ವಿಜಯಪುರ ಕೇಂದ್ರ ಕಾರಾಗೃಹದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ

ಸಪ್ತಸಾಗರ ವಾರ್ತೆ,ವಿಜಯಪುರ, ಜೂ. 21:
ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ವಿಜಯಪುರ ಕೇಂದ್ರ ಕಾರಾಗೃಹದಲ್ಲಿ ಆರ್ಟ್ ಆಫ್ ಲಿವಿಂಗ್ ಹಾಗೂ ಕೇಂದ್ರ ಕಾರಾಗೃಹದ ಸಂಯುಕ್ತ ಆಶ್ರಯದಲ್ಲಿ ವಿಶೇಷ ಯೋಗ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಕಳೆದ ಏಳು ದಿನಗಳಿಂದ ಕಾರಾಗೃಹ ಸಿಬ್ಬಂದಿ ಹಾಗೂ ಕೈದಿಗಳಿಗಾಗಿ ಡಾ. ಬಿ.ಎಂ. ಪಾಟೀಲ್ ಗುರೂಜಿಯವರ ನೇತೃತ್ವದಲ್ಲಿ ಸಂತಸದ ಕಾರ್ಯಕ್ರಮ ಮತ್ತು ಸುದರ್ಶನ ಕ್ರಿಯೆ ಶಿಬಿರ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾರಾಗೃಹ ಅಧೀಕ್ಷಕ ಡಾ. ಎಂ.ಎಸ್. ಮಾಳಿ, ಆರೋಗ್ಯಕರ ಜೀವನಕ್ಕೆ ಮನಸ್ಸಿನ ಶಾಂತಿ ಅತ್ಯಗತ್ಯವಾಗಿದೆ. ಮನಸ್ಸು ಶಾಂತವಾಗಿದ್ದರೆ ವ್ಯಕ್ತಿ ಸದಾ ಕ್ರಿಯಾಶೀಲನಾಗಿ ಸಮಾಜದಲ್ಲಿ ಮಹತ್ತರ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತದೆ. ನಿಯಮಿತ ಯೋಗಾಭ್ಯಾಸದಿಂದ ಈ ಶಾಂತಿಯನ್ನು ಸಾಧಿಸಬಹುದು ಎಂದು ಹೇಳಿದರು.
ಜಿಲ್ಲಾ ಅಭಿವೃದ್ಧಿ ಸಮಿತಿ ಸದಸ್ಯ ಡಾ. ರವೀಂದ್ರ ಬೆಳ್ಳಿ ಮಾತನಾಡಿ, ಯೋಗದಿಂದ ಮನಸ್ಸು ಪ್ರಸನ್ನಚಿತ್ತದಿಂದ ಇರುತ್ತದೆ. ಕೋಪದ ಸಂದರ್ಭಗಳಲ್ಲಿ ವಿವೇಕ ಕಳೆದುಕೊಳ್ಳುವುದರಿಂದ ಅನಾಹುತಗಳು ಸಂಭವಿಸುತ್ತವೆ. ಆದ್ದರಿಂದ ಪ್ರತಿಯೊಬ್ಬರೂ ಪ್ರತಿನಿತ್ಯ ಕನಿಷ್ಠ ಅರ್ಧ ಗಂಟೆಯಾದರೂ ಯೋಗ ಹಾಗೂ ಪ್ರಾಣಾಯಾಮದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಡಾ. ಬಿ.ಎಂ. ಪಾಟೀಲ್ ಗುರೂಜಿ ಮಾತನಾಡಿ, ಮನುಷ್ಯನ ಮನಸ್ಸು, ಬುದ್ಧಿ ಮತ್ತು ಚಿತ್ತ ಸಮತೋಲನದಲ್ಲಿದ್ದಾಗ ಮಾತ್ರ ಸಂತೋಷದಿಂದ ಬದುಕಲು ಸಾಧ್ಯ. ಧ್ಯಾನ, ಯೋಗ, ಪ್ರಾಣಾಯಾಮ ಹಾಗೂ ನಿಯಮಿತ ಸುದರ್ಶನ ಕ್ರಿಯೆಯಿಂದ ಯಾವುದೇ ಸವಾಲಿನ ಪರಿಸ್ಥಿತಿಯನ್ನು ಸಂಯಮದಿಂದ ಎದುರಿಸಬಹುದು ಎಂದು ತಿಳಿಸಿದರು. ಕೈದಿಗಳು ಈ ಅಭ್ಯಾಸಗಳನ್ನು ತಮ್ಮ ದೈನಂದಿನ ಜೀವನದ ಭಾಗವನ್ನಾಗಿಸಿಕೊಳ್ಳುವಂತೆ ಕರೆ ನೀಡಿದರು.
ಮಹಿಳಾ ಬಂಧಿಗಳಿಗಾಗಿ ಶಿಕ್ಷಕಿ ಸಹನಾ ಪಾಟೀಲ ಯೋಗ ತರಬೇತಿ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಸಹಾಯಕ ಅಧೀಕ್ಷಕ ಅಭಿಜಿತ್ ಜಾಯಕ್ಕನವರ, ಜೈಲರ್‌ಗಳಾದ ಗೋಪಾಲ ಕುಲಕರ್ಣಿ, ಸವಿತಾ ಬೆಳ್ಳುಂಡಗಿ, ಭಾಗ್ಯಶ್ರೀ ಕೆ., ಡಿ.ಎಸ್. ದೀಕ್ಷಿತ್, ಆರ್ಟ್ ಆಫ್ ಲಿವಿಂಗ್‌ನ ಜಿಲ್ಲಾ ಅಭಿವೃದ್ಧಿ ಸಮಿತಿ ಸದಸ್ಯ ಪ್ರಕಾಶ ಚೌಹಾಣ್ ಹಾಗೂ ಸ್ವಯಂಸೇವಕ ಡಾ. ಎಸ್.ಜಿ. ಅಸ್ಕಿ, ಶೃತಿ ಪಾಟೀಲ, ಗೋಪಾಲ ಪಾಟೀಲ ಮತ್ತು ಲೋಕೇಶ್ ಪಾಟೀಲ ಉಪಸ್ಥಿತರಿದ್ದರು.
ಯೋಗ ದಿನಾಚರಣೆಯಲ್ಲಿ 30ಕ್ಕೂ ಹೆಚ್ಚು ಕಾರಾಗೃಹ ಸಿಬ್ಬಂದಿ, 300ಕ್ಕೂ ಅಧಿಕ ಪುರುಷ ಬಂಧಿಗಳು ಹಾಗೂ 30ಕ್ಕೂ ಹೆಚ್ಚು ಮಹಿಳಾ ಬಂಧಿಗಳು ಭಾಗವಹಿಸಿ ಯೋಗಾಭ್ಯಾಸ ನಡೆಸಿದರು.

Share this