ಸಪ್ತಸಾಗರ ವಾರ್ತೆ, ವಿಜಯಪುರ,ಜೂ.12:
ಸಮಾಜದಲ್ಲಿನ ಅನಿಷ್ಠ ಪಿಡುಗಾಗಿರುವ ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರು ಕೈಜೋಡಿಸಿ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹರೀಶ ಎ. ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಇವರ ಸಹಯೋಗದಲ್ಲಿ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಆಚರಿಸಲಾದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಾಲಕಾರ್ಮಿಕ ಪದ್ಧತಿ ಮತ್ತು ಬಾಲ್ಯ ವಿವಾಹದ ಕುರಿತು ಜನರಲ್ಲಿ ಸೂಕ್ತ ತಿಳುವಳಿಕೆ ಹಾಗೂ ಕಾನೂನಿನ ಜಾಗೃತಿ ಹೊಂದುವುದು ಅಗತ್ಯವಾವಾಗಿದೆ.ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು.ಮಕ್ಕಳ ಹಕ್ಕುಗಳ ಕುರಿತಾಗಿ ಸೂಕ್ತ ಅರಿವು ಮೂಡಿಸಬೇಕು. ಈ ಬಗ್ಗೆ ಜಾಗೃತಿ ಹಾಗೂ ಸಹಕಾರ ನೀಡಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಾ ಸಿದ್ಧವಾಗಿದೆ ಎಂದು ಹೇಳಿದರು.
ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಇರುವ ಕಾನೂನಾತ್ಮಕ ಕ್ರಮಗಳ ಕುರಿತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಅರವಿಂದ ಎಸ್ ಹಾಗರಗಿ ಅವರು ತಿಳಿಸಿದರು.
ಬಾಲಕಾರ್ಮಿಕ ಕಾಯ್ದೆ 1986 ಹಾಗೂ ತಿದ್ದುಪಡಿ ಕಾಯ್ದೆ 2016 ರನ್ವಯ ಪ್ರತಿ ತಿಂಗಳು ವಿವಿಧ ಇಲಾಖೆಗಳ ಅಧಿಕಾರಿಗಳ ತಂಡದೊಂದಿಗೆ ಅನಿರೀಕ್ಷಿತ ದಾಳಿ ಕೈಗೊಂಡು ಮಕ್ಕಳನ್ನು ರಕ್ಷಿಸಿ ಪ್ರಕರಣ ದಾಖಲಿಸಿ ತಪ್ಪಿತಸ್ಥ ಮಾಲೀಕರಿಂದ ಕಾರ್ಪಸ್ ನಿಧಿ ವಸೂಲಿ ಮಾಡಲು ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಬಾಲ ಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಎಲ್ಲ ಇಲಾಖೆಗಳ ಸಹಕಾರದ ಅಗತ್ಯವಿದೆ ಎಂದು ಇಲಾಖೆಯ ಕಾರ್ಯ ವೈಖರಿಯೊಂದಿಗೆ ಬಾಲಕಾರ್ಮಿಕ ಪದ್ಧತಿಯನ್ನು ತೊಡೆದು ಹಾಕಲು ಎಲ್ಲ ಇಲಾಖೆಗಳ ಹಾಗೂ ಸಾರ್ವಜನಿಕರ ಸಹಕಾರದ ಅಗತ್ಯವಿದೆ ಎಂದು ಕಾರ್ಮಿಕ ಅಧಿಕಾರಿ ರಮೇಶ ಎಸ್. ಸುಂಬಡ ಪ್ರಾಸ್ತಾವಿಕ ವಾಗಿ ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ನಿರ್ಮಲಾ ಸುರಪುರ, ಬಾಲಕಾರ್ಮಿಕ ಪದ್ಧತಿ, ಬಾಲ್ಯ ವಿವಾಹದಂತಹ ಪ್ರಕರಣಗಳು ಕಂಡು ಬಂದಲ್ಲಿ 1098 ಕರೆ ಮಾಡಬೇಕು. ಎಲ್ಲಾ ಮಕ್ಕಳು ಶಿಕ್ಷಣ ಪಡೆಯುವುದು ಅವರ ಹಕ್ಕಾಗಿದೆ. ಮಕ್ಕಳಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳು ಎದುರಾದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಬೇಕೆಂದು ಹೇಳಿದರು.
ಬಾಲ ಕಾರ್ಮಿಕ ಪದ್ಧತಿಯ ನಿರ್ಮೂಲನೆಯ ಕುರಿತು ಫಾದರ್ ಸುಮನ್ ಬಾಲು ಅವರು ಉಪನ್ಯಾಸ ನೀಡಿದರು.
ಈ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವೀರಯ್ಯ ಸಾಲಿಮಠ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾ ಕಾಳೆ, ಕಾರ್ಮಿಕ ನಿರೀಕ್ಷಕಿ ಜಗದೇವಿ ಸಜ್ಜನ, ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಮಹಾದೇವಿ ರಾಠೋಡ, ಕಾರ್ಮಿಕ ನಿರೀಕ್ಷಕಿ ಜಗದೇವಿ ಸಜ್ಜನ, ಕಾರ್ಮಿಕ ನಿರೀಕ್ಷಕ ಕುಮಾರ ಮಲ್ಲಿಕಾರ್ಜುನ ಸೇರಿದಂತೆ ಕಾರ್ಮಿಕ ಇಲಾಖೆ, ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಸಿಬ್ಬಂದಿ, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಜಾಥಾ ಕಾರ್ಯಕ್ರಮ
ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಿಂದ ಆರಂಭವಾದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಹರೀಶ.ಎ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಜಾಥಾ ಕಾರ್ಯಕ್ರಮವು ನಟ್ ಬೋಲ್ಟ ಸಾಕು ಶಿಕ್ಷಣ ಬೇಕು, ದುಡಿಮೆ ಬೇಡ ಶಿಕ್ಷಣ ಬೇಕು, ಓದು ಬರಹ ಸಿಗಲಿ ನಕ್ಕು ನಲಿವ ಶಾಲೆ ಇರಲಿ ಎಂದು ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಯ ಘೋಷ ವಾಕ್ಯಗಳೊಂದಿಗೆ ಗಾಂಧಿಚೌಕ ಮಾರ್ಗವಾಗಿ ಬಸವೇಶ್ವರ ವೃತ್ತ, ಡಾ. ಬಿ. ಆರ್. ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಕಂದಗಲ್ ಹನುಮಂತರಾಯ ರಂಗಮಂದಿರಕ್ಕೆ ತಲುಪಲಾಯಿತು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿದ್ದರು.


