ಸಪ್ತಸಾಗರ ವಾರ್ತೆ,ವಿಜಯಪುರ, ಆ. 18:
ಛಾಯಾಗ್ರಾಹಕರು ಇಂದು ಬಹಳ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಸರ್ಕಾರ ಛಾಯಾಗ್ರಹಣ ಅಕಾಡೆಮಿ ಪ್ರಾರಂಭ ಮಾಡಿ ಛಾಯಾಗ್ರಾಹಕರ ತೊಂದರೆಗಳನ್ನು ನಿವಾರಿಸಬೇಕು ಎಂದು ಯುವ ಭಾರತ ಸಮಿತಿ ಅಧ್ಯಕ್ಷ ಹಾಗೂ ಹವ್ಯಾಸಿ ಛಾಯಾಗ್ರಾಹಕ ಉಮೇಶ ಕಾರಜೋಳ ಹೇಳಿದರು.
ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘ ಹಾಗೂ ಕರ್ನಾಟಕ ರಾಜ್ಯ ಛಾಯಾಚಿತ್ರಗ್ರಾಹಕರ ಸಂಘದ ಸಹಯೋಗದಲ್ಲಿ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಏರ್ಪಡಿಸಿದ ವಿಶ್ವ ಛಾಯಾಗ್ರಹಣ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಛಾಯಾಗ್ರಹಣ ಅಕಾಡೆಮಿಯಿಂದ ಛಾಯಾಗ್ರಾಹಕರಿಗೆ ಹೆಚ್ಚಿನ ಜ್ಞಾನ ವಿಸ್ತರಿಸಿಕೊಳ್ಳಲು ಮತ್ತು ಸರ್ಕಾರದ ಸವಲತ್ತುಗಳನ್ನು ಪಡೆಯಲು ಅನುಕೂಲವಾಗುತ್ತದೆ. ಎಲ್ಲರಿಗೂ ಸಿಗುವ ಹಾಗೆ ಸರ್ಕಾರದ ಎಲ್ಲಾ ಸವಲತ್ತುಗಳು ಛಾಯಾಗ್ರಾಹಕರಿಗೆ ಸಿಗುವಂತಾಗಲಿ. ಇವತ್ತು ಛಾಯಾಗ್ರಹಣ ಕ್ಷೇತ್ರ ಅತ್ಯಂತ ಕ್ರಿಯಾಶೀಲವಾಗಿದೆ. ಈ ಕ್ಷೇತ್ರದಲ್ಲಿ ಎಲ್ಲರೂ ಆನಂದದ ಜೀವನ ನಡೆಸುವಂತಾಗಲಿ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಖ್ಯಾತ ವಾಗ್ಮಿಗಳು, ಅಂಕಣಕಾರ, ಚಕ್ರವರ್ತಿ ಸೂಲಿಬೆಲೆ ಅವರು ಮಾತನಾಡಿ,
ಒಂದು ಚಿತ್ರ ಸಾವಿರ ಕಥೆ ಹೇಳುವ ಸಾಮರ್ಥ್ಯ ಹೊಂದಿದೆ. ಅದರಲ್ಲೂ ಛಾಯಾಗ್ರಹಣ ಐತಿಹಾಸಿಕ ದಾಖಲೆ ಸೃಷ್ಟಿಸುವ, ದಾಖಲಿಸುವ ಒಂದು ಅದ್ಭುತ ಮಾಧ್ಯಮ ಎಂದು ಅವರು ತಿಳಿಸಿದರು.
ಒಬ್ಬ ಛಾಯಾಗ್ರಹಕ ಒಂದು ಅತ್ಯುತ್ತಮ ದೃಶ್ಯವನ್ನು ಸೆರೆಹಿಡಿಯಲು ತನ್ನ ಸಾಮರ್ಥ್ಯವನ್ನು ಮೀರಿ ಅವಕಾಶಕ್ಕಾಗಿ ಕಾಯುತ್ತಿರುತ್ತಾನೆ. ನೆರಳು ಬೆಳಕಿನ ಸರಿಯಾದ ಅವಕಾಶಕ್ಕಾಗಿ ದಿನಗಟ್ಟಲೆ ಗಂಟೆಗಟ್ಟಲೆ ಕಾಯುವ ಮತ್ತು ನಂತರ ಸೆರೆಸಿಕ್ಕ ಛಾಯಾಚಿತ್ರವನ್ನು ನೋಡಿ ತನ್ನಷ್ಟಕ್ಕೆ ತಾನೇ ಖುಷಿಪಟ್ಟು ಜಗತ್ತಿಗೆ ಅದನ್ನು ತೋರಿಸುತ್ತಾನೆ. ಇದರ ಜೊತೆಗೆ ಹಲವಾರು ಐತಿಹಾಸಿಕ ಘಟನೆಗಳನ್ನು ಛಾಯಾಗ್ರಹಕರು ತಮ್ಮ ಜೀವದ ಹಂಗು ತೊರೆದು ಆ ಕ್ಷಣವನ್ನು ಸೆರೆ ಹಿಡಿದು ಜಗತ್ತಿನ ಮನೆ ಮಾತಾಗಿದ್ದಾರೆ. ಇತಿಹಾಸದ ಸಾಕ್ಷಿಪ್ರಜ್ಞೆ ಆಗಿದ್ದಾರೆ. ಇವತ್ತಿನ ದಿನಗಳಲ್ಲಿ ಎಲ್ಲರೂ ಛಾಯಾಗ್ರಹಕರೇ ಕಾರಣ ಎಲ್ಲರ ಕೈಯಲ್ಲೂ ಮೊಬೈಲ್ ಇದ್ದೇ ಇದೆ. ಅದನ್ನು ಸರಿಯಾಗಿ ಉಪಯೋಗಿಸಿದರೆ ಮೊಬೈಲ್ ನಲ್ಲಿಯೂ ಅದ್ಭುತವಾದ ಚಿತ್ರಗಳನ್ನು ಸೆರೆ ಹಿಡಿಯಬಹುದು. ಅದಕ್ಕೆ ಸಮಯಾವಕಾಶ ಹಾಗೂ ಶೃದ್ದೆ ಬಹಳ ಮುಖ್ಯವಾಗುತ್ತದೆ ಎಂದರು.
ಜಗತ್ತಿನ ಎಲ್ಲ ಛಾಯಾಗ್ರಾಹಕರು ಇವತ್ತು ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಆಚರಣೆ ಮಾಡುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ವಿಜಯಪುರ ಜಿಲ್ಲಾ ನೂತನ ಛಾಯಾಗ್ರಹಾಕರ ಸಂಘ ತನ್ನ ಜಿಲ್ಲೆಯ ಹಿರಿಯ ಛಾಯಾಗ್ರಾಹಕರಿಗೆ ಗೌರವಿಸುವ ಮೂಲಕ, ಅವರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಛಾಯಾಗ್ರಹಣ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ಛಾಯಾಗ್ರಾಹಕರ ಸಂಘದ ನಿರ್ದೇಶಕ ನಾಗರಾಜ್ ಟಿ.ಸಿ. ಮಾತನಾಡಿ, ಸರ್ಕಾರ ಛಾಯಾಗ್ರಾಹಕರನ್ನು ಕಾರ್ಮಿಕ ಇಲಾಖೆಯಲ್ಲಿ ಸೇರಿಸಿದ್ದಾರೆ. ಆದರೆ ಕಟ್ಟಡ ಕಾರ್ಮಿಕರಿಗೆ ಸಿಗುವ ಎಲ್ಲ ಸವಲತ್ತುಗಳು ಛಾಯಾಗ್ರಾಹಕರಿಗೂ ಸಿಗುವಂತೆ ಅವಕಾಶ ಮಾಡಿ ಛಾಯಾಗ್ರಾಹಕರ ಬದುಕನ್ನು ಉಜ್ವಲಗೊಳಿಸಬೇಕೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇನ್ನೋರ್ವ ಅತಿಥಿ ಯುವ ಮುಖಂಡ ಶ್ರೀಶೈಲಗೌಡ ಬಿರಾದಾರ (ಮಾಗಣಗೇರಿ) ಮಾತನಾಡಿ, ಇವತ್ತು ಒಂದಿಲ್ಲ ಒಂದು ಸಂದರ್ಭದಲ್ಲಿ ಎಲ್ಲರೂ ಛಾಯಾಗ್ರಹಕರೇ. ಆದರೆ ನಿಜವಾದ ವೃತ್ತಿನಿರತ ಛಾಯಾಗ್ರಾಹಕರಿಗೆ ಅನುಕೂಲ ಮಾಡಿಕೊಡಲು ಎಲ್ಲ ರೀತಿಯಿಂದಲೂ ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಎಸ್.ಬಿ. ವಿಸ್ಡಮ್ ಅಕಾಡೆಮಿಯ ಸಂಸ್ಥಾಪಕ ಶರಣಯ್ಯ ಭಂಡಾರಿಮಠ ಮಾತನಾಡಿದರು.
ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ರಮೇಶ ಚವ್ಹಾಣ ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಛಾಯಾಗ್ರಾಹಕರಾದ ವಿಜಯಪುರದ ಗುರುರಾಜ ಬಿದರಿ, ಪ್ರಕಾಶ ಹಿಪ್ಪರಗಿ, ವಿಶ್ವೇಶ್ವರಯ್ಯ ಮಠಪತಿ, ಕೊಲ್ಹಾರದ ಹನಮಂತ ಹೂಗಾರ, ಬಸವನ ಬಾಗೇವಾಡಿಯ ಅಶೋಕ ತೆಗ್ಗಳ್ಳಿ, ಚಡಚಣದ ರಾಜಶೇಖರ ಡೋಣಜ, ನಿಡೋಣಿಯ ನೇಮಿನಾಥ ನೇಜ, ತಿಕೋಟಾದ ಭೀಮಪ್ಪ ಬಸರಗಿ ಅವರನ್ನು ಸನ್ಮಾನಿಸಿ ಗೌರವಿಸಿದರು. ಎಸ್.ಎಸ್.ಎಲ್.ಸಿ ಯಲ್ಲಿ ಹೆಚ್ಚು ಅಂಕ ಪಡೆದ ಮಂಜುನಾಥ ಸಂಗಮೇಶ ಬಿರಾದಾರ, ಪಿ.ಯು.ಸಿ ಯಲ್ಲಿ ಹೆಚ್ಚು ಅಂಕ ಪಡೆದ ಕೌಶಿಕ ಹಿರೇಮಠ, ಆಕಾಶ ಮಠಪತಿ, ಅಭಿಷೇಕ ರಾಠೋಡ ಮುಂತಾದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ಮಾಡಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ ಪ್ರಶಾಂತ ಪಟ್ಟಣಶಟ್ಟಿ, ಸುರೇಶ ರಾಠೋಡ, ಸತೀಶ ಕಲಾಲ, ರಾಜುಸಿಂಗ ರಜಪೂತ, ಗುರುಬಾಳಪ್ಪ ಗಲಗಲಿ, ಮಲ್ಲಿಕಾರ್ಜುನ ಪಾರ್ವತಿ, ಪವನ ಅಂಗಡಿ, ಮಹೇಶ ಕುಂಬಾರ, ವಿನೋದ ಮಣ್ಣೂರ, ವಿದ್ಯಾಧರ ಸಾಲಿ, ಛಾಯಾಗ್ರಾಹಕರಾದ ಸಂಗಯ್ಯಾ ಮಠಪತಿ, ಮಹೇಶ ಪಾಟೀಲ್, ಸಂಜಯ ರೇವೆ, ಶಿವರಾಜ ಕುಂಟೋಜಿ, ರವಿ ತಾಳಿಕೋಟಿ, ಶಶಿಕುಮಾರ ಕುಂಬಾರ, ಸುಭಾಸ ಪವಾರ, ಸಂಗಮೇಶ ಬಿರಾದಾರ, ಚಂದ್ರಕಾಂತ ವಡ್ಡರ, ಸುನೀಲ ಬಿರಾದಾರ, ಸುರೇಶ ಗಲ್ಪಿ, ಬಾಳು ಕುಲರ್ಕಣಿ, ಮಲ್ಲು ಚಕ್ರವರ್ತಿ, ಸುನೀಲ ಭೈರವಾಡಗಿ, ವಿಜಯ ಮೈದರಗಿ, ಗೌಡಪ್ಪ ಬಿರಾದಾರ, ವಿರೇಶ ಗಬ್ಬೂರ, ಸಹಿತ ಎಲ್ಲ ಛಾಯಾಗ್ರಾಹಕರು ಉಪಸ್ಥತರಿದ್ದರು.
ಛಾಯಾಗ್ರಾಹಕರ ಉತ್ತೇಜನಕ್ಕೆ ಛಾಯಾಗ್ರಹಣ ಅಕಾಡೆಮಿ ಸ್ಥಾಪಿಸಲು ಕಾರಜೋಳ ಒತ್ತಾಯ
