ಸಾರಿಗೆ ನೌಕರರ ಅನಿರ್ದಿಷ್ಟ ಮುಷ್ಕರ: ಪ್ರಯಾಣಿಕರ ಪರದಾಟ

ಸಪ್ತಸಾಗರ ವಾರ್ತೆ, ವಿಜಯಪುರ, ಆ. 5:
ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಸಾರಿಗೆ ನೌಕರರು ಇಂದಿನಿಂದ ಅನಿರ್ದಿಷ್ಟ ಮುಷ್ಕರ ಆರಂಭಿಸಿದ್ದರಿಂದ ರಾಜ್ಯದ ಎಲ್ಲೆಡೆಯಂತೆ ವಿಜಯಪುರ ಜಿಲ್ಲೆಯಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು ಪ್ರಯಾಣಿಕರು ಪರದಾಡುವಂತಾಗಿದೆ.
ನಿನ್ನೆಯಷ್ಟೇ ಸಾರಿಗೆ ನೌಕರರ ಮುಖಂಡರ ಜೊತೆಗೆ ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಮಾತುಕತೆಗಳು ವಿಫಲವಾಗಿದ್ದರಿಂದ ಸಾರಿಗೆ ಮುಷ್ಕರ ಇಂದಿನಿಂದ ಆರಂಭಗೊಂಡಿದೆ.
ಬೆಳಿಗ್ಗೆ 6 ಗಂಟೆಯಿಂದಲೇ ಸಾರಿಗೆ ಮುಷ್ಕರ ಆರಂಭವಾಗಿದ್ದರಿಂದ ವಿಜಯಪುರ ಜಿಲ್ಲೆಯ ಯಾವುದೇ ಬಸ್ ನಿಲ್ದಾಣದಲ್ಲಿ ಬಸ್ ಓಡಾಟ ಕಂಡು ಬರಲಿಲ್ಲ. ವಿಜಯಪುರ ನಗರದ ಮೂರು ಬಸ್ ಡಿಪೋಗಳಿಂದ ಬಸ್ ಗಳು ಸಂಚಾರಕ್ಕೆ ಹೊರ ಬರಲಿಲ್ಲ. ಬಸ್ ಚಾಲಕರು ಹಾಗೂ ನಿರ್ವಾಹಕರು ಮುಷ್ಕರದಲ್ಲಿ ಪಾಲ್ಗೊಂಡಿದ್ದರಿಂದ ವಿಜಯಪುರ ಕೇಂದ್ರ ಬಸ್ ನಿಲ್ದಾಣ, ಸೆಟಲೆಟ್ ಬಸ್ ನಿಲ್ದಾಣ ಸೇರಿದಂತೆ ಜಿಲ್ಲೆಯ ಎಲ್ಲ ಬಸ್ ನಿಲ್ದಾಣಗಳಲ್ಲಿ ಬಸ್ ಓಡಾಟ ಇಲ್ಲದೆ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿರುವುದು ಕಂಡು ಬಂತು.
ಮುಷ್ಕರದ ವಿಷಯ ತಿಳಿಯದೆ ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಯಾಣಿಕರು ಬಸ್ ಇಲ್ಲದೆ ಪರದಾಡಿದರು. ಅನಿವಾರ್ಯ ಕೆಲಸಗಳಿಗೆ ಆಗಮಿಸಿದ್ದ ಪ್ರಯಾಣಿಕರು ವಿಧಿ ಇಲ್ಲದೆ ಖಾಸಗಿ ಬಸ್ಸುಗಳ ಮೊರೆ ಹೋಗಬೇಕಾಯಿತು. ದಿನಂಪ್ರತಿ ಖಾಲಿ ಖಾಲಿಯಾಗಿ ನಿಲ್ಲುತ್ತಿದ್ದ ಟೆಂಪೋ ಟ್ಯಾಕ್ಸ್, ಮ್ಯಾಕ್ಸ್ ಕ್ಯಾಬ್, ಆಟೋಗಳಿಗೆ ಪ್ರಯಾಣಿಕರು ಮುಗಿಬಿದ್ದಿದ್ದರು.

Share