ಜಗಜೀವನ ರಾಮರ ಕೊಡುಗೆ ಅಪಾರ:ಲೋಣಿ

ಸಪ್ತಸಾಗರ ವಾರ್ತೆ,ವಿಜಯಪುರ, ಏ. 5:
ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಂ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ 119 ನೇ ಜನ್ಮದಿನಾಚರಣೆಯನ್ನು ಭಾನುವಾರ ಜಿಲ್ಲಾ ಕಾಂಗ್ರೆಸ್ ಕಾರ್ಯಲಯದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಅವರು ಮಾತನಾಡಿ, ಡಾ. ಬಾಬು ಜಗಜೀವನ ರಾಂ ಅವರು ಸ್ವಾತಂತ್ರ್ಯ ಹೋರಾಟಗಾರ, ಅಸ್ಪೃಸತೆಯ ನಿವಾರಣಾ ಹೋರಾಟದ ಮುಂಚೂಣಿ ನಾಯಕ, ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರ ನಾಯಕ ಹಾಗೂ ಭಾರತದ ಮಾಜಿ ಉಪ ಪ್ರಧಾನಿಗಳಾಗಿ ದೇಶಕ್ಕಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ. ಅವರು ಭಾರತದ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಬಿಹಾರದ ರಾಜಕಾರಣಿಯಾಗಿದ್ದರು. 1935 ರಲ್ಲಿ ದಲಿತರಿಗೆ ಸಮಾನತೆಯನ್ನು ಸಾಧಿಸಲು ಸಮರ್ಪಿತವಾದ ಅಖಿಲ ಭಾರತ ಶೋಷಿತ ವರ್ಗಗಳ ಲೀಗ್ ಅನ್ನು ಸ್ಥಾಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. 1937 ರಲ್ಲಿ ಬಿಹಾರ ವಿಧಾನಸಭೆಗೆ ಆಯ್ಕೆಯಾದರು. ನಂತರ ಅವರು ಗ್ರಾಮೀಣ ಕಾರ್ಮಿಕ ಚಳವಳಿಯನ್ನು ಸಂಘಟಿಸಿದರು. ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಅನೇಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದವರು. ತುರ್ತು ಪರಿಸ್ಥಿಯ ಸಮಯದಲ್ಲಿ ಅವರು ಇಂದಿರಾ ಗಾಂಧಿಯನ್ನು ಬೆಂಬಲಿಸಿದ್ದರು. ಹೀಗೆ ಪಕ್ಷಕ್ಕಾಗಿ ಹಾಗೂ ಹಿಂದುಳಿದ ವರ್ಗಕ್ಕಾಗಿ ಬಹಳಷ್ಟು ಅಭಿವೃದ್ಧಿ ಕಾರ್ಯ ಮಾಡಿದ ಧೀಮಂತನಾಯಕರಾಗಿದ್ದರು. ಇವತ್ತಿನ ಈ ಯುವನಾಯಕರಿಗೆ ಪಕ್ಷದಲ್ಲಿ ಬಂದ ನಂತರ ಏನಾದರು ಆಗಬೇಕು ಒಮ್ಮೆಲೆ ಶ್ರೀಮಂತರಾಗಬೇಕು. ಮತ್ತೊಬ್ಬರನ್ನು ಹೋಲಿಕೆ ಮಾಡಿಕೊಂಡು ಹೋಗುವುದು ಆಗಬಾರದು. ನಾವು ಸೇವಾಗ್ರಾಹಕರಾಗಬೇಕು, ಪಕ್ಷದಲ್ಲಿ ಸೇವೆ ಮಾಡಬೇಕು ಅನ್ನುವ ಭಾವನೆ ಬರಬೇಕು. ಪಕ್ಷದಿಂದ ನಮಗೆ ಏನಾದರೂ ಪ್ರತಿಫಲ ಸಿಗುತ್ತದೆ ಎಂಬ ಮನವರಿಕೆಯುಳ್ಳವರಾಗಬೇಕು. ಇವತ್ತು ಭಾರತದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು. ಬಂದಾಗ ಮಾತ್ರ ಎಲ್ಲ ಸಮಾಜದ ಏಳ್ಗೆ ಆಗುತ್ತದೆ. ಇಂದು ಸಮಾಜದಲ್ಲಿ ಆಗುತ್ತಿರುವ ಒಡೆದಾಳುವ ನೀತಿ ನೋಡಿದರೆ ಭಯಾನಕ ಅನಿಸುತ್ತದೆ. ಕಾರಣ ಕಾಂಗ್ರೆಸ್ ಸರಕಾರ ಇದ್ದರೆ ಎಲ್ಲ ಸಮಾಜಗಳನ್ನು ಒಂದು ಗೂಡಿಸುವ ಕಾರ್ಯ ಆಗುತ್ತದೆ. ಇಲ್ಲದಿದ್ದರೆ ಸಮಾಜದಲ್ಲಿ ಒಡೆದಾಳುವ ಸಂದರ್ಭ ಬರುತ್ತದೆ. ಇಂದು ವಿಜಯಪುರ ಜಿಲ್ಲೆಯ ಎಲ್ಲ ನಾಯಕರು ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಬಾಗಲಕೋಟೆ ಚುನಾವಣೆಯಲ್ಲಿ ಭಾಗಿಯಾಗಿ ಪಕ್ಷದ ಅಭ್ಯರ್ಥಿ ಜಯಭೇರಿಗಾಗಿ ಶತಪ್ರಯತ್ನ ಮಾಡುತ್ತಿದ್ದಾರೆ. ನಾವೂ ಕೂಡಾ ಈ ಕಾರ್ಯಕ್ರಮ ಮಾಡಿಕೊಂಡು ಬಾಗಲಕೋಟೆಗೆ ಹೋಗುತ್ತಾ ಇದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ಹಿರಿಯ ಮುಖಂಡರಾದ ಕೆ. ಎಫ್. ಅಂಕಲಗಿ ವಕೀಲರು ಮಾತನಾಡಿ, ಬಾಬು ಜಗಜೀವನಾರಂ ಅವರು ಅತ್ಯಂತ ಜ್ಞಾನಿಗಳಾಗಿ ಸ್ವಾತಂತ್ರ್ಯ ಸಿಕ್ಕನಂತರ ನಮ್ಮ ದೇಶದಲ್ಲಿ ಆಹಾರದ ಕೊರತೆಯಿಂದ ಪರದೇಶದಿಂದ ಆಹಾರ ತರುವದನ್ನು ಮನಗಂಡು ನಮ್ಮ ದೇಶದಲ್ಲಿ ವ್ಯಸಾಯಕ್ಕೆ ಹೆಚ್ಚಿನ ಮಹತ್ವ ನೀಡಿ ಆಹಾರ ಉತ್ಪಾದನೆ ಹೆಚ್ಚಿಗೆ ಮಾಡಿದರು. ಇದರಿಂದ ಇವರಿಗೆ ಹಸಿರು ಕ್ರಾಂತಿಯ ಹರಿಕಾರ ಎಂದು ಸಾರಿದರು. ಇಂದಿರಾಗಾಂಧಿಯವರು ಪ್ರಧಾನ ಮಂತ್ರಿಯಾದಾಗ ಜಗಜೀವನರಾಂ ಅವರು ರಕ್ಷಣಾ ಮಂತ್ರಿಯಾಗಿದ್ದರು. ಆಗ ಬಂಗ್ಲಾ ದೇಶ ವಿಭಜನೆಯಾಯಿತು. ಆಗ ಇವರು ಮಾಡಿದ ಸೇವೆ ಶ್ಲಾಘನೀಯ ಎಂದು ಇವರ ಸಾಧನೆಗಳ ಕುರಿತು ಬಹಳ ವಿಚಾರಧಾರೆಗಳನ್ನು ಹೇಳಿದರು.
ಈ ಸಂದರ್ಭದಲ್ಲಿ ವಿದ್ಯಾವತಿ ಅಂಕಲಗಿ ವಕೀಲರು, ಉಸ್ಮಾನ ಪಟೇಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ಎಂ. ಮುಲ್ಲಾ, ವಸಂತ ಹೊನಮೋಡೆ, ದೇಸು ಚವ್ಹಾಣ, ಸಂತೋಷ ಬಾಲಗಾವಿ, ಚಂದ್ರಶೇಖರ ಪಾಸೋಡಿ, ಕೃಷ್ಣಾ ಲಮಾಣಿ, ಅಬೂಬಕರ ಕಂಬಾಗಿ, ತಾಜುದ್ದೀನ ಖಲೀಫಾ, ದಸ್ತಗೀರ ಸಾಲೋಟಗಿ, ಅರುಣ ಗೌಳಿ, ಇರ್ಷಾದ ಆಸಂಗಿ, ದಿಲೀಪ ಪ್ರಭಾಕರ ಹಾಗೂ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.

Share this