ಗೋಳಗುಮ್ಮಟ ಸ್ವಚ್ಛತೆಗೆ ಇಂಡಿಯನ್ ಆಯಿಲ್ ಬಳಗದ ಶ್ರಮದಾನ

ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ: ಮೇಯರ್ ಕರಡಿ

ಸಪ್ತಸಾಗರ ವಾರ್ತೆ,ವಿಜಯಪುರ, ಸ. 27: ವಿಶ್ವವಿಖ್ಯಾತ ಐತಿಹಾಸಿಕ ಸ್ಮಾರಕ ಗೋಳಗುಮ್ಮಟದ ಸೌಂದರ್ಯ ಹಾಗೂ ಪರಿಸರ ಸಂರಕ್ಷಣೆಯ ಉದ್ದೇಶದಿಂದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ಅಧಿಕಾರಿಗಳು, ಸಿಬ್ಬಂದಿ ಹಾಗೂ ಡೀಲರ್‌ಗಳು ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿದರು.
ಭಾರತ ಸರ್ಕಾರದ ಸ್ವಚ್ಛ ಭಾರತ ಮಿಷನ್ ಅಂಗವಾಗಿ ಗೋಳಗುಮ್ಮಟದ ಆವರಣದಲ್ಲಿ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನದಲ್ಲಿ ಐಒಸಿಎಲ್‌ನ ರಿಟೇಲ್ ಸೇಲ್ಸ್ ಅಧಿಕಾರಿಗಳು, ಡಿಪೋ ಅಧಿಕಾರಿಗಳು, ವಿಜಯಪುರದ ಇಂಡಿಯನ್ ಆಯಿಲ್ ವಿತರಕರು ಹಾಗೂ ಸಿಬ್ಬಂದಿ ಸೇರಿದಂತೆ ಸುಮಾರು 80 ಮಂದಿ ಪಾಲ್ಗೊಂಡು ಸ್ಮಾರಕದ ಆವರಣವನ್ನು ಸ್ವಚ್ಛಗೊಳಿಸಿದರು.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಅಧಿಕಾರಿಗಳು ಹಾಗೂ ಸಿಬ್ಬಂದಿ ಅಭಿಯಾನಕ್ಕೆ ಅಗತ್ಯ ಸಹಕಾರ ನೀಡಿದರು. ವಿಜಯಪುರ ಮಹಾನಗರ ಪಾಲಿಕೆ ಮೇಯರ್ ಮಡಿವಾಳಪ್ಪ ಎಸ್. ಕರಡಿ ಅವರು ಅಭಿಯಾನದಲ್ಲಿ ಪಾಲ್ಗೊಂಡು ಸ್ವಚ್ಛತಾ ಕಾರ್ಯಕ್ಕೆ ಉತ್ತೇಜನ ನೀಡಿದರು.
ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಕೇವಲ ಸರ್ಕಾರದ ಇಲಾಖೆಗಳ ಹೊಣೆಗಾರಿಕೆಯಲ್ಲ; ಸಾರ್ವಜನಿಕರು, ಸಂಘ-ಸಂಸ್ಥೆಗಳು ಹಾಗೂ ಪ್ರತಿಯೊಬ್ಬ ನಾಗರಿಕರು ಕೈಜೋಡಿಸಿದಾಗ ಮಾತ್ರ ಪರಂಪರೆಯ ತಾಣಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಲು ಸಾಧ್ಯ ಎಂದು ಮೇಯರ್ ಕರಡಿ ಹೇಳಿದರು.
ಸ್ವಚ್ಛತಾ ಕಾರ್ಯದ ಜತೆಗೆ ಗೋಳಗುಮ್ಮಟಕ್ಕೆ ಆಗಮಿಸುವ ಪ್ರವಾಸಿಗರು ಹಾಗೂ ಸಾರ್ವಜನಿಕರಲ್ಲಿ ಕಸ ಎಸೆಯದಂತೆ, ಸ್ಮಾರಕದ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಕಾಪಾಡುವಂತೆ ಜಾಗೃತಿ ಮೂಡಿಸಲಾಯಿತು.
ಐಒಸಿಎಲ್ ಸೇಲ್ಸ್ ಅಧಿಕಾರಿ ಪ್ರತೀಕ ಹಿರೇಕಣ, ಡಿಪೋ ವ್ಯವಸ್ಥಾಪಕ ಆಶಿಶ್ ತಿವಾರಿ, ಡೀಲರ್‌ಗಳಾದ ರಮೇಶ ಬಿದನೂರ, ಆನಂದ ಬಂದರವಾಡ, ಪ್ರಭಾಕರ ಬುರುಡ, ರವಿಕಾಂತ ಬಗಲಿ, ಅತುಲ್ ತಿವಾರಿ, ನವೀದ್, ಶಾಂತಗೌಡ ನಾಡಗೌಡ ಹಾಗೂ ಸೇಲ್ಸ್ ಅಧಿಕಾರಿ ಅಂಕಿತ್ ಗೋಯಲ್ ಉಪಸ್ಥಿತರಿದ್ದರು.
ಸಾಮಾಜಿಕ ಹೊಣೆಗಾರಿಕೆಯಡಿ ನಡೆದ ಈ ಶ್ರಮದಾನವು ‘ಸ್ವಚ್ಛ ಸ್ಮಾರಕ–ಸುಂದರ ವಿಜಯಪುರ’ ಎಂಬ ಸಂದೇಶವನ್ನು ಸಾರುವುದರ ಜತೆಗೆ ಐತಿಹಾಸಿಕ ಪರಂಪರೆಯ ರಕ್ಷಣೆಗೆ ಜನಸಹಭಾಗಿತ್ವದ ಅಗತ್ಯವನ್ನು ಎತ್ತಿಹಿಡಿಯಿತು.

Share this