ಸಪ್ತಸಾಗರ ವಾರ್ತೆ,ವಿಜಯಪುರ, ಆ. 8:
ಮಳೆ ಕೈಕೊಟ್ಟು ಮುಂಗಾರು ಬೆಳೆ ಸಂಪೂರ್ಣ ನೆಲಕಚ್ಚಿರುವ ಬೆನ್ನಲ್ಲೇ ವಿಜಯಪುರ ಜಿಲ್ಲೆಯಲ್ಲಿ ರೈತರ ಸಂಕಷ್ಟ ತೀವ್ರಗೊಂಡಿದೆ. ಕೂಡಲೇ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿ ರೈತರ ಸಾಲ ಮನ್ನಾ ಮಾಡಬೇಕು, ಜಾನುವಾರುಗಳಿಗೆ ಮೇವು ಒದಗಿಸಬೇಕು ಹಾಗೂ ಆಲಮಟ್ಟಿ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಡಿಗೇರಿ ಸರ್ಕಾರವನ್ನು ಒತ್ತಾಯಿಸಿದರು.
ನಗರದ ಜೆಡಿಎಸ್ ಕಚೇರಿಯಲ್ಲಿ ನಡೆದ ಪಕ್ಷದ ಮುಖಂಡರು ಹಾಗೂ ತಾಲೂಕು ವೀಕ್ಷಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ರೈತರು ಸಂಕಷ್ಟದಲ್ಲಿರುವಾಗ ಸರ್ಕಾರ ಮೌನ ವಹಿಸುವುದು ಸರಿಯಲ್ಲ. ಬರದ ತೀವ್ರತೆ ಅರಿತು ತಕ್ಷಣ ಪರಿಹಾರ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಮುಂಗಾರು ಬೆಳೆ ಸಂಪೂರ್ಣ ಹಾನಿಗೊಳಗಾಗಿದೆ. ಬಿತ್ತನೆ, ಬೀಜ, ಗೊಬ್ಬರ ಸೇರಿದಂತೆ ಕೃಷಿಗಾಗಿ ಮಾಡಿದ ಖರ್ಚು ರೈತರ ಮೇಲೆ ಸಾಲದ ಹೊರೆಯಾಗಿದೆ. ಬೆಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ರೈತರಿಗೆ ಆರ್ಥಿಕ ನೆರವು ನೀಡುವ ಜತೆಗೆ ಸಾಲಮನ್ನಾ ಘೋಷಿಸಬೇಕು ಎಂದು ಅವರು ಹೇಳಿದರು.
ಜಾನುವಾರುಗಳಿಗೆ ಮೇವು ಕೊರತೆ ಎದುರಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಮೇವು ಬ್ಯಾಂಕ್‌ಗಳು ಮತ್ತು ಗೋಶಾಲೆಗಳನ್ನು ಆರಂಭಿಸಬೇಕು. ಬರಪೀಡಿತ ತಾಲೂಕುಗಳಲ್ಲಿ ಅಗತ್ಯ ಪ್ರಮಾಣದ ಮೇವು ಸಂಗ್ರಹಿಸಿ ರೈತರಿಗೆ ಉಚಿತವಾಗಿ ಅಥವಾ ಸಬ್ಸಿಡಿ ದರದಲ್ಲಿ ಪೂರೈಸಬೇಕು ಎಂದು ಒತ್ತಾಯಿಸಿದರು.
ಆಲಮಟ್ಟಿ ತುಂಬಿದೆ; ರೈತರ ಜಮೀನು ಏಕೆ ಬರ?
ಆಲಮಟ್ಟಿ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಲಭ್ಯವಿರುವ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ರೈತರ ಕಾಲುವೆಗಳಿಗೆ ನೀರು ಹರಿಸುವ ವ್ಯವಸ್ಥೆ ಮಾಡಬೇಕು. ಜಲಾಶಯದಲ್ಲಿ ನೀರಿದ್ದರೂ ರೈತರ ಜಮೀನುಗಳು ಒಣಗಿರುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಯಡಿಗೇರಿ ಸರ್ಕಾರದ ಗಮನ ಸೆಳೆದರು.
ಬರ ಪರಿಸ್ಥಿತಿ ಕುರಿತು ಅಧ್ಯಯನ ನಡೆಸಲು ವಿಳಂಬ ಮಾಡದೆ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗ್ರಾಮಗಳಿಗೆ ತೆರಳಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ವಿಜಯಪುರಕ್ಕೆ ಭೇಟಿ ನೀಡಿ ರೈತರ ಅಹವಾಲು ಆಲಿಸಿ, ಸ್ಥಳದಲ್ಲಿಯೇ ಪರಿಹಾರ ಕ್ರಮಗಳಿಗೆ ಚಾಲನೆ ನೀಡಬೇಕು ಎಂದು ಆಗ್ರಹಿಸಿದರು.
2028ರ ಚುನಾವಣೆ ಮೇಲೆ ಕಣ್ಣು
ಮುಂಬರುವ 2028ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜೆಡಿಎಸ್ ಸಂಘಟನೆ ಬಲಪಡಿಸಲು ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು. ಜಿಲ್ಲೆಯ 13 ತಾಲೂಕು ಘಟಕಗಳನ್ನು ಪುನರ್‌ರಚಿಸಿ, ಪ್ರತಿ ತಾಲೂಕಿಗೆ ವೀಕ್ಷಕರನ್ನು ನೇಮಿಸಲಾಗುವುದು. ತಾಲೂಕು ಮಟ್ಟದಲ್ಲಿ ಪಕ್ಷಕ್ಕಾಗಿ ನಿರಂತರವಾಗಿ ದುಡಿಯುತ್ತಿರುವ ಕ್ರಿಯಾಶೀಲ ಕಾರ್ಯಕರ್ತರನ್ನು ಗುರುತಿಸಿ ಪ್ರಮುಖ ಜವಾಬ್ದಾರಿಗಳನ್ನು ನೀಡಲಾಗುವುದು ಎಂದು ಯಡಿಗೇರಿ ತಿಳಿಸಿದರು.
“ಪಕ್ಷದ ಸಂಘಟನೆ ಗ್ರಾಮಮಟ್ಟದಲ್ಲಿ ಗಟ್ಟಿಯಾಗಬೇಕು. ಕಾರ್ಯಕರ್ತರೇ ಪಕ್ಷದ ಶಕ್ತಿ. ಕ್ರಿಯಾಶೀಲ ಕಾರ್ಯಕರ್ತರಿಗೆ ಅವಕಾಶ ನೀಡಿ 2028ರ ಚುನಾವಣೆಗೆ ಈಗಿನಿಂದಲೇ ಸಜ್ಜಾಗಬೇಕು” ಎಂದು ಮುಖಂಡರಿಗೆ ಕರೆ ನೀಡಿದರು.
ರೈತರ ಪರ 38 ಕಿ.ಮೀ. ಪಾದಯಾತ್ರೆ
ರೈತರ ಸಮಸ್ಯೆಗಳನ್ನು ರಾಜ್ಯ ಸರ್ಕಾರದ ಗಮನಕ್ಕೆ ತರಲು ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಆ.9ರಿಂದ 11ರವರೆಗೆ 38 ಕಿ.ಮೀ. ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಪಾದಯಾತ್ರೆ ಪ್ರೀಡಂ ಪಾರ್ಕ್‌ಗೆ ತಲುಪಿದ ಬಳಿಕ ಬೃಹತ್ ಸಮಾವೇಶ ನಡೆಯಲಿದ್ದು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಪಾಲ್ಗೊಳ್ಳಲಿದ್ದಾರೆ ಎಂದರು.
ವಿಜಯಪುರ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗವಹಿಸಿ ಪಾದಯಾತ್ರೆಗೆ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸೋಮನಗೌಡ ಪಾಟೀಲ ಮನಗೂಳಿ, ಹಿರಿಯ ನಾಯಕ ಪಂಚಪ್ಪ ಕಲಬುರಗಿ, ಮಾಜಿ ಜಿಪಂ ಅಧ್ಯಕ್ಷೆ ಅಪ್ಸರಾಬೇಗಂ ಚಪ್ಪರಬಂದ, ಶ್ರೀಶೈಲಗೌಡ ಪಾಟೀಲ, ಪ್ರಕಾಶ ಹಿರೇಕುರಬರ ಸೇರಿದಂತೆ ಹಲವು ಮುಖಂಡರು ಮಾತನಾಡಿದರು.
ಪ್ರಶಾಂತ ಕಣಗಿ, ಮಹಾದೇವಿ ಪಾಟೀಲ, ಶೈಲಜಾ ಸ್ಥಾವರಮಠ, ಗುರುನಗೌಡ ಪಾಟೀಲ, ಬಿ.ಬಿ. ಪಾಟೀಲ ಮುರಾಳ, ಬಸವರಾಜ ಇಂಚಗೇರಿ, ಬಸವರಾಜ ಹೊನವಾಡ, ಸಿ.ಎಸ್. ಸೋಲಾಪುರ, ಡಾ. ಮಲ್ಲಿಕಾರ್ಜುನ ಶಿರೂರ, ಮಲ್ಲು ತೊರವಿ, ಹುಸೇನ ಬಾಗಾಯತ, ಮುತ್ತುರಾಜ ಜಂಗಮಶೆಟ್ಟಿ, ಸಂಜೀವ ದೊಡಮನಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಎಸ್.ಎಸ್. ಖಾದ್ರಿ ಇನಾಂದಾರ ಸ್ವಾಗತಿಸಿದರು. ರಾಜು ಹಿಪ್ಪರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋಲ್ಲಾಳಪ್ಪಗೌಡ ಪಾಟೀಲ ವಂದಿಸಿದರು.


