1551 ಸುಮಂಗಲಿಯರ ಕುಂಭಮೇಳಕ್ಕೆ ಜಲನಗರ ಸಜ್ಜು! ಆ.19ರಿಂದ ಶ್ರೀ ಜೈ ಸಂತೋಷಿ ಮಾತಾ ಜಾತ್ರಾ ಮಹೋತ್ಸವ; ಯತ್ನಾಳರಿಂದ ಉದ್ಘಾಟನೆ

ಸಪ್ತಸಾಗರ ವಾರ್ತೆ,ವಿಜಯಪುರ, ಆ. 11: ಭಕ್ತಿ, ಸಂಭ್ರಮ, ಸಾಂಸ್ಕೃತಿಕ ವೈಭವದ ಸಂಗಮಕ್ಕೆ ಜಲನಗರ ಸಜ್ಜಾಗಿದೆ. ನಗರದ ಜಲನಗರ ಬಡಾವಣೆಯ ಆರಾಧ್ಯ ದೇವತೆ ಶ್ರೀ ಜೈ ಸಂತೋಷಿ ಮಾತಾ ದೇವಸ್ಥಾನದ 44ನೇ ಜಾತ್ರಾ ಮಹೋತ್ಸವ ಆ.19ರಿಂದ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದ್ದು, 1551 ಸುಮಂಗಲಿಯರ ಭವ್ಯ ಕುಂಭಮೇಳ ಈ ಬಾರಿಯ ಪ್ರಮುಖ ಆಕರ್ಷಣೆಯಾಗಲಿದೆ.
ಆ.19ರಂದು ಸಂಜೆ 6.30ಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದ್ದು, ವಿಜಯಪುರ ನಗರ ಶಾಸಕ ಬಸನಗೌಡ ರಾಮನಗೌಡ ಪಾಟೀಲ (ಯತ್ನಾಳ) ಅವರು ಉದ್ಘಾಟಿಸಲಿದ್ದಾರೆ. ನಂತರ ಸಂಜೆ 7.30ಕ್ಕೆ ರಾಧಾ ಇವೆಂಟ್ಸ್, ಬಾಗಲಕೋಟೆ ಇವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.

ಮೂರು ದಶಕಗಳ ಕನಸು ನನಸಾದ ಕಥೆ

ಜಲನಗರದಲ್ಲಿ ಶ್ರೀ ಜೈ ಸಂತೋಷಿ ಮಾತಾ ದೇವಸ್ಥಾನ ನಿರ್ಮಾಣದ ಹಿಂದೆ ಮೂರು ದಶಕಗಳ ಇತಿಹಾಸವಿದೆ. ಬಡಾವಣೆಯ ನಿರ್ಮಾಣ ಗುತ್ತಿಗೆದಾರರಾಗಿದ್ದ ನಾಗಲಿಂಗಪ್ಪ ಕುಬೇರಪ್ಪ ಹಾವರಗಿ ಅವರು ಸುಮಾರು 30 ವರ್ಷಗಳ ಹಿಂದೆ ಭವ್ಯ ದೇವಸ್ಥಾನ ನಿರ್ಮಿಸುವ ಕನಸು ಕಂಡಿದ್ದರು. ಬಡಾವಣೆಯ ಹಿರಿಯರೊಂದಿಗೆ ಚರ್ಚಿಸಿ ಅವರು ದೇವಸ್ಥಾನ ನಿರ್ಮಾಣಕ್ಕೆ ಮುಂದಾದರು.
1982ರಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕೈಗೊಂಡ ಬಳಿಕ ದೇವಸ್ಥಾನ ಮತ್ತಷ್ಟು ಅಭಿವೃದ್ಧಿಯತ್ತ ಸಾಗಿತು. ನಂತರ ಬಡಾವಣೆಯ ಹಿರಿಯರು ಸೇರಿ ಪ್ರತಿ ಮೂರು ವರ್ಷಕ್ಕೊಮ್ಮೆ ಶ್ರಾವಣ ಮಾಸದ ಎರಡನೇ ಬುಧವಾರ, ಗುರುವಾರ ಹಾಗೂ ಶುಕ್ರವಾರ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸುವ ಪರಂಪರೆಗೆ ಚಾಲನೆ ನೀಡಿದರು.
ತಾಸಬಾವಡಿಯಿಂದ ಕುಂಭ ತಂದು ಕುಂಭಾಭಿಷೇಕ, ಮಹಾಪೂಜೆ ಹಾಗೂ ಅನ್ನಪ್ರಸಾದ ನೆರವೇರಿಸುವ ಸಂಪ್ರದಾಯವೂ ಬೆಳೆದುಬಂದಿತು. ಬಳಿಕ ಇಬ್ರಾಹಿಂಪುರ ಬಡಾವಣೆಯ ಪುರಾತನ ಬಾವಿಯಿಂದ ಕುಂಭ ತಂದು ಜಾತ್ರೆ ನಡೆಸುವ ಪದ್ಧತಿ ಆರಂಭವಾಯಿತು.
ದೇವಸ್ಥಾನಕ್ಕೆ ಹೊಸ ರೂಪ
ಭಕ್ತರು ಹಾಗೂ ಬಡಾವಣೆಯ ಹಿರಿಯರ ಸಹಕಾರದಿಂದ ದೇವಸ್ಥಾನ ಹಲವು ಹಂತಗಳಲ್ಲಿ ಅಭಿವೃದ್ಧಿಗೊಂಡಿದೆ. ಹಳೆಯ ಹನುಮಂತ ದೇವಸ್ಥಾನದ ಬದಲಿಗೆ ಭವ್ಯ ಮಂದಿರ ನಿರ್ಮಿಸಲಾಗಿದೆ. ದೇವಸ್ಥಾನದ ಮಹಾದ್ವಾರ, ಗರ್ಭಗುಡಿ, ಒಳಾಂಗಣ, ಹೊರಾಂಗಣ ಸೇರಿದಂತೆ ಹಲವು ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.
2023ರಲ್ಲಿ ದೇವಿಯ ಗರ್ಭಗುಡಿಯ ಮುಂಭಾಗ ತಾಮ್ರದ ಪ್ರಭಾವಳಿ ನಿರ್ಮಿಸಲಾಗಿದ್ದು, ದೇವಿಗೆ ಕೆ.ಜಿ. ಬೆಳ್ಳಿಯ ಮೂರ್ತಿಯನ್ನೂ ಕಾಣಿಕೆಯಾಗಿ ನೀಡಲಾಗಿದೆ. ದೇವಸ್ಥಾನದ ಸೌಂದರ್ಯವರ್ಧನೆಗೆ ಗ್ರಾನೈಟ್, ಗ್ಲಾಸ್ ಸೇರಿದಂತೆ ವಿವಿಧ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.

20 ಕೆ.ಜಿ. ಬೆಳ್ಳಿ ಪ್ರಭಾವಳಿ ನಿರ್ಮಾಣ

ದೇವಿಗೆ ಸುಮಾರು 20 ಕೆ.ಜಿ. ಬೆಳ್ಳಿಯ ಭವ್ಯ ಪ್ರಭಾವಳಿ ನಿರ್ಮಿಸಲು ದೇವಸ್ಥಾನ ಸಮಿತಿ ನಿರ್ಧರಿಸಿದೆ. ಇದಕ್ಕಾಗಿ ಭಕ್ತರು ಬೆಳ್ಳಿ ಗಟ್ಟಿ ಅಥವಾ ಹಣದ ರೂಪದಲ್ಲಿ ಕಾಣಿಕೆ ನೀಡಿ ಸಹಕರಿಸುವಂತೆ ಸಮಿತಿ ಮನವಿ ಮಾಡಿದೆ.

.21ರಂದು ಅನ್ನಪ್ರಸಾದ

ಜಾತ್ರೆಯ ಅಂಗವಾಗಿ ಆ.21ರಂದು 1551 ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಭಕ್ತರಿಗೆ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿದೆ.
2007ರಲ್ಲಿ 501, 2010ರಲ್ಲಿ 1008, 2013ರಲ್ಲಿ 1501 ಹಾಗೂ 2016, 2019 ಮತ್ತು 2023ರಲ್ಲಿ 1551 ಸುಮಂಗಲಿಯರ ಕುಂಭಮೇಳ ನಡೆದಿತ್ತು. ಇದೀಗ 2026ರಲ್ಲಿಯೂ 1551 ಸುಮಂಗಲಿಯರ ಕುಂಭಮೇಳ ಆಯೋಜಿಸಲಾಗಿದ್ದು, ಜಲನಗರದಲ್ಲಿ ಭಕ್ತಿ ಸಂಭ್ರಮ ಮತ್ತಷ್ಟು ಕಳೆಗಟ್ಟಲಿದೆ.

ಯುವಕರ ಹೆಗಲಿಗೆ ಜಾತ್ರೆಯ ಹೊಣೆ

ಕಳೆದ ಹಲವು ವರ್ಷಗಳಿಂದ ಬಡಾವಣೆಯ ಹಿರಿಯರ ಮಾರ್ಗದರ್ಶನದಲ್ಲಿ ಯುವಕರು ಜಾತ್ರೆಯ ಜವಾಬ್ದಾರಿ ವಹಿಸಿಕೊಂಡು ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ದೇವಸ್ಥಾನದ ಅಭಿವೃದ್ಧಿ, ಜಾತ್ರಾ ವ್ಯವಸ್ಥೆ ಹಾಗೂ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ಸಮಿತಿ ಹಾಗೂ ಯುವಕರ ತಂಡ ನಿರಂತರವಾಗಿ ಶ್ರಮಿಸುತ್ತಿದೆ.
ದೇವಸ್ಥಾನ ಸಮಿತಿಯ ಅಧ್ಯಕ್ಷರಾಗಿ ಕರಬಸಪ್ಪ ಎಸ್. ಅರಕೇರಿ, ಉಪಾಧ್ಯಕ್ಷರಾಗಿ ಸುನೀಲ ಮುಂಡಾಸ, ಗೌರವ ಕಾರ್ಯದರ್ಶಿಯಾಗಿ ನಾನಾಗೌಡ ಬಿರಾದಾರ, ಖಜಾಂಚಿಯಾಗಿ ಸಿದ್ದು ಎಸ್. ಕುಸೂರ ಸೇರಿದಂತೆ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಮಲ್ಲಯ್ಯ ಎ. ಮಠ ಅವರು ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಜಲನಗರದ ಆರಾಧ್ಯ ದೇವತೆಯ ಜಾತ್ರೆಗೆ ಭಕ್ತಸಾಗರ ಹರಿದುಬರುವ ನಿರೀಕ್ಷೆ ಇದ್ದು, ಮೂರು ದಿನಗಳ ಕಾಲ ಜಲನಗರದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಭ್ರಮ ಮನೆ ಮಾಡಲಿದೆ.

Share this