ಪತ್ರಕರ್ತರ ಮನೆಗೆ ತೆರಳಿ ಧಮ್ಕಿ: ಅಕ್ಕಿ ಮಾಫಿಯಾ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಸಪ್ತಸಾಗರ ವಾರ್ತೆ,ವಿಜಯಪುರ, ಆ. 27:
ಅಕ್ಕಿ ಕಳ್ಳತನದ ಕುರಿತು ವರದಿ ಮಾಡಿದ್ದ ಹಿರಿಯ ಪತ್ರಕರ್ತ ಪರಶುರಾಮ ಶಿವಶರಣ ಅವರ ಮನೆಗೆ ತೆರಳಿ ಧಮ್ಕಿ ಹಾಕಿ, ಕುಟುಂಬದವರಲ್ಲಿ ಆತಂಕ ಮೂಡಿಸಿದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಕಾನಿಪ ಜಿಲ್ಲಾ ಘಟಕ, ಆಮ್ ಆದ್ಮಿ ಪಕ್ಷ ಹಾಗೂ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಕಾನಿಪ ಸಂಘದ ಜಿಲ್ಲಾಧ್ಯಕ್ಷ ಅಶೋಕ ಯಡಹಳ್ಳಿ ಮಾತನಾಡಿ, “ಪತ್ರಕರ್ತರನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಯಲಾಗುತ್ತದೆ. ಆದರೆ ವಿಜಯಪುರದಲ್ಲಿ ಪತ್ರಕರ್ತರು ನಿರ್ಭೀತಿಯಿಂದ ಕಾರ್ಯನಿರ್ವಹಿಸಲು ಸಾಧ್ಯವಾಗದಂತಹ ವಾತಾವರಣ ನಿರ್ಮಾಣವಾಗುತ್ತಿರುವುದು ಆತಂಕಕಾರಿ” ಎಂದರು.
ಪತ್ರಕರ್ತ ಪರಶುರಾಮ ಶಿವಶರಣ ಅವರು ಅಕ್ಕಿ ಕಳ್ಳತನದ ಕುರಿತು ಮಾಡಿರುವ ವರದಿ ತಪ್ಪಾಗಿದ್ದರೆ ಕಾನೂನುಬದ್ಧವಾಗಿ ಪ್ರಕರಣ ದಾಖಲಿಸಿ ಪ್ರಶ್ನಿಸಲಿ. ಅದನ್ನು ಎದುರಿಸಲು ಸಿದ್ಧರಿದ್ದೇವೆ. ಆದರೆ ಪತ್ರಕರ್ತರ ಮನೆಗೆ ತೆರಳಿ ಧಮ್ಕಿ ಹಾಕುವುದು, ಕುಟುಂಬದವರಲ್ಲಿ ಭಯ ಮೂಡಿಸುವುದು ಹಾಗೂ ಪತ್ರಕರ್ತರಲ್ಲಿ ಆತಂಕ ಸೃಷ್ಟಿಸುವುದು ಖಂಡನೀಯ ಎಂದು ಹೇಳಿದರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಸೂಕ್ತ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾನಿಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ಮಾತನಾಡಿ, ಪತ್ರಕರ್ತರ ಮೇಲೆ ಹಲ್ಲೆಗೆ ಯತ್ನಿಸುವ ಉದ್ದೇಶದಿಂದ ಅವರ ಮನೆಗೆ ತೆರಳಿ ಭಯ ಹುಟ್ಟಿಸಲು ಪ್ರಯತ್ನಿಸಿರುವವರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡಬಾರದು. ಪತ್ರಕರ್ತರು ಸಮಾಜದ ಹಾಗೂ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದ್ದು, ಅನ್ಯಾಯ ಮತ್ತು ಅಕ್ರಮ ಚಟುವಟಿಕೆಗಳ ಕುರಿತು ಸರ್ಕಾರ ಹಾಗೂ ಜನರಿಗೆ ಮಾಹಿತಿ ನೀಡುತ್ತಾರೆ. ಅಂತಹ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನಗಳು ಖಂಡನೀಯ ಎಂದರು.
ಅಖಂಡ ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಹಾಗೂ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಪತ್ರಕರ್ತರ ಮೇಲೆ ದಬ್ಬಾಳಿಕೆ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಪತ್ರಕರ್ತರ ಮನೆಗೆ ತೆರಳಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕುಟುಂಬಕ್ಕೆ ಬೆದರಿಕೆ ಹಾಕಿದ ಆರೋಪಿಗಳನ್ನು ಹಾಗೂ ಅವರಿಗೆ ಬೆಂಬಲ ನೀಡುತ್ತಿರುವವರನ್ನು ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ರಾಷ್ಟ್ರೀಯ ಕಾರ್ಯಕಾರಿಣಿ ಮಂಡಳಿ ಸದಸ್ಯ ಶರಣು ಮಸಳಿ ಮಾತನಾಡಿ, ರಾಜ್ಯದಲ್ಲಿ ಪತ್ರಕರ್ತರ ಮೇಲೆ ಹಲ್ಲೆ ಹಾಗೂ ಬೆದರಿಕೆ ಪ್ರಕರಣಗಳು ನಡೆಯುತ್ತಿವೆ. ಜೀವ ಪಣಕ್ಕಿಟ್ಟು ಸುದ್ದಿ ಮಾಡುವ ಪತ್ರಕರ್ತರಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕು. ಶಿವಶರಣ ಅವರ ಮನೆಗೆ ತೆರಳಿ ಭಯ ಹುಟ್ಟಿಸಲು ಪ್ರಯತ್ನಿಸಿದವರ ವಿರುದ್ಧ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಹಿರಿಯ ವರದಿಗಾರ ಬಸವರಾಜ ಸಂಪಳ್ಳಿ ಮಾತನಾಡಿ, ಅಕ್ಕಿ ಮಾಫಿಯಾದವರು ಜೀವ ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿರುವುದಲ್ಲದೆ ಜಾತಿ ನಿಂದನೆ ಮಾಡಿದ್ದಾರೆ ಎಂಬ ಆರೋಪವೂ ಇದೆ. ಈ ವಿಷಯವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು. ಅಕ್ಕಿ ಅಕ್ರಮದಲ್ಲಿ ಅಧಿಕಾರಿಗಳ ಕೈವಾಡವಿದೆಯೇ ಎಂಬ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಎಎಪಿ ಜಿಲ್ಲಾಧ್ಯಕ್ಷ ಭೋಗೇಶ ಸೊಲಾಪೂರ ಹಾಗೂ ಪತ್ರಕರ್ತ ಪರಶುರಾಮ ಶಿವಶರಣ ಮಾತನಾಡಿದರು.
ಈ ಸಂದರ್ಭದಲ್ಲಿ ಕಾನಿಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮೋಹನ ಕುಲಕರ್ಣಿ, ಜಿಲ್ಲಾ ಉಪಾಧ್ಯಕ್ಷ ಸಮೀರ ಇನಾಮದಾರ, ಜಿಲ್ಲಾ ಕಾರ್ಯದರ್ಶಿಗಳಾದ ಅವಿನಾಶ ಬಿದರಿ, ವಿನೋದ ಸಾರವಾಡ, ಪತ್ರಕರ್ತರಾದ ಗೋಪಾಲ ಕನಿಮನಿ, ಶಿವಾನಂದ ಶಿವಶರಣ, ಗುರುರಾಜ ಗದ್ದನಕೇರಿ, ಷಡಕ್ಷರಿ ಕಂಪಣ್ಣನವರ, ಬಾಬು ತಡಲಗಿ, ಸುನೀಲ ಭಾಸ್ಕರ್, ಮಂಜು ಕಲಾಲ್, ಶರಣು ಮರನೂರ, ಕಲ್ಲು ಶಿವಶರಣ, ಸಂಜೀವ ಕುಲಕರ್ಣಿ, ವೆಂಕಟೇಶ ಭೈರಾಮಡಗಿ, ಫಯಾಜ ಕಲಾದಗಿ, ರಾಜೇಂದ್ರಸಿಂಗ್ ಹಜೇರಿ, ಚಂದ್ರಕಾಂತ ಮಾವುರ, ಸಂತೋಷ, ಸುರೇಶ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Share this