾರ ಬಿರಾದಾರ, ಭಾಗ್ಯಶ್ರೀ ಬಾಗೇವಾಡಿ, ಡಾ. ಸತೀಶ ನಡಗಡ್ಡಿ, ಕಾಲೇಜಿನ ಬೋಧಕ ಮತ್ತು ಬೋಧಕರ ಹೊರತಾದ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿದ್ದ ಸುಮಾರು 120 ಮಂದಿ ಪ್ರತಿನಿಧಿಗಳು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

Share this