ಸಪ್ತಸಾಗರ ವಾರ್ತೆ,ವಿಜಯಪುರ, ನ. 10: ಒಂದು ಚಿತ್ರ ಸಾವಿರ ಪದಗಳಿಗೆ ಸಮವಾಗಿದ್ದು, ಫೋಟೋಗ್ರಫಿಯ ಕೌಶಲ್ಯಗಳನ್ನು ವಿದ್ಯಾರ್ಥಿನಿಯರು ಕಲಿಯುವುದು ಅತೀ ಅವಶ್ಯಕ ಎಂದು ಮಹಿಳಾ ವಿವಿಯ ಕುಲಪತಿ ಪ್ರೊ, ವಿಜಯಾ ಕೋರಿಶೆಟ್ಟಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗ ಹಾಗೂ ಪ್ರಧಾನ ಮಂತ್ರಿ ಉಚ್ಚತರ ಶಿಕ್ಷಣ ಅಭಿಯಾನ, ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಸಚಿವಾಲಯ ಮತ್ತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಸಹಯೋಗದೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ ‘ಫೋಟೋಗ್ರಫಿ ಕೌಶಲ್ಯಗಳ’ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಫೋಟೋಗ್ರಫಿ ಕಲೆ, ವಿಜ್ಞಾನ ಮತ್ತು ತಂತ್ರಜ್ಞಾನಗಳ ಸಮ್ಮಿಶ್ರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಫೋಟೋಗ್ರಫಿಗೆ ಮಹತ್ವ ಹೆಚ್ಚಾಗಿದ್ದು, ಫೋಟೋಗ್ರಫಿಯ ವಿಭಿನ್ನ ಕೌಶಲ್ಯಗಳನ್ನು ತಿಳಿದುಕೊಂಡು ಹೆಚ್ಚಿನ ಜ್ಞಾನವನ್ನು ಹೊಂದುವುದು ಅಗತ್ಯ. ಫೋಟೋಗ್ರಫಿ ತರಬೇತಿಯಿಂದ ಪಡೆದ ತಿಳುವಳಿಕೆಯನ್ನು ಬಳಸಿಕೊಂಡು ವಿದ್ಯಾರ್ಥಿನಿಯರು ಸಬಲೀಕರಣದತ್ತ ಮುಂದುವರಿಯಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಇಂದಿನ ಯುವ ಪೀಳಿಗೆ ಫೋಟೋ ತೆಗೆಯುವ ಕ್ರೇಝ್‌ನಲ್ಲಿ ಅನೇಕ ಅನಾಹುತಗಳನ್ನು ಎದುರಿಸುತ್ತಿದೆ. ಆದರೆ ಇದೇ ಸಮಯದಲ್ಲಿ ಫೋಟೋಗ್ರಫಿ ಕ್ಷೇತ್ರದಲ್ಲಿ ವಿಶಾಲವಾದ ಉದ್ಯೋಗಾವಕಾಶಗಳು ಹೆಚ್ಚುತ್ತಿವೆ. ಡಿಜಿಟಲ್ ಯುಗದಲ್ಲಿ ಫೋಟೋಗ್ರಫಿ ಕೌಶಲ್ಯ ಕಲಿಯುವುದು ಅವಶ್ಯಕವಾಗಿದ್ದು, ವಿದ್ಯಾರ್ಥಿಗಳು ವಿವಿಧ ಕಲೆ ಮತ್ತು ಕೌಶಲ್ಯಗಳನ್ನು ಅಳವಡಿಸಿಕೊಂಡು ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಬೇಕು ಎಂದರು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ ಕಾಕಡೆ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಫೋಟೋಗ್ರಫಿ ಪ್ರತಿಯೊಬ್ಬರ ಜೀವನದಲ್ಲೂ ಪ್ರಮುಖ ಪಾತ್ರವಹಿಸುತ್ತಿದೆ. ವಿವಿಧ ಭಾವನೆಗಳನ್ನು ಅಚ್ಚುಕಟ್ಟಾಗಿ ಸೆರೆಹಿಡಿಯುವ ಸಾಮರ್ಥ್ಯ ಫೋಟೋಗೆ ಮಾತ್ರ ಸಿಗುತ್ತದೆ. ವಿದ್ಯಾರ್ಥಿನಿಯರು ವೈವಿಧ್ಯಮಯ ಫೋಟೋಗ್ರಫಿ ಕೌಶಲ್ಯಗಳನ್ನು ಕಲಿತು ತಮ್ಮ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಾಗಾರದಲ್ಲಿ ೧೦೦ ಕ್ಕೂ ಅಧಿಕ ವಿವಿಧ ವಿಭಾಗದ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಹಿರಿಯ ನೋಡಲ್ ಅಧಿಕಾರಿ ಪ್ರೊ. ಜಿ ಬಿ ಸೋನಾರ್, ವಿವಿಧ ವಿಭಾಗದ ವಿದ್ಯಾರ್ಥಿನಿಯರು, ಪ್ರಾಧ್ಯಾಪಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತಿತರಿದ್ದರು.
ವಿಭಾಗದ ಕಾರ್ಯಾಗಾರದ ಸಂಯೋಜಕ ಹಾಗೂ ಸಹಾಯಕ ಪ್ರಾಧ್ಯಾಪಕ ಸಂದೀಪ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಅತಿಥಿ ಉಪನ್ಯಾಸಕಿ ಸುಷ್ಮಾ ಪವಾರ ನಿರೂಪಿಸಿದರು. ಸಂಶೋಧನಾ ವಿದ್ಯಾರ್ಥಿನಿಯರಾದ ಜಯಶ್ರೀ ತಳವಾರ್ ಸ್ವಾಗತಿಸಿದರು, ಪವಿತ್ರಾ ಕಂಬಾರ ವಂದಿಸಿದರು.
ತಾಂತ್ರಿಕ ಗೋಷ್ಠಿಗಳು:
ಗೋಷ್ಠಿ-೧
ಮೊದಲನೆ ತಾಂತ್ರಿಕ ಗೋಷ್ಟಿಯಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಪಕಿ ಡಾ. ತಹಮೀನ ನಿಗಾರ್ ಸುಲ್ತಾನ ‘ಛಾಯಾಗ್ರಹಣದ ಒಂದು ಪರಿಚಯ’ ಎಂಬ ವಿಷಯದ ಕುರಿತು ಮಾತನಾಡಿ, ಬೆಳಕಿನ ನೆರವಿನಿಂದ ಯಾವುದೇ ದೃಶ್ಯವನ್ನು ಶಾಶ್ವತವಾಗಿ ಸೆರೆಹಿಡಿಯುವ ಕಲೆಯೇ ಫೋಟೋಗ್ರಫಿ ಎಂದು ವಿವರಿಸಿದರು. ನಿಸರ್ಗ ಛಾಯಾಚಿತ್ರಣ, ಪೋಟ್ರೇðಟ್‌ಗಳು ಮತ್ತು ಫೋಟೋ ಪತ್ರಿಕೋದ್ಯಮ ಸೇರಿದಂತೆ ವಿವಿಧ ಛಾಯಾಗ್ರಹಣ ಕ್ಷೇತ್ರಗಳನ್ನು ಪರಿಚಯಿಸಿ, ಅವುಗಳ ಮಹತ್ವವನ್ನು ತಿಳಿಸಿದರು. ತಂತ್ರಜ್ಞಾನ ಪ್ರಗತಿಯೊಂದಿಗೆ ಡ್ರೋನ್ ಫೋಟೋಗ್ರಫಿ, ೩೬೦-ಡಿಗ್ರಿ ಚಿತ್ರಗಳು ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ಚಿತ್ರ ಸಂಯೋಜನೆ ಫೋಟೋಗ್ರಫಿಗೆ ಹೊಸ ಆಯಾಮಗಳನ್ನು ತಂದಿವೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಗೋಷ್ಠಿ-೨
ಎರಡನೇ ತಾಂತ್ರಿಕ ಗೋಷ್ಟಿಯಲ್ಲಿ ಬೆಂಗಳೂರಿನ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ್ ಸುವರ್ಣ “ಪರಿಪೂರ್ಣ ಕ್ಷಣಗಳನ್ನು ಸೆರೆಹಿಡಿಯುವ ಕಲೆ” ಎಂಬ ವಿಷಯದ ಕುರಿತು ಮಾತನಾಡಿ, ಬೀದರ್‌ನಿಂದ ಚಾಮರಾಜನಗರದವರೆಗೆ ನಡೆಸಿದ ತಮ್ಮ ಛಾಯಾಚಿತ್ರ ಸಂಚಾರವು ಕೇವಲ ಚಿತ್ರಗಳ ಸಂಗ್ರಹವಲ್ಲ, ಕರ್ನಾಟಕದ ಇತಿಹಾಸ ಮತ್ತು ಸಂಸ್ಕೃತಿಯ ಜೀವಂತ ದಾಖಲೆ ಎಂದು ಅವರು ವಿವರಿಸಿದರು. ಈ ಸಂಚಾರವು ಕಲಾತ್ಮಕ ಪ್ರದರ್ಶನವಾಗಿರುವಷ್ಟೇ, ರಾಜ್ಯದ ಭೂತಕಾಲವನ್ನು ಇಂದಿನ ತಲೆಮಾರಿಗೆ ಪರಿಚಯಿಸುವ ಪ್ರೇರಣಾದಾಯಕ ಪಯಣವಾಗಿದೆ. ಇದೇ ಸಂದರ್ಭದಲ್ಲಿ, ತಾವೂ ಸೆರೆಹಿಡಿದ ಸಿನಿಮಾ ನಟ-ನಟಿಯರ ಚಿತ್ರಗಳು, ಸೂರ್ಯಾಸ್ತದ ದೃಶ್ಯ, ಮುಖ್ಯಮಂತ್ರಿಗಳ ಹಾಸ್ಯಮಯ ಕ್ಷಣಗಳು, ಯೋಧರ ದೃಶ್ಯ ಮತ್ತು ಹಸುಗಳ ನೈಸರ್ಗಿಕ ಚಿತ್ರಗಳನ್ನೂ ವಿದ್ಯಾರ್ಥಿನಿಯರಿಗೆ ಪ್ರದರ್ಶಿಸಿ, ಪ್ರತಿಯೊಂದು ಫೋಟೋದ ಹಿಂದೆ ಇರುವ ಕಲಾತ್ಮಕತೆ ಮತ್ತು ಮಹತ್ವವನ್ನು ವಿವರಿಸಿದರು.
ಗೋಷ್ಠಿ-೩
ಮೂರನೇ ತಾಂತ್ರಿಕ ಗೋಷ್ಟಿಯಲ್ಲಿ ಬಾಗಲಕೋಟೆಯ ಪತ್ರಿಕಾ ಛಾಯಾಗ್ರಾಹಕ ಸಂಗಮೇಶ ಬಡಿಗೇರ್ “ಛಾಯಾಗ್ರಹಣದ ಮೂಲಕ ಕಥೆ ಹೇಳುವುದು” ಎಂಬ ವಿಷಯದ ಕುರಿತು ಮಾತನಾಡಿ, ಅವರು ವಿದ್ಯಾರ್ಥಿನಿಯರಿಗೆ ಫೋಟೋಗ್ರಫಿ ಕೌಶಲ್ಯಗಳ ವಿವಿಧ ಆಯಾಮಗಳನ್ನು ಪರಿಚಯಿಸಿ, ಕ್ಯಾಮರಾದಲ್ಲಷ್ಟೇ ಅಲ್ಲದೆ ಮೊಬೈಲ್ ಫೋನ್‌ಗಳಲ್ಲೂ ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿಯಬಹುದು. ಫೋಟೋ ತೆಗೆಯುವುದು ಒಂದು ಕಲೆ ಮತ್ತು ಕೌಶಲ್ಯವಾಗಿದ್ದು, ಈ ಕೌಶಲ್ಯವನ್ನು ಪ್ರತಿಯೊಬ್ಬ ವಿದ್ಯಾರ್ಥಿನಿಯರೂ ಬೆಳೆಸಿಕೊಳ್ಳುವುದು ಅಗತ್ಯವೆಂದು ಹೇಳಿದರು. ತಮ್ಮ ಅನುಭವಗಳನ್ನು ಹಂಚಿಕೊAಡ ಅವರು, ಇದುವರೆಗೆ ತಾವು ಸೆರೆಹಿಡಿದ ಅನೇಕ ಗಮನಾರ್ಹ ಚಿತ್ರಗಳನ್ನೂ ಪ್ರದರ್ಶಿಸಿದರು. ತೋರಿಸಿದ ವೈವಿಧ್ಯಮಯ ಛಾಯಾಚಿತ್ರಗಳು ವಿದ್ಯಾರ್ಥಿನಿಯರ ಗಮನ ಸೆಳೆದವು. ಗ್ರಾಮೀಣ ಜೀವನದ ನಿಸರ್ಗಸಹಜ ಕ್ಷಣಗಳು, ರೈತರ ಶ್ರಮ, ಹಳೆಯ ದೇವಾಲಯಗಳು ಹಾಗೂ ಕೋಟೆಗಳ ಐತಿಹಾಸಿಕ ಸೌಂದರ್ಯಗಳು ಚಿತ್ರಗಳಲ್ಲಿ ಜೀವಂತವಾಗಿ ಮೂಡಿಬಂದAತೆ ವಿದ್ಯಾರ್ಥಿನಿಯರಿಗೆ ತೋರಿಸಿದರು.
ಗೋಷ್ಠಿ-೪
ನಾಲ್ಕನೇ ತಾಂತ್ರಿಕ ಗೋಷ್ಟಿಯಲ್ಲಿ ಸಹಾಯಕ ಪ್ರಾಧ್ಯಪಕ ಸಂದೀಪ್ ‘ಸ್ಮಾಟ್ಫೋðನ್ ಫೋಟೋಗ್ರಫಿಯ ಅಗತ್ಯತೆ’ ಎಂಬ ವಿಷಯದ ಕುರಿತು ಮಾತನಾಡಿ, ಸ್ಮಾರ್ಟ್ಫೋನ್ ಫೋಟೋಗ್ರಫಿಯ ಪ್ರಮುಖ ತಂತ್ರಗಳನ್ನು ವಿದ್ಯಾರ್ಥಿನಿಯರಿಗೆ ಪರಿಚಯಿಸಿದರು. ಪ್ರತಿಚಿತ್ರಕ್ಕೂ ಸರಿಯಾದ ಸೆಟ್ಟಿಂಗ್ ಅಗತ್ಯವಿದ್ದು, ಆಪ್ಟಿಕಲ್ ಜೂಮ್ ಬಳಸಿದರೆ ಚಿತ್ರ ಸ್ಪಷ್ಟವಾಗಿ ಉಳಿಯುತ್ತದೆ, ಆದರೆ ಡಿಜಿಟಲ್ ಜೂಮ್ ಬಳಸಿದರೆ ಗುಣಮಟ್ಟ ಹದಗೆಡುತ್ತದೆ ಅಷ್ಟೇ ಅಲ್ಲದೇ ಬೆಳಕಿನ ನಿಯಂತ್ರಣ ಅತ್ಯಂತ ಮುಖ್ಯವಾಗಿದ್ದು, ಹೆಚ್ಚು ಬೆಳಕು ಇದ್ದರೆ ಎಕ್ಸ್ಪೋಶರ್ ಕಡಿಮೆ ಮಾಡಬೇಕು ಮತ್ತು ಕಡಿಮೆ ಬೆಳಕು ಇದ್ದರೆ ಐಎಸ್‌ಒ ಹೆಚ್ಚಿಸಬಹುದೆಂದು ಸಲಹೆ ನೀಡಿದರು. ಹಿನ್ನಲೆಯಲ್ಲಿ ನೇರ ಬೆಳಕು ಕ್ಯಾಮೆರಾಕ್ಕೆ ತಾಗದಂತೆ ನೋಡಿಕೊಳ್ಳಬೇಕು. ಫೋನ್‌ನ್ನು ಎರಡು ಕೈಗಳಿಂದ ಸ್ಥಿರವಾಗಿ ಹಿಡಿಯಬೇಕು, ಅಗತ್ಯವಿದ್ದರೆ ಟ್ರೈಪಾಡ್ ಬಳಸಿ ಚಿತ್ರ ಪಡೆಯುವುದೂ ಸೂಕ್ತ. ಬ್ರೈಟ್ನೆಸ್, ಕಾಂಟ್ರಾಸ್ಟ್ ಹಾಗೂ ಎಕ್ಸ್ಪೋಶರ್ ಲಾಕ್ ಸರಿಯಾಗಿ ಬಳಸಿದರೆ ಉತ್ತಮ ಗುಣಮಟ್ಟದ ಚಿತ್ರ ಪಡೆಯಬಹುದು ಎಂದು ತಿಳಿಸಿದರು.


