ಸಪ್ತಸಾಗರ ವಾರ್ತೆ, ತಿಕೋಟಾ,ನ. 3:
ಕನ್ನಡ ಭಾಷೆ ಅತ್ಯಂತ ಶ್ರೀಮಂತವಾದುದು. ಎರಡು ಸಾವಿರ ವರ್ಷಗಳಷ್ಟು ಪುರಾತನ ಇತಿಹಾಸವನ್ನು ಹೊಂದಿದ ಶ್ರೇಷ್ಠ ಭಾಷೆಯಾಗಿದೆ ಎಂದು ಶ್ರೀ ಸಿದ್ದೇಶ್ವರ ಕೋಚಿಂಗ್ ಕ್ಲಾಸಿನ ಸಂಸ್ಥಾಪಕ ಅಧ್ಯಕ್ಷ, ಹೋರಾಟಗಾರ ಸುರೇಶ್ ಎಸ್. ಜತ್ತಿ ಅವರು ಹೇಳಿದರು.
ಬಿ.ಎಲ್.ಡಿ.ಇ ಸಂಸ್ಥೆಯ
ನೂತನ ಕಲಾ ಮಹಾ ವಿದ್ಯಾಲಯದ ಕನ್ನಡ ವಿಭಾಗ ಹಾಗೂ ಸಾಂಸ್ಕೃತಿಕ ಸಮಿತಿ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಆಯೋಜಿಸಿದ್ದ
ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ರಾಜ್ಯೋತ್ಸವ ಸಮಾರಂಭ ಒಂದು ದಿನಕ್ಕೆ ಸೀಮಿತವಾಗದೆ ಅದು ನಿತ್ಯ ನಿರಂತರವೂ ನಮ್ಮ ಜೀವಾಳವಾಗಬೇಕಿದೆ. ಹರಿದು ಹಂಚಿ ಹೋಗಿದ್ದ ಕನ್ನಡಿಗರನ್ನು ಒಂದೆಡೆ ಸೇರಿಸಲು ಶ್ರಮಿಸಿದ ಅನೇಕ ಹೋರಾಟಗಾರರ ಜೀವನ ನಮ್ಮೆಲ್ಲರಿಗೂ ಆದರ್ಶ ವಾಗಿದೆ. ಕನ್ನಡದ ಕುಲ ಪುರೋಹಿತ ಆಲೂರು ವೆಂಕಟರಾಯರ ಆದಿಯಾಗಿ ಸಿದ್ದಪ್ಪ ಕಂಬಳಿ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಅ.ನ. ಕೃಷ್ಣರಾವ್, ವಿ.ಕೃ.ಗೋಕಾಕ, ಹುಯ್ಲುಗೋಳ್ ನಾರಾಯಣ ರಾವ್ ಮುಂತಾದ ಕನ್ನಡ ಸೇವಕರ ಅವಿರತ ಶ್ರಮದಿಂದ ಏಕೀಕರಣದ ಚಳುವಳಿ ಯಶಸ್ವಿಯಾಯಿತು. ಆದರೆ ದುರ್ದೈವವಶಾತ್ ಕನ್ನಡ ನಾಡಿನಲ್ಲಿಯೇ ಕನ್ನಡದ ರಕ್ಷಣೆಗಾಗಿ ಸಂಘಟನೆಗಳು ಹುಟ್ಟಿಕೊಳ್ಳುವ ಪರಿಸ್ಥಿತಿ ಇಂದು ನಿರ್ಮಾಣವಾಗಿರುವುದು ಖೇದಕರ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಕನ್ನಡದ ಸಾಹಿತ್ಯ ಪ್ರಾಚೀನ ಹಳೆಗನ್ನಡ ನಡುಗನ್ನಡ ಹೊಸಗನ್ನಡ ಹೀಗೆ ವಿಧ ವಿಧದ ಸಾಹಿತ್ಯ ಹುಟ್ಟಿಕೊಳ್ಳುವ ಮೂಲಕ ಕನ್ನಡ ಸಾರಸ್ವತ ಲೋಕ ಶ್ರೀಮಂತಗೊಂಡಿದೆ. ಇದಕ್ಕೂ ಮುನ್ನ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪ್ರೊ. ಬಿ. ಎಸ್. ಬೆಳಗಲಿ ಅವರು ಮಾತನಾಡಿ, ಇವತ್ತು ಕನ್ನಡದ ಹಬ್ಬ ಕೇವಲ ಕರ್ನಾಟಕದಲ್ಲಿ ಅಷ್ಟೇ ಅಲ್ಲ; ಜಗತ್ತಿನ ಕುವೈತ್ ಕೆನಡಾ ಇಂಗ್ಲೆಂಡ್ ಅಮೇರಿಕಾ ರಷ್ಯಾ ಇವುಗಳು ಅಲ್ಲದೆ ಬೇರೆ ಬೇರೆ ರಾಷ್ಟ್ರಗಳಲ್ಲಿಯೂ ಕನ್ನಡಿಗರು ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಇಂತಹ ಸಂಭ್ರಮದ ಆಚರಣೆ ಕನ್ನಡದ ವಿಸ್ತಾರವನ್ನು ವೈಭವವನ್ನು ಎತ್ತಿ ತೋರಿಸುತ್ತದೆ. ಇಂದಿನ ಯುವ ಪೀಳಿಗೆ ಕನ್ನಡದ ಬಗ್ಗೆ ಪ್ರೀತಿ, ಅಭಿಮಾನ, ಗೌರವ ಹೊಂದುವುದು ಅನಿವಾರ್ಯವಾಗಿದೆ. ಕಾಲೇಜುಗಳಲ್ಲಿ ಓದುತ್ತಿರುವ ಬಹುತೇಕ ವಿದ್ಯಾರ್ಥಿಗಳಿಗೆ ಸ್ಪಷ್ಟವಾದ ಕನ್ನಡವನ್ನು ಓದಲು ಸಹ ಬಾರದಿರುವುದು ಕನ್ನಡದ ಬಗೆಗೆ ಇರುವ ತಾತ್ಸಾರ ಮನೋಭಾವನೆ ಎದ್ದು ಕಾಣುತ್ತದೆ ಎಂದರು. ಕನ್ನಡ ಉಪನ್ಯಾಸಕ ಡಾ. ಸಂತೋಷ ನವಲಗುಂದ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಭಾಷೆ, ನಾಡು, ಜಲ, ಗಡಿ ಇವುಗಳ ರಕ್ಷಣೆ ಅಷ್ಟೇ ಕನ್ನಡದ ಸೇವೆ ಆಗುವುದಿಲ್ಲ. ಕನ್ನಡದ ಅಭಿಮಾನವೆಂದರೆ ನಮ್ಮ ಉಸಿರು, ನಮ್ಮ ಹೆಸರು, ನಮ್ಮ ನಡೆ ನುಡಿ ಕನ್ನಡವಾಗಬೇಕಿದೆ. ನಿತ್ಯ ಜೀವನದಲ್ಲಿ ಕನ್ನಡದ ಶುದ್ಧ ಬಳಕೆಯಿಂದ ಕನ್ನಡಕ್ಕೆ ನಾವು ಕೊಡುವ ಶ್ರೇಷ್ಠ ಗೌರವ ಎನಿಸುತ್ತದೆ. ಹೀಗಾಗಿ ಕನ್ನಡ ನಾಡಿನಲ್ಲಿ ಕನ್ನಡವು ಮೆರೆಯಬೇಕು. ಅದು ಎಲ್ಲರಲ್ಲೂ ಮನೆ ಮಾಡಬೇಕು. ಅಂದಾಗ ಕನ್ನಡವು ಉಳಿಯಲು ಸಾಧ್ಯವಾಗುತ್ತದೆ ಎಂದರು. ಇದೇ ವೇಳೆ, ಕನ್ನಡ ರಾಜ್ಯೋತ್ಸವ ನಿಮಿತ್ಯ ಏರ್ಪಡಿಸಿದ್ದ ಭಾಷಣ, ಭಾವಗೀತೆ, ಪ್ರಬಂಧ, ಸ್ವರಚಿತ ಕಾವ್ಯ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪಿ. ಎಸ್. ತೋಳನೂರ ವಹಿಸಿದ್ದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಐ.ಕ್ಯೂ. ಎ. ಸಿ. ಸಂಯೋಜಕರಾದ ಪ್ರೊ. ಬಿ. ಎಸ್. ಬೆಳಗಲಿ, ಕನ್ನಡ ಉಪನ್ಯಾಸಕರಾದ ಎಸ್. ಬಿ. ಉಪ್ಪಾರ, ಶ್ರೀದೇವಿ ಪಾಟೀಲ, ಕಾಲೇಜಿನ ಸಂಯೋಜಕರಾದ ಎಸ್. ಪಿ. ಪಾಟೀಲ, ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕುಮಾರಿ ರಕ್ಷಿತಾ ಪ್ರಾರ್ಥಿಸಿದರು. ಪವಿತ್ರಾ ನಡುವಿನಮನಿ ನಿರೂಪಿಸಿ, ವಂದಿಸಿದರು.
ಕನ್ನಡದ ನೆಲದಲ್ಲಿಯೇ ಕನ್ನಡದ ಉಳಿವಿಗಾಗಿ ಸಂಘಟನೆಗಳ ಹುಟ್ಟು ದುರದೃಷ್ಟಕರ: ಸುರೇಶ ಜತ್ತಿ ವಿಷಾದ


