ಸಪ್ತಸಾಗರ ವಾರ್ತೆ,ವಿಜಯಪುರ, ಜೂ. 12:
ಕಳೆದ 10 ವರ್ಷಗಳಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಮೇಲ್ಸೇತುವೆ ಸೇರಿ ವಿವಿಧ 3516.67 ಕೋಟಿ ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಮೂಲಕ ಸರ್ವತೋಮುಖ ಅಭಿವೃದ್ಧಿಗೆ ನಾಂದಿ ಹಾಡಲಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ.
ವಿಜಯಪುರದ ರಾಷ್ಟ್ರೀಯ ಹೆದ್ದಾರಿ ವಿಭಾಗದ ವ್ಯಾಪ್ತಿಯಡಿ 4 ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಅಂದಾಜು 1668.88 ಕೋಟಿ ರೂ.ಅನುದಾನದಡಿ ಒಟ್ಟು 208.04 ಕಿಮೀ ಉದ್ದದಷ್ಟು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಇದರಲ್ಲಿ ಎರಡು ರೈಲ್ವೆ ಸೇತುವೆ ಸಹ ಒಳಗೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ರಸ್ತೆ ನಿಧಿ ಯೋಜನೆಯಡಿ 2016-17 ಸಾಲಿನಲ್ಲಿ ಸುಮಾರು 14 ಕಾಮಗಾರಿಗಳು ಮಂಜುರಾಗಿದ್ದು, ಒಟ್ಟು ಉದ್ದ 60 ಕಿಮೀ ಹಾಗೂ ಅದರ ಮೊತ್ತ 72 ಕೋಟಿ ರೂ.ಗಳಷ್ಟಿದೆ. ಇದರಲ್ಲಿ 2 ಸೇತುವೆಗಳನ್ನು ಒಳಗೊಂಡಿದ್ದು ಎಲ್ಲ ಕಾಮಗಾರಿಗಳು ಭೌತಿಕವಾಗಿ ಪೂರ್ಣಗೊಂಡಿರುತ್ತವೆ ಎಂದಿದ್ದಾರೆ.
ಕೇಂದ್ರ ರಸ್ತೆ ಯೋಜನೆಯಡಿ 2023-24 ಸಾಲಿನಲ್ಲಿ ಸುಮಾರು 10 ಕಾಮಗಾರಿಗಳು ಮಂಜುರಾಗಿದ್ದು, ಒಟ್ಟು ಉದ್ದ 81 ಕಿಮೀ ಉದ್ದ ಹಾಗೂ ಅದರ ಮೊತ್ತ 48 ಕೋಟಿ ಇರುತ್ತದೆ. ಕಾಮಗಾರಿಗಳು ಭೌತಿಕವಾಗಿ ಮುಕ್ತಾಯಗೊಂಡಿವೆ ಎಂದು ಹೇಳಿದ್ದಾರೆ.
ಕೇಂದ್ರ ರಸ್ತೆ ಯೋಜನೆಯಡಿ 2025-26 ಸಾಲಿನಲ್ಲಿ ಸುಮಾರು 9 ಕಾಮಗಾರಿಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು ಈಗಾಗಲೇ ಮಂಜೂರಾತಿ ಸಿಕ್ಕಿದೆ. ಒಟ್ಟು ಉದ್ದ 80.76 ಕಿಮೀ ಹಾಗೂ ಅದರ ಮೊತ್ತ 54 ಕೋಟಿ ಇರುತ್ತದೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಒಟ್ಟು 2 ಕಾಮಗಾರಿಗಳು ಕೈಗೊಂಡಿದ್ದು ವಿಜಯಪುರದಿಂದ ಸೊಲ್ಲಾಪುರದವರಗೆ ಹಾಗೂ ಮೋರಟಗಿಯಿಂದ ಆಲಮಟ್ಟಿಯವರಗೆ ಒಟ್ಟು ಉದ್ದ 200 ಕಿಮೀ ಹಾಗೂ ಅದರ ಮೊತ್ತ 1700 ಕೋಟಿಗಳಿದ್ದು, ಕಾಮಗಾರಿಗಳು ಮುಕ್ತಾಯಗೊಂಡಿವೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಒಟ್ಟು 2 ಕಾಮಗಾರಿಗಳ ವಿಜಯಪುರದಿಂದ ಹುಬ್ಬಳ್ಳಿವರೆಗೆ ಹಾಗೂ ವಿಜಯಪುರದಿಂದ ಕಲಬುರಗಿವರೆಗೆ ಅಂದಾಜು 348 ಕಿಮೀ ಹಾಗೂ ಅದರ ವಿಸ್ತೃತ ಯೋಜನಾವರದಿ ತಯಾರಿಸಲು ಸಂಯೋಜಕರನ್ನು ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಗ್ರಾಮಸಡಕ್ ಯೋಜನೆಯಡಿಯಲ್ಲಿ 451.45 ಕಿಮೀ ಉದ್ದ ಹಾಗೂ ಅದರ ಮೊತ್ತ ಕೋಟಿ 27.79 ಕೋಟಿ ಇದ್ದು, ಒಟ್ಟಾರೆ ವಿಜಯಪುರ ಜಿಲ್ಲೆಯಲ್ಲಿ 1000.69 ಕಿಮೀ ರಸ್ತೆ ಹಾಗೂ 2 ರೈಲ್ವೆ-ಮೇಲ್ಸೇತುವೆಗಳನ್ನು, 3516.67 ಕೋಟಿ ರೂ. ಅನುದಾನದಡಿ ಕಾಮಗಾರಿ ಕೈಗೊಳ್ಳಲಾಗಿದೆ. ಇದಷ್ಟೇ ಅಲ್ಲ ಇಂಥ ಅನೇಕ ಬೃಹತ್ ಕಾಮಗಾರಿಗಳು ಹಾಗೂ ಮಹತ್ತರ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಸಂಸದರ ಸಾಧನೆ ಏನು ಎಂದು ಪದೇ ಪದೇ ಪುಕಾರು ಎಬ್ಬಿಸುವವರು, ಗಂಟಲಿಗೆ ತ್ರಾಸ್ ಕೊಟ್ಟುಕೊಳ್ಳುವವರು ಈ ಸಾಧನೆಯನ್ನೊಮ್ಮೆ ಕಣ್ತುಂಬಿಸಿಕೊಳ್ಳಬೇಕಿದೆ ಎಂದು ಅವರು ಪ್ರಕಟಣೆ ಮೂಲಕ ಕುಟುಕಿದ್ದಾರೆ.
ಕಳೆದ 10 ವರ್ಷದ ನನ್ನ ಸಾಧನೆ: ಜಿಗಜಿಣಗಿ ವಿವರಣೆ


