ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 20:
ಸುಪ್ರೀಂ ಕೋರ್ಟ್ ನಲ್ಲಿ ದ್ವೇಷ ಭಾಷಣ ವಿಧೇಯಕ ಮಂಡನೆ ವಿರುದ್ಧ ಪ್ರಶ್ನೆ ಮಾಡುತ್ತೇವೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಶನಿವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ರಾಜ್ಯಪಾಲರಿಗೂ ಈ ಕುರಿತು ಮನವಿ ಸಲ್ಲಿಸುತ್ತೇವೆ ಎಂದು ಹೇಳಿದರು.
ಈಗಾಗಲೇ ಸಂವಿಧಾನದಲ್ಲಿ ಮಾತನಾಡುವ ಹಕ್ಕನ್ನು ನೀಡಲಾಗಿದೆ.
19/ A ಕಲಂನಲ್ಲಿ ಅಭಿವ್ಯಕ್ತಿ ಸ್ವಾತಂತ್ಯ ಹಕ್ಕು ನೀಡಲಾಗಿದೆ. ದ್ವೇಷ ಭಾಷಣ ವಿಧೇಯಕ ಇದಕ್ಕೆ ತದ್ವಿರುದ್ಧವಾಗಿದೆ. ಹೀಗಾಗಿ ನಾವು ಇದನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಬೇಕಾಗುತ್ತದೆ ಎಂದರು.
ಈ ಕಾಯ್ದೆ ಜಾರಿಗೆ ಆಗಬೇಕೆಂದರೆ ರಾಜ್ಯಪಾಲರ ಸಹಿ ಬೇಕು.
ಗವರ್ನರ್ ಸಹ ಈ ಕುರಿತು ಸ್ಪಷ್ಟೀಕರಣ ಕೇಳುತ್ತಾರೆ. ಬಿಜೆಪಿಯವರು ಸಂವಿಧಾನ ತಿದ್ದುಪಡಿ ಮಾಡುತ್ತಾರೆ ಎಂದು ಆರೋಪ ಮಾಡುವ ಕಾಂಗ್ರೆಸ್ಸಿಗರೇ ಸಂವಿಧಾನ ತಿದ್ದುಪಡಿ ಮಾಡುತ್ತಿದ್ದಾರೆ. ಇದು ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನ ಎಂದು ನುಡಿದರು.
ಸಂವಿಧಾನ ಕೈಯಲ್ಲಿ ಹಿಡಿದು ಹೋರಾಟ ಮಾಡುವ ರಾಹುಲ್ ಗಾಂಧಿಗೆ ಸಂವಿಧಾನ ಪುಸ್ತಕದ ಒಳಗೆ ಏನಿದೆ ಎಂಬುದು ಗೊತ್ತಿಲ್ಲ. ರಾಹುಲ್ ಗಾಂಧಿಗೆ, ರ ಬಿಟ್ಟು ಠ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಸಂವಿಧಾನ ನಮಗೆ ವಾಕ್ ಸ್ವಾತಂತ್ರ್ಯ ನೀಡಿದೆ. ಅದಕ್ಕೆ ಧಕ್ಕೆ ತರುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಹಾಗಾಗಿ ಇದನ್ನು ನಾವು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸ ಬೇಕಾಗುತ್ತದೆ ಎಂದು ತಿಳಿಸಿದರು.
ಬೆಳಗಾವಿ ಅಧಿವೇಶನದಲ್ಲಿ
ಯತ್ನಾಳಗಿಂತ ಬಿಜೆಪಿಯವರು ಹೆಚ್ಚು ದ್ವೇಷ ಭಾಷಣ ಮಾಡುತ್ತಾರೆಂಬ ಸಚಿವ ರಾಮಲಿಂಗ ರೆಡ್ಡಿ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಯತ್ನಾಳ, ಹಾಗಾದರೆ
ನನ್ನ ಭಾಷಣ ಅಷ್ಟು ದ್ವೇಷ ಇಲ್ಲ ಎಂಬಂತಾಯಿತು. ನನ್ನ ಭಾಷಣ ದ್ವೇಷ ಇಲ್ಲವೆಂದು ಹೇಳಿದ್ದಕ್ಕೆ ಮೊದಲು ರಾಮಲಿಂಗ ರೆಡ್ಡಿ ಅವರಿಗೆ ಅಭಿನಂದಿಸುತ್ತೇನೆ. ಕಾಂಗ್ರೆಸ್ ನಲ್ಲಿ ಈ ಕುರಿತು ಒಬ್ಬರಾದರೂ ತಿಳಿದುಕೊಂಡರಲ್ಲ ಎಂದು ಯತ್ನಾಳ ಹೇಳಿದರು.
ಆದರೆ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರಿಗೆ ಬಹಳ ತ್ರಾಸ್ ಆಗುತ್ತದೆ ಎಂದು ಈ ಸಂದರ್ಭದಲ್ಲಿ ಯತ್ನಾಳ ಕುಟುಕಿದರು. ರಾಮಲಿಂಗಾರೆಡ್ಡಿ ಅನುಭವಿ, ಒಳ್ಳೆಯ ರಾಜಕಾರಣಿ. ಪಕ್ಷ, ಪಂಗಡ ಬೇರೆ. ಅವರೊಬ್ಬ ಹೃದಯವಂತ ರಾಜಕಾರಣಿ ಎಂದು ಹೊಗಳಿದರು.
ವಿಚಾರಗಳಲ್ಲಿ ನಮಗೂ ಅವರಿಗೂ ಘರ್ಷಣೆ ಆಗುತ್ತಿರುತ್ತದೆ.
ರಾಮಲಿಂಗಾರೆಡ್ಡಿ ಅವರು ಪಕ್ಷಾತೀತವಾಗಿ ಕೆಲಸ ಮಾಡುತ್ತಾರೆ. ಸಚಿವರಾಗಿ ಹೇಗಿರಬೇಕು ಹಾಗಿರುತ್ತಾರೆ.
ದ್ವೇಷ ಭಾಷಣ ಎಲ್ಲಿಂದ ಆರಂಭವಾಗುತ್ತದೆಯೋ ಅಲ್ಲಿಂದ ಕ್ರಮ ಆಗಬೇಕು ಎಂದರು.
ದ್ವೇಷ ಭಾಷಣ ಮಾಡುವವರಿಗೆ ಒಳಗೆ ಹಾಕಬೇಕು. ಪಾಕಿಸ್ತಾನ ಪರ ಮಾತನಾಡುವವರಿಗೆ ನಾವು ಬೈಯ್ಯಲೇಬೇಕಾಗುತ್ತದೆ ಎಂದು ವಾಗ್ದಾಳಿ ನಡೆಸಿದರು. ಇದು ದ್ವೇಷ ಭಾಷಣ ಅಲ್ಲ. ದೇಶಪ್ರೇಮ ಎಂದರು.
ದ್ವೇಷ ಭಾಷಣ ವಿಧೇಯಕ ಮಂಡನೆ: ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ-ಯತ್ನಾಳ


