ಅನೇಕತೆಯಲ್ಲಿ ಏಕತೆ ಸಾಧಿಸುವುದೇ ಭಾರತದ ಶಕ್ತಿ: ಎಂ.ಬಿ. ಪಾಟೀಲ

ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 15:
ಧಾರ್ಮಿಕ ಪರಂಪರೆ, ಆಧ್ಯಾತ್ಮಿಕತೆ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ಭಾರತ ಜಗತ್ತಿನಲ್ಲಿಯೇ ಶ್ರೇಷ್ಠ ಸ್ಥಾನ ಹೊಂದಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಬಬಲೇಶ್ವರ ತಾಲೂಕಿನ ಬೆಳ್ಳುಬ್ಬಿ ಗ್ರಾಮದ ಮಳೆ ಮಲ್ಲೇಶ್ವರ ದೇವಸ್ಥಾನದಲ್ಲಿ ಸೋಮವಾರ ನಡೆದ ಅಜಾತ ನಾಗಲಿಂಗ ಮಹಾಸ್ವಾಮಿಗಳ ಮಹಾಪುರಾಣ ಹಾಗೂ ಭಜನಾ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಕ್ತಿ, ಜ್ಞಾನ ಮತ್ತು ಸಂಸ್ಕೃತಿಯ ಸಂಗಮವಾಗಿರುವ ಧಾರ್ಮಿಕ ಕಾರ್ಯಕ್ರಮಗಳು ಜನರಲ್ಲಿ ಮಾನವೀಯ ಮೌಲ್ಯಗಳನ್ನು ಜಾಗೃತಗೊಳಿಸುತ್ತವೆ. ಪುರಾಣ ಹಾಗೂ ಪ್ರವಚನಗಳ ಮೂಲಕ ನಮ್ಮ ಇತಿಹಾಸ ಮತ್ತು ಪರಂಪರೆಯ ಅರಿವು ಮೂಡುತ್ತದೆ. ಇತಿಹಾಸದಲ್ಲಿ ಒಳಿತು-ಕೆಡುಕು ಎರಡೂ ಇದ್ದು, ಒಳಿತನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದರು.
ಶರಣರು ಪ್ರತಿಪಾದಿಸಿದ ಅನುಭವ ಮಂಟಪದ ಪರಿಕಲ್ಪನೆ ಪ್ರತಿ ಗ್ರಾಮದಲ್ಲೂ ಸಾಕಾರಗೊಳ್ಳಬೇಕು. ಪ್ರತಿ ಗ್ರಾಮವೂ ಎಲ್ಲ ಜಾತಿ, ವರ್ಗ ಹಾಗೂ ಸಮುದಾಯಗಳನ್ನು ಒಳಗೊಂಡ ಅನುಭವ ಮಂಟಪದಂತಾಗಬೇಕು. ಎಲ್ಲ ಧರ್ಮೀಯರು ಪರಸ್ಪರ ಸೌಹಾರ್ದದಿಂದ ಬದುಕಿದಾಗ ಮಾತ್ರ ಗ್ರಾಮಗಳಲ್ಲಿ ಶಾಂತಿ ಮತ್ತು ಸಾಮರಸ್ಯ ನೆಲೆಸಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗಣಲಿಂಗ ದೇವರು ಹಿರೇಮಠ, ಆಸಂಗಿ ಹಿರೇಮಠದ ಶ್ರೀಗಳು ಹಾಗೂ ಚಂದ್ರಶೇಖರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ನ್ಯಾಯವಾದಿ ಶ್ರೀನಿವಾಸ ಕೊಂಡಗೂಳಿ, ಬಸವರಾಜ ದೇಸಾಯಿ, ರಮೇಶ ಬಶೆಟ್ಟಿ, ಶಿವಾನಂದ ನ್ಯಾಮಗೌಡ, ಬಸವರಾಜ ಜೈನಾಪುರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share this