ಗ್ರಾಮಾಭಿವೃದ್ಧಿಯಾದಾಗಲೇ ಭಾರತದ ನೈಜ ಅಭಿವೃದ್ಧಿ

ಗ್ರಾಮೀಣ ಸಮಸ್ಯೆಗಳನ್ನು ಬೆಳಕಿಗೆ ತರುವಂತೆ ಪತ್ರಕರ್ತರಿಗೆ ಎಂ.ಬಿ. ಪಾಟೀಲ ಸಲಹೆ

ಸಪ್ತಸಾಗರ ವಾರ್ತೆ,ವಿಜಯಪುರ, ಅ. 3 : ಗ್ರಾಮೀಣ ಪ್ರದೇಶಗಳ ಸಮಸ್ಯೆಗಳನ್ನು ಬೆಳಕಿಗೆ ತಂದು ಸರ್ಕಾರದ ಗಮನ ಸೆಳೆಯುವ ಕಾರ್ಯವನ್ನು ಗ್ರಾಮೀಣ ಪತ್ರಕರ್ತರು ಮಾಡಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಹೇಳಿದರು.
ನಗರದ ಗಾಂಧಿ ಭವನದಲ್ಲಿ ಶನಿವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಜಿಲ್ಲೆಯ ವಿವಿಧ ತಾಲೂಕುಗಳ 40 ಗ್ರಾಮೀಣ ಪತ್ರಕರ್ತರಿಗೆ ಬಸ್‌ ಪಾಸ್‌ ವಿತರಿಸಿ ಅವರು ಮಾತನಾಡಿದರು.
ದೇಶದ ಬಹುಪಾಲು ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದು, ಗ್ರಾಮಗಳ ಅಭಿವೃದ್ಧಿಯೇ ಭಾರತದ ನೈಜ ಅಭಿವೃದ್ಧಿ ಎಂಬ ಮಹಾತ್ಮಾ ಗಾಂಧೀಜಿಯವರ ಆಶಯವನ್ನು ಸಾಕಾರಗೊಳಿಸುವಲ್ಲಿ ಗ್ರಾಮೀಣ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ. ಗ್ರಾಮೀಣ ಭಾಗದ ಕುಡಿಯುವ ನೀರು, ರಸ್ತೆ, ಸಾರಿಗೆ, ನೀರಾವರಿ, ವಿದ್ಯುತ್ ಸೇರಿದಂತೆ ಹಲವು ಸಮಸ್ಯೆಗಳನ್ನು ವರದಿಗಳ ಮೂಲಕ ಸರ್ಕಾರದ ಗಮನಕ್ಕೆ ತಂದರೆ ಅವುಗಳಿಗೆ ಪರಿಹಾರ ಕಲ್ಪಿಸಲು ಸಾಧ್ಯವಾಗುತ್ತದೆ ಎಂದರು.
ಗ್ರಾಮೀಣ ಪತ್ರಕರ್ತರು ಹೋಬಳಿ ಹಾಗೂ ತಾಲೂಕು ಕೇಂದ್ರಗಳಿಂದ ಜಿಲ್ಲಾ ಕೇಂದ್ರಕ್ಕೆ ಸಂಚರಿಸಲು ಅನುಕೂಲವಾಗುವ ಉದ್ದೇಶದಿಂದ ಬಸ್‌ ಪಾಸ್‌ ಯೋಜನೆ ಜಾರಿಗೆ ತರಲಾಗಿದೆ. ಮಾನದಂಡಗಳ ಸರಳೀಕರಣದಿಂದಾಗಿ ಇದೀಗ ಜಿಲ್ಲೆಯ 40 ಪತ್ರಕರ್ತರಿಗೆ ಬಸ್‌ ಪಾಸ್‌ ವಿತರಿಸಲಾಗುತ್ತಿದೆ. ರಾಜ್ಯಾದ್ಯಂತ ಈ ಸೌಲಭ್ಯದಿಂದ ಹೊರಗುಳಿದಿರುವ ಅರ್ಹ ಪತ್ರಕರ್ತರನ್ನೂ ಯೋಜನೆ ವ್ಯಾಪ್ತಿಗೆ ತರಲು ಸರ್ಕಾರ ಸಹಕಾರ ನೀಡಲಿದೆ ಎಂದು ಹೇಳಿದರು.
ಪತ್ರಕರ್ತರು ಹಲವು ಸಂದರ್ಭಗಳಲ್ಲಿ ಅಧಿಕಾರಿಗಳು ಹಾಗೂ ಸರ್ಕಾರದ ಗಮನಕ್ಕೆ ಜನರ ಸಮಸ್ಯೆಗಳನ್ನು ತಂದು ಪರಿಹಾರಕ್ಕೆ ಕಾರಣರಾಗಿದ್ದಾರೆ. ಜನರ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಪ್ರಜಾಸೇವಾ ಇಲಾಖೆ ಕಾರ್ಯಾರಂಭ ಮಾಡಿರುವುದು ಜನರ ಮನೆ ಬಾಗಿಲಿಗೆ ಸರ್ಕಾರವನ್ನು ಕೊಂಡೊಯ್ಯುವ ಪ್ರಯತ್ನವಾಗಿದೆ. ಶಾಸಕಾಂಗ, ಕಾರ್ಯಾಂಗದೊಂದಿಗೆ ಪತ್ರಕರ್ತರೂ ಕೈಜೋಡಿಸಿ ಮಹಾತ್ಮಾ ಗಾಂಧೀಜಿಯವರ ನೈಜ ಭಾರತದ ಕನಸನ್ನು ನನಸು ಮಾಡಲು ಮುಂದಾಗಬೇಕು ಎಂದರು.
ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಮಾಸಾಶನ, ಕುಟುಂಬ ಮಾಸಾಶನ, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಕಾರ್ಯಕ್ರಮಗಳು, ಬಸ್‌ ಪಾಸ್‌, ಮಾಧ್ಯಮ ಕಿಟ್‌ ಹಾಗೂ ತಂತ್ರಜ್ಞಾನ ತರಬೇತಿ ಸೇರಿದಂತೆ ಸರ್ಕಾರ ಹಲವು ಸೌಲಭ್ಯಗಳನ್ನು ನೀಡುತ್ತಿದೆ ಎಂದು ತಿಳಿಸಿದರು.
ಕೃತಕ ಬುದ್ಧಿಮತ್ತೆ (ಎಐ) ಹಾಗೂ ಸಾಮಾಜಿಕ ಜಾಲತಾಣಗಳಿಂದ ಮಾಹಿತಿ ವಿನಿಮಯ ವೇಗ ಪಡೆದಿದೆ. ಆದರೂ ಮುದ್ರಣ ಮಾಧ್ಯಮದ ಮಹತ್ವ ಕಡಿಮೆಯಾಗಿಲ್ಲ. ಪತ್ರಕರ್ತರು ಆಧುನಿಕ ತಂತ್ರಜ್ಞಾನವನ್ನು ಅರಿತುಕೊಂಡು ಅದಕ್ಕೆ ತಕ್ಕಂತೆ ತಮ್ಮ ವೃತ್ತಿ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಶೋಕ ಯಡಳ್ಳಿ ಮಾತನಾಡಿ, ಗ್ರಾಮೀಣ ಪತ್ರಕರ್ತರ ಸಮಸ್ಯೆಗೆ ಸ್ಪಂದಿಸಿರುವ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ ಸ್ವಾಗತಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ ಕಾರ್ಯಕ್ರಮ ನಿರೂಪಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ ಪ್ರಕಾಶ ಮೀನಾ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ, ಉಪಾಧ್ಯಕ್ಷ ಶಶಿಕಾಂತ ಮೆಂಡೆಗಾರ, ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಕಾಶ ಬೆಣ್ಣೂರ, ವಿವಿಧ ತಾಲೂಕುಗಳ ಪತ್ರಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Share this