ಭೌತಿಕ ಆಸ್ತಿಗಿಂತ ಬೌದ್ಧಿಕ ಜ್ಞಾನವೇ ಶ್ರೇಷ್ಠ ಸಂಪತ್ತು: ಸುನೀಲಗೌಡ ಪಾಟೀಲ

ಪ್ರತಿಭೋತ್ಸವದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 19:
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಭೌತಿಕ ಆಸ್ತಿಗಿಂತ ಬೌದ್ಧಿಕ ಜ್ಞಾನವೇ ಶ್ರೇಷ್ಠ ಸಂಪತ್ತಾಗಿದೆ. ಪ್ರತಿಯೊಂದು ಸಾಧನೆಯ ಹಿಂದೆ ಶಿಕ್ಷಣ ಮತ್ತು ಪರಿಶ್ರಮದ ಪಾತ್ರ ಮಹತ್ವದ್ದಾಗಿದೆ ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಹೇಳಿದರು.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ‘ಪ್ರತಿಭೋತ್ಸವ 2025-26’ ಕಾರ್ಯಕ್ರಮ ಉದ್ಘಾಟಿಸಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಸಜ್ಜಾಗಲು ಬಿ.ಎಲ್.ಡಿ.ಇ ಸಂಸ್ಥೆಯಿಂದ ನೀಟ್, ಜೆಇಇ, ಸಿಇಟಿ, ಕೆಸಿಇಟಿ, ನಾಟಾ, ಕ್ಲ್ಯಾಟ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದೆ. ವಚನಪಿತಾಮಹ ಡಾ. ಫ. ಗು. ಹಳಕಟ್ಟಿ, ಬಂಥನಾಳ ಶಿವಯೋಗಿಗಳು, ಶ್ರೀ ಬಿ.ಎಂ. ಪಾಟೀಲ, ಶ್ರೀಮತಿ ಬಂಗಾರಮ್ಮ ಸಜ್ಜನರು ಸೇರಿದಂತೆ ಅನೇಕ ಮಹನೀಯರು ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಶತಮಾನ ಕಂಡ ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಿದ ಎಲ್ಲ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ನಾನೂ ಇದೇ ಎಸ್.ಎಸ್. ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಇಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಇಂದು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ನಮ್ಮ ತಂದೆ ಬಿ.ಎಂ. ಪಾಟೀಲ ಅವರು ಬಿ.ಎಲ್.ಡಿ.ಇ ಆಸ್ಪತ್ರೆ ಹಾಗೂ ಎಂಜಿನಿಯರಿಂಗ್ ಕಾಲೇಜು ಆರಂಭಿಸುವ ಮೂಲಕ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಬೆಳವಣಿಗೆಗೆ ಭದ್ರ ಬುನಾದಿ ಹಾಕಿದ್ದಾರೆ. ಇಂದು ಸಂಸ್ಥೆಯು ಕೆಜಿಯಿಂದ ಪಿಜಿವರೆಗೆ ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ ಎಂದು ಹೇಳಿದರು.
ಬಿ.ಎಲ್.ಡಿ.ಇ ಸಂಸ್ಥೆಯ ಎವಿಎಸ್ ಆಯುರ್ವೇದ ಕಾಲೇಜಿಗೆ ಕಾಯಕಲ್ಪ ನೀಡಲಾಗಿದ್ದು, ಅದು ದೇಶದ ಅತ್ಯುತ್ತಮ ಕಾಲೇಜುಗಳಲ್ಲಿ ನಾಲ್ಕನೇ ಸ್ಥಾನ ಪಡೆದಿದೆ. ದೇವರ ಹಿಪ್ಪರಗಿ ಮತ್ತು ಬಸವನಬಾಗೇವಾಡಿಯಲ್ಲಿ ಸಿಬಿಎಸ್‌ಇ ಶಾಲೆಗಳು ಸೇರಿದಂತೆ ಹೊಸ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲಾಗುತ್ತಿದೆ. ವಿಜಯಪುರದ ಸಮನ್ವಯ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಮೂರು ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಉದ್ದೇಶ ಹೊಂದಲಾಗಿದೆ. ಸಂಸ್ಥೆಯ ಬೆಳವಣಿಗೆಗೆ ಶ್ರಮಿಸುತ್ತಿರುವ ಶಿಕ್ಷಕರು, ಬೋಧಕೇತರ ಸಿಬ್ಬಂದಿ ಹಾಗೂ ಆಡಳಿತಾಧಿಕಾರಿಗಳ ಸೇವೆ ಶ್ಲಾಘನೀಯ ಎಂದು ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ವಿ. ಉಪ್ಪಾರ ಮಾತನಾಡಿ, ಪ್ರತಿಭೆಯನ್ನು ಗುರುತಿಸಿದಾಗ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬೆಳೆಯುತ್ತದೆ. ಆತ್ಮವಿಶ್ವಾಸ ಹೆಚ್ಚಾದಾಗ ಸಾಧನೆಯ ಹಾದಿ ತೆರೆದುಕೊಳ್ಳುತ್ತದೆ. ಪ್ರತಿಭಾ ಪುರಸ್ಕಾರವು ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೊಸ ಭರವಸೆಯ ಬೆಳಕು ನೀಡುವ ವೇದಿಕೆಯಾಗಿದೆ ಎಂದರು.
ಎಸ್.ಎಸ್. ಆವರಣದ ಆಡಳಿತಾಧಿಕಾರಿ ಪ್ರೊ. ಐ.ಎಸ್. ಕಾಳಪ್ಪನವರ ಮಾತನಾಡಿ, 109 ವರ್ಷಗಳ ಹಿಂದೆ ಆರಂಭವಾದ ಬಿ.ಎಲ್.ಡಿ.ಇ ಸಂಸ್ಥೆಯ ಮೂಲಕ ಶ್ರೀ ಸಿದ್ಧೇಶ್ವರ ಶಾಲೆ ಹಾಗೂ ಕಾಲೇಜು ಆರಂಭಗೊಂಡಿವೆ. ಸುನೀಲಗೌಡ ಪಾಟೀಲ ಅವರು ಸಂಸ್ಥೆಯ ಕಾರ್ಯದರ್ಶಿಯಾದ ನಂತರ ಶತಮಾನದ ಶಾಲೆಗೆ ಮತ್ತಷ್ಟು ಕಳೆ ಬಂದಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯಮಟ್ಟದಲ್ಲಿ ಸಾಧನೆಗೈದ ಸಾನಿಕಾ ಮೆಟಗಾರ, ಅಕ್ಷತಾ ಚವ್ಹಾಣ, ಯುವರಾಜ ಬಗಲಿ ಸೇರಿದಂತೆ ಹಲವು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಬಾಲಗಾಂವ ಗುರುದೇವಾಶ್ರಮದ ಡಾ. ಅಮೃತಾನಂದ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಶಾಲಾ ಶಿಕ್ಷಣ ಇಲಾಖೆ ಶಾಖಾಧಿಕಾರಿ ಪ್ರಕಾಶ ಗೊಂಗಡಿ, ಬಿ.ಎಲ್.ಡಿ.ಇ ಸಂಸ್ಥೆಯ ನಿರ್ದೇಶಕ ಸಂಗನಬಸಪ್ಪ ಸಜ್ಜನ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಕ್ಷಕ ಜೆ.ಎ. ಬಿರಾದಾರ ನಿರೂಪಿಸಿದರು. ಪ್ರಾಚಾರ್ಯ ಡಾ. ಜಿ.ಡಿ. ಅಕಮಂಚಿ ಸ್ವಾಗತಿಸಿದರು. ಟಿ.ಎಂ. ಪವಾರ ವಂದಿಸಿದರು.

Share this