ಸಪ್ತ ಸಾಗರ ವಾರ್ತೆ ವಿಜಯಪುರ,ಅ. 16:
ಭಾರತೀಯ ಸಂಸ್ಕೃತಿ, ಸಂಸ್ಕಾರಗಳ ಮಹತ್ವ ಸಾರಿ, ಸಾವಯವ ಕೃಷಿಗೆ ಒತ್ತು ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕನ್ಹೇರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗಳ ವಿಜಯಪುರ ಜಿಲ್ಲಾ ಪ್ರವೇಶ ನಿರ್ಬಂಧಿಸಿರುವ ಕ್ರಮ ಖಂಡನೀಯ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸರ್ಕಾರ ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹೇರಿ ಶ್ರೀಗಳ ಜಿಲ್ಲಾ ನಿಷೇಧ ಹೇರುವ ಮೂಲಕ ರಾಜ್ಯ ಸರ್ಕಾರ ತನ್ನ ಕುಟೀಲ ನೀತಿಯನ್ನು ಪ್ರಯೋಗಿಸಿದೆ. ಮುಖ್ಯಮಂತ್ರಿಗಳ ಕೃಪಾ ಪೋಷಿತ ಮಂಡಳಿ ಎಂಬ ಸತ್ಯವನ್ನು ಶ್ರೀಗಳು ಹೇಳಿದ್ದಾರೆ. ಇದನ್ನು ಅರಗಿಸಿಕೊಳ್ಳಲಾಗದ ರಾಜ್ಯ ಸರ್ಕಾರ ಶ್ರೀಗಳ ಮೇಲೆ ಈ ರೀತಿ ವಿಜಯಪುರ ಜಿಲ್ಲಾ ಪ್ರವೇಶದ ಮೇಲಿನ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ. ಆದರೆ ಶ್ರೀಗಳು ಇದರಿಂದ ಹೆದರುವುದಿಲ್ಲ, ಶ್ರೀಗಳ ಜೊತೆ ನಾವೆಲ್ಲರೂ ಇದ್ದೇವೆ.
ಕನ್ಹೇರಿ ಶ್ರೀಗಳ ವ್ಯಕ್ತಿತ್ವ ಶ್ರೇಷ್ಠ, ಅಧ್ಯಾತ್ಮಿಕ ಮನೋಭಾವನೆ, ಸಂಸ್ಕಾರಗಳ ಪ್ರಸಾರ, ಸಾವಯವ ಕೃಷಿ ಮೂಲಕ ರೈತ ಕಲ್ಯಾಣ ಹಾಗೂ ಪ್ರತಿಯೊಬ್ಬರ ಆರೋಗ್ಯ ಕಲ್ಯಾಣ ಕಾಳಜಿಯುಳ್ಳ ಶ್ರೀಗಳ ಕೊಡುಗೆ ದೊಡ್ಡದು, ಸತ್ಯವನ್ನು ನೇರವಾಗಿ ಮಾತನಾಡುವ, ಅನ್ಯಾಯವನ್ನು ವಿರೋಧಿಸುವ ಹೋರಾಟ ಮನೋಭಾವ ಶ್ರೀಗಳಲ್ಲಿದೆ. ಈ ಹಿಂದೆ ವಕ್ಫ್ ಮಂಡಳಿ ಅಮಾಯಕ ರೈತರ ಜಮೀನುಗಳು ಕಬಳಿಸಲು ಮುಂದಾದಾಗ ಅದನ್ನು ಶ್ರೀಗಳು ರೈತರ ಧ್ವನಿಯಾಗಿ ಖಂಡಿಸಿದ್ದರು. ಇದು ಸಹ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಅರಗಿಸಿಕೊಳ್ಳಲಾಗದ ತುತ್ತಾಗಿತ್ತು.
ಸಮಾಜದಲ್ಲಿ ಒಡಕು ಮೂಡಿಸುವ ಶಕ್ತಿಗಳಿಗೆ ಹಾಗೂ ನಮ್ಮ ದೇವಾನುದೇವತೆಗಳಿಗೆ ಅಪಮಾನ ಮಾಡುವವರ ವಿರುದ್ದ ಅವರು ಗುಡುಗಿದ್ದಾರೆ. ಯಾರ ವಿರುದ್ದವೂ ಮಾತನಾಡಿಲ್ಲ. ನಮ್ಮ ದೇವಾನುದೇವತೆಗಳಿಗೆ ಅಪಮಾನ ಮಾಡುವುದನ್ನು ಸಹಿಸಿಕೊಳ್ಳಬೇಕೆ? ಲಿಂಗಾಯತ ವೀರಶೈವ ಎಂದು ಬೇಧ ಮೂಡಿಸಿ ದ್ವೇಷ ಮೂಡಿಸುತ್ತಿರುವವರ ವಿರುದ್ಧ ಶ್ರೀಗಳು ಖಂಡನೆ ಮಾಡಿದ್ದಾರೆ. ದೇವರೇ ಇಲ್ಲ, ಗುಡಿಗೆ ಹೋಗಬೇಡಿ ಎಂದು ಹೇಳಿ ನಮ್ಮ ಧಾರ್ಮಿಕ ಭಾವನೆಗಳಿಗೆ ನೋವು ತರಿಸುವ ಮಾತುಗಳು ಆಡಿದವರ ವಿರುದ್ದ ಕ್ರಮವೇಕಿಲ್ಲ? ಹಿಂದೂಗಳ ಬಗ್ಗೆ, ಹಿಂದೂ ದೇವತೆಗಳ ಬಗ್ಗೆ ಮಾತನಾಡಿದರನ್ನು ಖಂಡಿಸುವ ಕಾರ್ಯವೂ ಮಾಡಬಾರದೇ? ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ದಿನದಿಂದಲೇ ಈ ರೀತಿ ಹಿಂದೂ ದಮನಕಾರಿ ನೀತಿ, ಮಠಾಧೀಶರಿಗೆ ಅಗೌರವ ತೋರುವ ಕಾರ್ಯ ನಡೆಯುತ್ತಿದೆ. ಸರ್ಕಾರ ಕೂಡಲೇ ಈ ಆದೇಶ ಹಿಂಪಡೆಯುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಇಲ್ಲವಾದರೆ ಸರ್ಕಾರದ ವಿರುದ್ಧ ಬೃಹತ್ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಕನ್ಹೇರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗಳ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಖಂಡಿಸಿ ಕಾರಜೋಳ ಆಕ್ರೋಶ


