ಭವಿಷ್ಯದ ಬದುಕಿಗೆ ನೀರಿನ ಮಿತ ಬಳಕೆ ಅತ್ಯಗತ್ಯ -ಸಂತೋಷ ಬಂಡೆ

ಸಪ್ತಸಾಗರ ವಾರ್ತೆ,ವಿಜಯಪುರ, ಏ. 28:
ವಿಶ್ವದ ಸಕಲ ಜೀವರಾಶಿಗಳಿಗೆ ನೀರು ಜೀವನಾಧಾರ. ಹೆಚ್ಚಾದ ಜನಸಂಖ್ಯೆ,ನಗರೀಕರಣ,ಜಾಗತಿಕ ತಾಪಮಾನದಿಂದ ಜಲ ಸಂಪನ್ಮೂಲ ಮೇಲೆ ಒತ್ತಡವಿದ್ದು, ನೀರನ್ನು ಮಿತವಾಗಿ ಬಳಸಿ, ಮರುಬಳಕೆ ಮಾಡುವುದು ನಮ್ಮೆಲ್ಲರ ಮುಖ್ಯ ಗುರಿಯಾಗಬೇಕಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಮಂಗಳವಾರ ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಜಲ ಶಕ್ತಿ ಅಭಿಯಾನದಡಿ ಜಲ ಪಖ್ವಾಡ್ ಕಾರ್ಯಕ್ರಮದ ನಿಮಿತ್ತ ಏರ್ಪಡಿಸಿದ್ದ ‘ನೀರು ಭವಿಷ್ಯದ ಬದುಕಿಗೆ ಆಧಾರ’ ಎಂಬ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
“ನೀರು ಉಳಿಸಿ, ಜೀವ ಉಳಿಸಿ” ಎಂಬುದು ಕೇವಲ ಘೋಷಣೆಯಲ್ಲ,ಅದು ಭವಿಷ್ಯದ ಬದುಕಿಗೆ ಅತ್ಯಗತ್ಯ.
ನೀರನ್ನು ಅನಗತ್ಯವಾಗಿ ಪೋಲುಮಾಡದೆ ಹನಿ ಹನಿ ನೀರನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.
ಜನಸಂಖ್ಯೆ ಅನುಸಾರ ಪರಿಶುದ್ಧ ನೀರು ಒದಗಿಸುವದು ಇಂದಿನ ದಿನದಲ್ಲಿ ಸವಾಲಿನ ಕೆಲಸವಾಗಿದ್ದು, ನೀರಿನ ಸುಸ್ಥಿರತೆಗಾಗಿ ಮಳೆ ನೀರಿನ ಪ್ರತಿ ಹನಿಯ ರಕ್ಷಣೆ ಅಗತ್ಯ. ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ನೀರು ವ್ಯರ್ಥ ಆಗುವುದನ್ನು ತಡೆಯುವ ಮೂಲಕ ಜಲ ಸಂರಕ್ಷಣೆಗೆ ಕೈಜೋಡಿಸಬೇಕಿದೆ ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಸುನಂದಾ ಹುಣಶ್ಯಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ನೀರು ಜೀವಕ್ಕೆ ಅತ್ಯಗತ್ಯ. ನೀರಿನ ಕೊರತೆಯು ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಬಾಧಿಸುವ ಒಂದು ತುರ್ತು ಸಮಸ್ಯೆಯಾಗಿದೆ. ನೀರನ್ನು ಉಳಿಸುವುದು ಕೇವಲ ವ್ಯಕ್ತಿಯ ಜವಾಬ್ದಾರಿಯಲ್ಲ, ಬದಲಾಗಿ ಜಾಗತಿಕ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಕ್ಕಳು ನೀರಿನ ಸಂರಕ್ಷಣೆಯ ಕುರಿತು ಭಿತ್ತಿ ಚಿತ್ರಗಳನ್ನು ಪ್ರದರ್ಶಿಸಿ,ಪ್ರತಿದಿನ ಕನಿಷ್ಠ 1 ಲೀ. ನೀರನ್ನು ಉಳಿಸಲು ಸಂಕಲ್ಪ ಮಾಡಿದರು. ಶಿಕ್ಷಕರಾದ ಸಂಗೀತಾ ಅಂಕಲಗಿ, ರೇಣುಕಾ ಭಜಂತ್ರಿ, ವೀರೇಶ ಹುಣಶ್ಯಾಳ ಸೇರಿದಂತೆ ಮಕ್ಕಳು ಭಾಗವಹಿಸಿದ್ದರು.
ಮಳೆನೀರು ಕೊಯ್ಲು, ಸ್ಮಾರ್ಟ್ ನೀರಾವರಿ, ತ್ಯಾಜ್ಯನೀರು ಸಂಸ್ಕರಣೆ, ಸಮುದಾಯ ಜಾಗೃತಿಯ ಮೂಲಕ ನೀರನ್ನು ಮಿತವಾಗಿ ಬಳಸುವುದು ಇಂದಿನ ಅಗತ್ಯವಾಗಿದೆ.

Share this